ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ಬುಧವಾರ, ಜೂಲೈ 17, 2019
26 °C

ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

Published:
Updated:

ಬೆಂಗಳೂರು: ವ್ಯಕ್ತಿಯೊಬ್ಬರು ಕಟ್ಟಡದ ನಾಲ್ಕನೆ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಕೊಲೇಔಟ್ ಬಳಿಯ ಬಿಟಿಎಂ ಲೇಔಟ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.ಕುಂದಾಪುರದ ದೊಟ್ಟಯ್ಯ ಪೂಜಾರಿ ಎಂಬುವರ ಪುತ್ರ ಆನಂದ್ ಪೂಜಾರಿ (30) ಆತ್ಮಹತ್ಯೆ ಮಾಡಿಕೊಂಡವರು. ಮೂರ‌್ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆನಂದ್, ರಸ್ತೆ ಬದಿ ಗಾಡಿ ಇಟ್ಟುಕೊಂಡು ತಿಂಡಿ ವ್ಯಾಪಾರ ಮಾಡುತ್ತಿದ್ದರು. ಸ್ನೇಹಿತರ ಮನೆಯಲ್ಲಿ ಉಳಿಯುತ್ತಿದ್ದ ಅವರಿಗೆ ನಿರ್ದಿಷ್ಟ ವಾಸಸ್ಥಳ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ಕೆಲವು ತಿಂಗಳುಗಳಿಂದ ಬಿಟಿಎಂ ಲೇಔಟ್‌ನಲ್ಲಿರುವ ಪೇಯಿಂಗ್ ಗೆಸ್ಟ್‌ನ ಸೆಕ್ಯುರಿಟಿ ಗಾರ್ಡ್ ಜತೆ ವಾಸವಾಗಿದ್ದರು. ಬೆಳಿಗ್ಗೆ ಆರು ಗಂಟೆಗೆ ಅದೇ ಕಟ್ಟಡದ ಮಹಡಿಯಿಂದ ಜಿಗಿದ್ದಿದ್ದಾರೆ. ತೀವ್ರ ರಕ್ತಸ್ರಾವ ಉಂಟಾಗಿ ಪ್ರಜ್ಞೆ ತಪ್ಪಿದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಆನಂದ್ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು.ಆನಂದ್‌ರ ಮೂವರು ಸಹೋದರರು ಸಹ ನಗರದ ವಿವಿಧ ಸ್ಥಳಗಳಲ್ಲಿ ರಸ್ತೆ ಬದಿ ತಿಂಡಿ ವ್ಯಾಪಾರ ಮಾಡುತ್ತಿದ್ದಾರೆ. ಈ ಕೆಲಸ ಆನಂದ್‌ಗೆ ಇಷ್ಟವಿರಲಿಲ್ಲ. ಈ ವಿಚಾರಗಳನ್ನು ರಾತ್ರಿ ಪೇಯಿಂಗ್ ಗೆಸ್ಟ್‌ನ ಸೆಕ್ಯುರಿಟಿ ಗಾರ್ಡ್ ಬಳಿ ಹೇಳಿಕೊಂಡಿದ್ದರು. ಆತ್ಮಹತ್ಯೆಗೆ ಇದೇ ಕಾರಣವಿರಬಹುದು ಎಂದು ಮೈಕೊಲೇಔಟ್ ಪೊಲೀಸರು ಮಾಹಿತಿ ನೀಡಿದರು.ಆನಂದ್ ಯಾರೊಂದಿಗೂ ಸಾಲ ಮಾಡಿಕೊಂಡವನಲ್ಲ, ಆತನ ವೈಯಕ್ತಿಕ ಜೀವನದಲ್ಲೂ ಅಂತಹ ಸಮಸ್ಯೆಗಳು ಇರಲಿಲ್ಲ.ಆದರೆ, ಆತ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗುತ್ತಿಲ್ಲ~ ಎಂದು ಆನಂದ್‌ರ ಭಾವ ಸುರೇಶ್ `ಪ್ರಜಾವಾಣಿ~ಗೆ ತಿಳಿಸಿದರು.ಕೆರೆಗೆ ತಳ್ಳಿ ಯುವಕನ ಕೊಲೆ: ಯುವಕನೊಬ್ಬ ಸ್ನೇಹಿತನನ್ನೇ ಕೆರೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ಕಾಡುಗೋಡಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.ಘಟನೆಯಲ್ಲಿ ಕೂಲಿ ಕಾರ್ಮಿಕ ಸಲೀಂ (26) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆರೋಪಿ ತರುಣ್ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ವಿಶಾಖಪಟ್ಟಣ ಮೂಲದವರಾಗಿದ್ದು, ಇತ್ತೀಚೆಗೆ ನಗರಕ್ಕೆ ಬಂದಿದ್ದರು.ಇಂದಿರಾನಗರದಲ್ಲಿ ಕೃಷ್ಣಾರೆಡ್ಡಿ ಎಂಬುವರ ಬಳಿ ಕೂಲಿ ಕೆಲಸ ಮಾಡುತ್ತಿದ್ದ ಅವರು, ಕಾಡುಗೋಡಿ ಸಮೀಪದ ಸಾದರಮಂಗಲ ಗ್ರಾಮದಲ್ಲಿ ಶೆಡ್ ಹಾಕಿಕೊಂಡು ವಾಸವಾಗಿದ್ದರು. ಬೆಳಿಗ್ಗೆ ಇಬ್ಬರು ಬಹಿರ್ದೆಸೆಗಾಗಿ ಕೆರೆಗೆ ಹೋದಾಗ ಆರೋಪಿ ಸಲೀಂ ಅವರನ್ನು ನೀರಿಗೆ ತಳ್ಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಸಲೀಂ ಜತೆ ಕೆಲಸ ಮಾಡುವ ಕಾರ್ಮಿಕರೊಬ್ಬರು ಹತ್ತು ಗಂಟೆ ಸುಮಾರಿಗೆ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದರು. ಮಧ್ಯಾಹ್ನ 1.30ಕ್ಕೆ ಶವ ಪತ್ತೆಯಾಯಿತು. `ಭಾನುವಾರ ರಾತ್ರಿ ಸ್ನೇಹಿತರೆಲ್ಲಾ ಮದ್ಯ ಕುಡಿದೆವು. ಆಗ ನಮ್ಮಿಬ್ಬರ ನಡುವೆ ಜಗಳವಾಯಿತು. ಆ ದ್ವೇಷದಿಂದ ಬೆಳಿಗ್ಗೆ ಸಲೀಂನನ್ನು ಕೆರೆಗೆ ತಳ್ಳಿದೆ~ ಎಂದು ತರುಣ್ ಹೇಳಿದ್ದಾನೆ ಎಂದು ಕಾಡುಗೋಡಿ ಪೊಲೀಸರು ತಿಳಿಸಿದ್ದಾರೆ.ವ್ಯಕ್ತಿ ಕೊಲೆ: ದುಷ್ಕರ್ಮಿಗಳು ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಹುಳಿಮಾವು ಬಳಿಯ ಬಸವನಪುರದಲ್ಲಿ ಭಾನುವಾರ ರಾತ್ರಿ ನಡೆದಿದೆ.ಬಸವನಪುರದ ನಿವಾಸಿ ಮರಿಯಪ್ಪ ಅಲಿಯಾಸ್ ಶಂಭುಲಿಂಗೇಗೌಡ (65) ಕೊಲೆಯಾದವರು. ಕೂಲಿ ಕೆಲಸ ಮಾಡುತ್ತಿದ್ದ ಅವರು ಬಸವನಪುರ ಗೇಟ್ ಬಳಿ ಸ್ನೇಹಿತರೊಂದಿಗೆ ರಾತ್ರಿ ಮದ್ಯ ಕುಡಿದಿದ್ದಾರೆ.ಈ ವೇಳೆ ಮರಿಯಪ್ಪ ಅವರ ಜತೆ ಹಣಕಾಸಿನ ವಿಷಯವಾಗಿ ಜಗಳ ತೆಗೆದ ದುಷ್ಕರ್ಮಿಗಳು ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry