ಮಸ್ತ್ ಮೈದಾನ

7

ಮಸ್ತ್ ಮೈದಾನ

Published:
Updated:
ಮಸ್ತ್ ಮೈದಾನ

ಸುತ್ತಲೂ ಸಾಲು ಸಾಲು  ಮರಗಳು. ಎತ್ತ ಕಣ್ಣು ಹರಿಸಿದರೂ ಹಸಿರು. ಎತ್ತರಿಸಿದ ಮಣ್ಣಿನ ದಿಣ್ಣೆ. ಅಂಗಳದಂತೆಯೇ ಅದಕ್ಕೂ ಹುಲ್ಲು ಹಾಸಿನ ಹೊದಿಕೆ. ಅಂಥ ಸೊಬಗಿನ ನಡುವೆ ಚೆಂದದ ಆಟ. ನೋಡಿದವರಿಗೆ ಆನಂದ. ಪ್ರಕೃತಿಯ ಮಡಿಲಲ್ಲಿ ಆಡಿದ ಸಂತಸ ಕ್ರೀಡಾಪಟುಗಳಿಗೆ. ಆ ಸಂಭ್ರಮ ನೋಡಿದ ತೃಪ್ತಿ ಪ್ರೇಕ್ಷಕರಿಗೆ. ಇಂಥದೊಂದು ಸಂತೃಪ್ತಿಯ ಭಾವ ಮೂಡುವುದು ಬಿಜಿಎಸ್ ಕ್ರೀಡಾಂಗಣದಲ್ಲಿ.ಸಂಜೆ ಹೊತ್ತಿನಲ್ಲಂತೂ ಪ್ರಶಾಂತ ವಾತಾವರಣ. ಅಂಗಳದಲ್ಲಿ ಅಭ್ಯಾಸ ಮಾಡುವ ಮಕ್ಕಳು ಹಾಗೂ ಯುವಕರನ್ನು ನೋಡುತ್ತಾ ಕುಳಿತರೆ ಹೊತ್ತು ಉರುಳಿದ್ದೂ ಗೊತ್ತಾಗದು. ಭಾನು ಭುವಿಯ ಅಂಚಿಗೆ ಮುತ್ತಿಡುವ ಹೊತ್ತಿನಲ್ಲಿ ಪ್ರಕೃತಿಯ ಕ್ಯಾನ್ವಾಸ್ ಮೇಲೆ ಮೂಡುವ ಚಿತ್ರವಂತೂ ಕಣ್ಣಿಗೆ ಹಿತ.ತಣ್ಣಗೆ ಬೀಸುವ ತಿಳಿಗಾಳಿಗೆ ಮೈಯೊಡ್ಡಿದಾಗ ಮೈಮನಸ್ಸು ಹಗುರ. ಆದ್ದರಿಂದಲೇ ಇಲ್ಲಿ ಆಟ ಆಡಲೂ, ನೋಡಲೂ ಎಲ್ಲರಿಗೂ ಇಷ್ಟ.ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ನಡೆಸುವ ಗುಣಮಟ್ಟದ ಪಿಚ್‌ಗಳೂ ಇಲ್ಲಿರುವ ಕಾರಣ ಕ್ರಿಕೆಟ್ ಅಬ್ಬರ ಇಲ್ಲಿ ಜೋರು.ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೂ ಇಲ್ಲಿ ತನ್ನ ಲೀಗ್ ಪಂದ್ಯಗಳನ್ನು ನಡೆಸುತ್ತಾ ಬಂದಿದೆ. ಐದು ಸಾವಿರ ಮಂದಿ ಕುಳಿತುಕೊಳ್ಳಲು ಸಾಧ್ಯವಿರುವಂಥ ಗ್ಯಾಲರಿಯೂ ಇದೆ. ಆದರೆ ಹೆಚ್ಚಿನ ಪ್ರೇಕ್ಷಕರು ಪಕ್ಕದ ಹಸಿರು ಹಾಸಿನ ದಿಣ್ಣೆಯ ಮೇಲೆ ಕುಳಿತೇ ಆಟವನ್ನು ನೋಡಲು ಇಷ್ಟಪಡುತ್ತಾರೆ.

 

ಕಾಲು ಚಾಚಿಕೊಂಡು ಆರಾಮವಾಗಿ ಕುಳಿತು ಆಟ ನೋಡುತ್ತಿದ್ದರೆ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ಅಂಗಳದಲ್ಲಿ ಕ್ರಿಕೆಟ್ ನೋಡಿದಂಥ ಅನುಭವ.ಬಿಜಿಎಸ್ ಕ್ರೀಡಾಂಗಣವು ಶಾಲಾ ಕ್ರೀಡಾಂಗಣ ಆಗಿದ್ದರೂ ಅನೇಕ ವಿಶೇಷಗಳು ಇಲ್ಲಿವೆ. ಅಂತರರಾಷ್ಟ್ರೀಯ ಕ್ರೀಡಾಂಗಣಗಳಲ್ಲಿ ಇರುವಂತೆ ಇಲ್ಲಿ ಗ್ಲಾಸ್‌ಹೌಸ್ ಮಾದರಿಯ ಪ್ರೆಸ್‌ಬಾಕ್ಸ್ ಹಾಗೂ ವೀಕ್ಷಕ ವಿವರಣೆಗಾರರ ಬಾಕ್ಸ್ ಇದೆ.ಅದೆಲ್ಲದ್ದಕ್ಕಿಂತ ಮುಖ್ಯವಾದದ್ದೆಂದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪಿಚ್ ಕ್ಯುರೇಟರ್ ನಾರಾಯಣ್‌ರಾಜು ಉಸ್ತುವಾರಿಯಲ್ಲಿ ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ. ಕಳೆದ ವರ್ಷದ ಜೂನ್‌ನಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಸಕ್ತಿಯ ಫಲವಾಗಿ ಪಿಚ್‌ಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಲಾಗಿದೆ.ಯಾವುದೇ ಪ್ರಥಮ ದರ್ಜೆ ಪಂದ್ಯವನ್ನು ನಡೆಸುವುದಕ್ಕೆ ಅಗತ್ಯವಾದ ಎಲ್ಲ ಸೌಲಭ್ಯ ಇಲ್ಲಿ ಲಭ್ಯ. ಅಂಗಳದ ಮಧ್ಯೆ ಆರು ಪಿಚ್‌ಗಳು ಸಜ್ಜಾಗಿವೆ. ಅಷ್ಟೇ ಅಲ್ಲ ಅಭ್ಯಾಸಕ್ಕಾಗಿ ಮೂರು ಪ್ರತ್ಯೇಕ ನೆಟ್‌ಗಳನ್ನು ಮಾಡಲಾಗಿದೆ. ಆದ್ದರಿಂದಲೇ ಇಲ್ಲಿ ಬಾಂಗ್ಲಾದೇಶ, ಬರೋಡಾ ಇಲೆವೆನ್, ಕೆಎಸ್‌ಸಿಎ `ಎ~ ಹಾಗೂ `ಬಿ~ ತಂಡಗಳ ನಡುವೆ ಪಂದ್ಯಗಳನ್ನು ನಡೆಸಲು ಸಾಧ್ಯವಾಗಿದ್ದು. ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವಲ್ಲಿ ಮಾಜಿ ಕ್ರಿಕೆಟಿಗರಾದ ಜಿ.ಆರ್.ವಿಶ್ವನಾಥ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಹಾಗೂ ವೆಂಕಟೇಶ್ ಪ್ರಸಾದ್ ಅವರು ಸಹಕಾರ ನೀಡಿದ್ದರಿಂದ ಐದು ತಿಂಗಳಲ್ಲಿ ಹಸಿರು ಹೊದ್ದು ಕಂಗೊಳಿಸಿತು.ಬಿಜಿಎಸ್ ವ್ಯವಸ್ಥಾಪಕ ನಿರ್ದೇಶಕರೂ ಆದ ಪ್ರಕಾಶಾಂತ ಸ್ವಾಮೀಜಿ ಹಾಗೂ ಮಾಜಿ ಆಟಗಾರ ವಿಜಯ್ ಭಾರದ್ವಾಜ್ ಅವರಂತೂ ನಿತ್ಯವೂ ಕಾರ್ಯಪ್ರಗತಿಯತ್ತ ಗಮನವಿಟ್ಟು ಅಲ್ಪಾವಧಿಯಲ್ಲಿ ಅದ್ಭುತ ಎನಿಸುವಂಥ ಕ್ರೀಡಾಂಗಣ ಕಣ್ಣೆದುರು ಎದ್ದು ನಿಲ್ಲುವಂತೆ ಮಾಡಿದ್ದಾರೆ. ಇದನ್ನು ನೋಡಿದ ರಾಹುಲ್ ದ್ರಾವಿಡ್ `ದೊಡ್ಡ ಪಂದ್ಯಗಳಿಗೆ ಇದು ವೇದಿಕೆ ಆಗಲು ಸಾಧ್ಯ~ ಎಂದು ಹೇಳಿದ್ದು ಅತಿಶಯೋಕ್ತಿಯಲ್ಲ.ಈ ಕ್ರೀಡಾಂಗಣವನ್ನು ಉನ್ನತ ದರ್ಜೆಗೆ ಏರಿಸುವ ಯೋಚನೆಯೂ ಮೊಳಕೆಯೊಡೆದಿದೆ. ಇನ್ನೂ ಹೆಚ್ಚು ವ್ಯವಸ್ಥಿತವಾದ ಬೃಹತ್ ಗ್ಯಾಲರಿಗಳನ್ನು ನಿರ್ಮಿಸುವುದು ಮುಂದಿನ ಹೆಜ್ಜೆ.

ಇದೇ ಕ್ರೀಡಾಂಗಣದಲ್ಲಿ ಡಿಸೆಂಬರ್‌ನಲ್ಲಿ ಅಂಧರ ವಿಶ್ವಕಪ್ ಕ್ರಿಕೆಟ್ ಆಯೋಜಿಸುವ ಪ್ರಸ್ತಾಪವೂ ಇದೆ. ಅದು ಸಾಧ್ಯವಾಗುವ ನಿರೀಕ್ಷೆಯನ್ನು ಬಿಜಿಎಸ್ ಆಡಳಿತ ಹೊಂದಿದ್ದು ಸಮರ್ಥನಂ ಟ್ರಸ್ಟ್ ಜೊತೆಗೆ ಚರ್ಚೆಯೂ ನಡೆದಿದೆ.ಇಂಥ ಮಹತ್ವದ ಟೂರ್ನಿಗೆ ಬಿಜಿಎಸ್ ಕ್ರೀಡಾಂಗಣ ವೇದಿಕೆ ಆದರೆ ಅದೊಂದು ಹಿರಿಮೆಯೇ ಸರಿ. ಅಷ್ಟು ಮಾತ್ರವಲ್ಲ ಈ ಅಂಗಳದಲ್ಲಿ ಭಾರತದ ಸೀನಿಯರ್ ಕ್ರಿಕೆಟ್ ಪಡೆಯು ವಿದೇಶದ ತಂಡದ ವಿರುದ್ಧ ಆಡುವ ದಿನವೊಂದು ಖಂಡಿತ ಬರಲಿದೆ ಎನ್ನುವುದು ಬಿಜಿಎಸ್ ಆಡಳಿತದ ವಿಶ್ವಾಸ.

ಚಿತ್ರಗಳು: ಆರ್. ಶ್ರೀಕಂಠ ಶರ್ಮ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry