ಬುಧವಾರ, ನವೆಂಬರ್ 13, 2019
23 °C
ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ದೂರು

ಮಸ್ತಿಗಾಗಿ ಮತ್ತೊಬ್ಬರ ಹೆಸರಲ್ಲಿ ಫೇಸ್‌ಬುಕ್ ಖಾತೆ?

Published:
Updated:

ಬೆಂಗಳೂರು: ಯುವಕನೊಬ್ಬ ತಮ್ಮ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು, ಆ ಖಾತೆಯ ಮೂಲಕ ಯುವತಿಯರಿಗೆ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾನೆ ಎಂದು ಆರೋಪಿಸಿ ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಗರ ಸೈಬರ್ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ.`ನಗರದ ಯುವಕನೊಬ್ಬ ನನ್ನ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು ಯುವತಿಯರಿಗೆ ಅಸಭ್ಯ ಸಂದೇಶಗಳನ್ನು ಕಳಿಸುತ್ತಿರುವ ವಿಷಯ ಇತ್ತೀಚೆಗೆ ನನ್ನ ಗಮನಕ್ಕೆ ಬಂತು. ಆತ ಏಳು ತಿಂಗಳಿನಿಂದ ಯುವತಿಯರಿಗೆ ಅಸಭ್ಯ ಸಂದೇಶಗಳನ್ನು ಕಳಿಸುತ್ತಿರುವ ವಿಷಯ ಈಗ ಗೊತ್ತಾಗಿದೆ. ಆರೋಪಿಯನ್ನು ಪತ್ತೆಹಚ್ಚಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸರಿಗೆ ಶನಿವಾರ (ಏ.6) ದೂರು ನೀಡಿದ್ದೇನೆ' ಎಂದು ರಾಕ್‌ಲೈನ್ ವೆಂಕಟೇಶ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.`ಆ ಯುವಕ ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂಬ ಅನುಮಾನವಿದೆ. ಆತ ನನ್ನ ಹೆಸರಿನ ಫೇಸ್‌ಬುಕ್ ಖಾತೆಯ ಮೂಲಕ ಸುಂದರ ಯುವತಿಯರನ್ನು ಫೇಸ್‌ಬುಕ್‌ನ ಸ್ನೇಹಿತರ ಬಳಗಕ್ಕೆ ಸೇರಿಸಿಕೊಂಡು ನಂತರ, ಆ ಯುವತಿಯರಿಗೆ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದ ಎಂಬುದು ಗೊತ್ತಾಯಿತು. ಇತ್ತೀಚೆಗೆ ಯುವತಿಯೊಬ್ಬರು ನನಗೆ ದೂರವಾಣಿ ಕರೆ ಮಾಡಿ ಈ ವಿಷಯವನ್ನು ತಿಳಿಸಿದರು. ಈ ಬಗ್ಗೆ ತಪಾಸಣೆ ನಡೆಸಿದಾಗ ನನ್ನ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದಿರುವುದು ತಿಳಿಯಿತು' ಎಂದು ಅವರು ತಿಳಿಸಿದ್ದಾರೆ.`ರಾಕ್‌ಲೈನ್ ವೆಂಕಟೇಶ್ ಅವರ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದ ವ್ಯಕ್ತಿ ಯಾರೆಂಬುದು ಇನ್ನೂ ಗೊತ್ತಾಗಿಲ್ಲ. ದೂರು ಸ್ವೀಕರಿಸಿ ತನಿಖೆ ನಡೆಸಲಾಗುತ್ತಿದೆ' ಎಂದು ನಗರ ಸೈಬರ್ ಅಪರಾಧ ವಿಭಾಗದ ಎಸ್‌ಪಿ ಮಹೇಶ್ ತಿಳಿಸಿದರು.

ಪ್ರತಿಕ್ರಿಯಿಸಿ (+)