ಮಸ್ಕಿ: ಮತ್ತೆ ಕುಡಿಯುವ ನೀರಿಗೆ ಪರದಾಟ
ಮಸ್ಕಿ: ಕುಡಿಯುವ ನೀರು ಪೂರೈಕೆ ಮಾಡುವ ಕಿರುನೀರು ಸರಬರಾಜು ಯೋಜನೆಗಳ ಕೊಳವೆಬಾವಿಗಳಲ್ಲಿನ ಅಂತರ್ಜಲ ಕುಸಿದಿದೆ. ನೀರು ಪೂರೈಕೆ ಮಾಡುವ ಇನ್ನೊಂದು ಜಲಮೂಲವಾದ ಹಳ್ಳ ಸಂಪೂರ್ಣ ಬತ್ತಿ ಹೋಗಿದ್ದು ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
9, 10, 12ನೆಯ ವಾರ್ಡ್ಗಳಲ್ಲಿ ಕುಡಿಯಲು ನೀರು ಪೂರೈಕೆ ಸ್ಥಗಿತಗೊಂಡು 5-6 ದಿನಗಳು ಕಳೆದಿದೆ. ಇಲ್ಲಿಯ ನಾಗರಿಕರು ಹನಿ ನೀರಿಗೂ ಪರದಾಡುವಂತಾಗಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಈ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮುಂದಾಗಿದೆ.
ಕಳೆದ 5 ದಿನಗಳಿಂದ ಟ್ಯಾಂಕರ್ ಮೂಲಕ ಕುಡಿಯಲು ನೀರು ಪೂರೈಕೆ ಮಾಡುವ ವ್ಯವಸ್ಥೆಯನ್ನು ಪಂಚಾಯಿತಿ ಆಡಳಿತ ಮಂಡಳಿ ಕಲ್ಪಿಸಿದ್ದರೂ ಇನ್ನೂ ಈ ಬಡಾವಣೆಗಳಲ್ಲಿ ನೀರಿನ ದಾಹ ತೀರುತ್ತಿಲ್ಲ.
ಕುಡಿಯುವ ನೀರಿನ ಸಲುವಾಗಿ ಎಡದಂಡೆ ಕಾಲುವೆಯಲ್ಲಿ ನೀರು ಬಿಟ್ಟಿದ್ದರಿಂದ ಸ್ವಲ್ಪಮಟ್ಟಿಗೆ ನೀರಿನ ಸಮಸ್ಯೆ ಕಡಿಮೆ ಆಗಿತ್ತು. ಇದೀಗ ಕಾಲುವೆಯಲ್ಲಿ ನೀರು ಸ್ಥಗಿತಗೊಳಿಸಲಾಗಿದೆ. ಇದರಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದರಿಂದ ನೀರು ಪೂರೈಕೆ ಮಾಡಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ದೊಡ್ಡ ಸಮಸ್ಯೆ ಉಂಟಾಗಿದೆ.
ಬಡಾವಣೆಗಳಲ್ಲಿ ಕುಡಿಯುವ ನೀರು ತುಂಬಿಕೊಂಡು ಟ್ಯಾಂಕ್ಗಳು ಹೋದರೆ ಸಾಕು ಮಹಿಳೆಯರು ಮುತ್ತಿಗೆ ಬೀಳುತ್ತಾರೆ. ನೀರು ಪಡೆಯುವ ಸಂಬಂಧ ಮಹಿಳೆಯರ ನಡುವೆ ಘರ್ಷಣೆಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ.
ಇನ್ನೂ ಇಲ್ಲಿಯ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಬಹುತೇಕ ನಿಲಯಗಳಿಗೆ ಟ್ಯಾಂಕರ್ ಮೂಲಕವೇ ನೀರು ಪೂರೈಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ನೀರು ಇಲ್ಲದ ಕಾರಣ ತೊಂದರೆ ಅನುಭವಿಸುವಂತಾಗಿದೆ.
ಪರ್ಯಾಯ ವ್ಯವಸ್ಥೆ: ಕುಡಿಯುವ ನೀರು ಪೂರೈಕೆ ಸಂಬಂಧ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ಕೊಳವೆಬಾವಿಯಿಂದ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಂಡಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಮಲ್ಲಯ್ಯ ತಿಳಿಸಿದ್ದಾರೆ. ಈಗಾಗಲೇ ಪೈಪ್ಲೈನ್ ಕೆಲಸ ಆರಂಭಗೊಂಡಿದ್ದು, ಆದಷ್ಟು ಬೇಗ ನೀರು ಪೂರೈಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.