ಸೋಮವಾರ, ಮೇ 17, 2021
22 °C

ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೋಟೆಲ್ ಕಾರ್ಮಿಕನೊಬ್ಬ ಕಟ್ಟಡದ ಆರನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ವೈಟ್‌ಫೀಲ್ಡ್ ಸಮೀಪದ ಬಿಎಂಟಿಸಿ ಬಸ್ ಡಿಪೊ ಆವರಣದಲ್ಲಿ ಶನಿವಾರ ರಾತ್ರಿ ನಡೆದಿದೆ.ಡಾರ್ಜಿಲಿಂಗ್ ಮೂಲದ ಅಭಿಷೇಕ್ (20) ಮೃತಪಟ್ಟ ಯುವಕ. ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ ಆತ ಆ ಡಿಪೊ ಕಟ್ಟಡದ ನೆಲ ಮಹಡಿಯಲ್ಲಿರುವ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಭಿಷೇಕ್, ಅದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರ ಜತೆ ಡಿಪೊ ಕಟ್ಟಡದ ಆರನೇ ಮಹಡಿಯ ಕೊಠಡಿಯೊಂದರಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕೆಲಸ ಮುಗಿದ ನಂತರ ರಾತ್ರಿ ಕೊಠಡಿಗೆ ಹೋಗಿದ್ದ ಆತ 12 ಗಂಟೆ ಸುಮಾರಿಗೆ ಮಹಡಿಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ದೇಹದ ಮೇಲೆ ಗಾಯದ ಗುರುತುಗಳಿವೆ. ಈ ಅಂಶವನ್ನು ಗಮನಿಸಿದರೆ ಅಭಿಷೇಕ್‌ನ ಕೊಠಡಿಯಲ್ಲಿದ್ದ ಸಹೋದ್ಯೋಗಿಗಳೇ ಆತನ ಮೇಲೆ ಹಲ್ಲೆ ನಡೆಸಿ ಕೆಳಗೆ ತಳ್ಳಿ ಕೊಲೆ ಮಾಡಿರುವ ಸಂದೇಹ ವ್ಯಕ್ತವಾಗುತ್ತದೆ. ಘಟನೆ ನಂತರ ಆ ಇಬ್ಬರು ಸಹೋದ್ಯೋಗಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಅಭಿಷೇಕ್‌ನ ಕೊಠಡಿಯಲ್ಲಿ ಡೈರಿಯೊಂದು ಸಿಕ್ಕಿದೆ. ಆತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಸಂಗತಿಯನ್ನು ಡೈರಿಯಲ್ಲಿ ನಮೂದಿಸಿದ್ದಾನೆ. ಮೃತನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಕುಟುಂಬ ಸದಸ್ಯರು ನಗರಕ್ಕೆ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮಹದೇವಪುರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.ಬಸ್ ಹರಿದು ಸಾವು: ಬಿಎಂಟಿಸಿ ಬಸ್ ಹರಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಹಳ್ಳಿ ಮುಖ್ಯರಸ್ತೆಯ ಅಭಿಮಾನ್ ಸ್ಟುಡಿಯೊ ಬಳಿ ಶನಿವಾರ ರಾತ್ರಿ ನಡೆದಿದೆ.ಮೃತ ವ್ಯಕ್ತಿಯ ವಯಸ್ಸು ಸುಮಾರು 35 ವರ್ಷ. ಆದರೆ, ಅವರ ಗುರುತು ಪತ್ತೆಯಾಗಿಲ್ಲ. ಆ ವ್ಯಕ್ತಿ ಅಭಿಮಾನ್ ಸ್ಟುಡಿಯೊ ಸಮೀಪ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ.ಕೆಳಗೆ ಬಿದ್ದ ಅವರ ಮೇಲೆ ಬಸ್‌ನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಕೆಂಗೇರಿಯಿಂದ ಎಲೆಕ್ಟ್ರಾನಿಕ್‌ಸಿಟಿಗೆ (ಮಾರ್ಗ ಸಂಖ್ಯೆ- 378) ಹೋಗುತ್ತಿತ್ತು. ಚಾಲಕನನ್ನು ಬಂಧಿಸಿ ವಾಹನ ವಶಕ್ಕೆ ತೆಗೆದುಕೊಳ್ಳಲಾಗಿದೆ ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಗೋದಾಮಿಗೆ ಬೆಂಕಿ: ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಾಯಂಡನಹಳ್ಳಿ ಸಮೀಪದ ಐಟಿಐ ಕಾಲೊನಿಯಲ್ಲಿ ಭಾನುವಾರ ಸಂಭವಿಸಿದೆ.ಐಟಿಐ ಕಾಲೊನಿಯಲ್ಲಿರುವ ಗೋದಾಮಿಗೆ ಸಂಜೆ ಆರು ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಇದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಆರು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ನಷ್ಟದ ಪ್ರಮಾಣದ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದರು. ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.