ಗುರುವಾರ , ಜೂನ್ 17, 2021
22 °C

ಮಹತ್ವದ ಒಪ್ಪಂದಗಳಿಗೆ ಭಾರತ- ದ.ಕೊರಿಯಾ ಸಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲ್ (ಪಿಟಿಐ/ಐಎಎನ್‌ಎಸ್):  ವೀಸಾ ಪ್ರಕ್ರಿಯೆ ಸರಳಗೊಳಿಸುವುದು, 40 ಶತಕೋಟಿ ಡಾಲರ್ ವಾಣಿಜ್ಯ ವಹಿವಾಟು ಗುರಿ ಸೇರಿದಂತೆ ಆರ್ಥಿಕ, ವಾಣಿಜ್ಯ ಮತ್ತು ರಕ್ಷಣಾ ಕ್ಷೇತ್ರಗಳ ಸಹಕಾರಕ್ಕೆ ಸಂಬಂಧಿಸಿದ ಹಲವು ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ದಕ್ಷಿಣಾ ಕೊರಿಯಾ ಭಾನುವಾರ ಸಹಿ ಹಾಕಿದವು. ಇಲ್ಲಿ ನಡೆಯಲಿರುವ ಪರಮಾಣು ಭದ್ರತೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ನಾಲ್ಕು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.ದ್ವಿಪಕ್ಷೀಯ ಮಾತುಕತೆ ನಂತರ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಮ್ಯೂಂಗ್ ಬಾಕ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪ್ರಧಾನಿ,   ಮೂಲಸೌಕರ್ಯ ಸೇರಿದಂತೆ ಭಾರತದ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವಂತೆ ಕೊರಿಯಾ ಕಂಪೆನಿಗಳಿಗೆ ಆಹ್ವಾನ ನೀಡಿದರು.ಕಳೆದ ವರ್ಷ ಸಹಿ ಹಾಕಿದ `ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ~ದಂತೆ 2015ರ ವೇಳೆಗೆ ಉಭಯ ರಾಷ್ಟ್ರಗಳು 40 ಶತಕೋಟಿ ಡಾಲರ್ ವಾಣಿಜ್ಯ ವಹಿವಾಟು ನಡೆಸುವ ಪ್ರಕ್ರಿಯೆಗೆ ಪೂರಕ ವಾತಾವರಣ ಕಲ್ಪಿಸುವುದು, ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೀಸಾ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸುವುದು ಸೇರಿದಂತೆ ರಾಜಕೀಯ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ವಿಸ್ತರಿಸುವುದು ಈ ಒಪ್ಪಂದಗಳಲ್ಲಿ ಸೇರಿದೆ.ಬಹಿರಂಗ ಆಹ್ವಾನ: `ದಕ್ಷಿಣ ಕೊರಿಯಾದ ಉಪಗ್ರಹವನ್ನು ಭಾರ-ತೀಯ ಬಾಹ್ಯಾಕಾಶ ನೌಕೆಯೊಂದಿಗೆ ಕಕ್ಷೆಗೆ ಉಡಾವಣೆ ಮಾಡಲು ಸಿದ್ಧ~ ಎಂದು ಸಿಂಗ್ ಇದೇ ವೇಳೆ ಕೊರಿಯಾಕ್ಕೆ ಬಹಿರಂಗ ಆಹ್ವಾನ ನೀಡಿದರು. ಉತ್ತರ ಕೊರಿಯಾ ಮುಂದಿನ ತಿಂಗಳು ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿರುವುದು ಎರಡೂ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣಕ್ಕೆ ನಾಂದಿಯಾಗಿದೆ. ಆ ದೃಷ್ಟಿಯಿಂದ ದಕ್ಷಿಣ ಕೊರಿಯಾಗೆ ಸಿಂಗ್ ನೀಡಿರುವ ಈ ಆಹ್ವಾನ ಮಹತ್ವ ಪಡೆದುಕೊಂಡಿದೆ.  ರಕ್ಷಣಾ ಕ್ಷೇತ್ರದಲ್ಲಿ ಕೊರಿಯಾ ಸಹಕಾರ ಒಪ್ಪಂದಕ್ಕೆ ಉತ್ಸಾಹ ತೋರಿದ ಹಿನ್ನೆಲೆಯಲ್ಲಿ, ಸೋಲ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ವರ್ಷಾಂತ್ಯದಲ್ಲಿ ಸೈನಿಕ ರಾಯಭಾರ ಕಚೇರಿಯನ್ನೂ ತೆರೆಯಲು ನಿರ್ಧರಿಸಿರುವುದಾಗಿ ಅವರು ಘೋಷಿಸಿದರು.ಅಂತರ ರಾಷ್ಟ್ರೀಯ ಭಯೋತ್ಪಾದನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಇಬ್ಬರೂ ನಾಯಕರು, ಭಯೋತ್ಪಾದನೆ ನಿಗ್ರಹ, ಕಡಲ್ಗಳ್ಳತನದಂತಹ ಸಮಸ್ಯೆ ಸೇರಿದಂತೆ ಪ್ರಾದೇಶಿಕ ಸಮಸ್ಯೆಗಳ ನಿವಾರಣೆಯಲ್ಲೂ ಪರಸ್ಪರ ಸಹಕಾರ ನೀಡಲು ಒಪ್ಪಿಗೆ ಸೂಚಿಸಿದರು. ಪ್ರಾದೇಶಿಕ ಶಾಂತಿ, ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಎರಡೂ ದೇಶಗಳ ನಡುವಿನ ಯಾವುದೇ ಸಮಸ್ಯೆಯನ್ನು ಸೇನಾ ಬಲ ಬಳಸದೆ, ಸೌಹಾರ್ದ ಮತ್ತು ಶಾಂತಿಯುತ ವಾತಾವರಣದಲ್ಲಿ ಬಗೆಹರಿಸಿಕೊಳ್ಳಬೇಕು, ಔಷಧ, ಕೃಷಿ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಅವಕಾಶ ಕಲ್ಪಿಸಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು.ಸುದೀರ್ಘ ಚರ್ಚೆ: ಕೊಲ್ಲಿ ರಾಷ್ಟ್ರಗಳು, ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯದಲ್ಲಿಯ ಪ್ರಕ್ಷುಬ್ಧ ಪರಿಸ್ಥಿತಿ ಕುರಿತು ಸಿಂಗ್ ಮತ್ತು ಲೀ ಸುದೀರ್ಘ ಸಮಾಲೋಚನೆ ನಡೆಸಿದರು. ವಾಸ್ಸೆನಾರ್ ಒಪ್ಪಂದ, ಆಸ್ಟ್ರೇಲಿಯ ಮತ್ತು ಪರಮಾಣು ಇಂಧನ ಪೂರೈಸುವ ರಾಷ್ಟ್ರಗಳ ಗುಂಪಿನ ಸದಸ್ಯತ್ವ ಪಡೆಯಲು ಭಾರತ ಇದೇ ವೇಳೆ ಕೊರಿಯಾದ ಬೆಂಬಲ ಕೋರಿತು. ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 40 ವರ್ಷ ತುಂಬಲಿದ್ದು, ಈ ಅವಿಸ್ಮರಣೀಯ ದಿನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.ಸಿಂಗ್- ಗಿಲಾನಿ ಮಾತುಕತೆ ಸಾಧ್ಯತೆ  ಕ್ಷೀಣ

ಸೋಲ್ (ಪಿಟಿಐ): ಪರಮಾಣು ಭದ್ರತಾ ಸಮಾವೇಶದಲ್ಲಿ ಭಾಗವಹಿಸಲಿರುವ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಆದರೂ ಇಬ್ಬರ ನಡುವೆ ಅಧಿಕೃತ ಮಾತುಕತೆ ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.ಸಮಾವೇಶಕ್ಕೂ ಮುನ್ನ ದಕ್ಷಿಣ ಕೊರಿಯಾ ಅಧ್ಯಕ್ಷರು ಏರ್ಪಡಿಸಲಿರುವ ಔತಣಕೂಟದಲ್ಲಿ ಇಬ್ಬರೂ ಭೇಟಿಯಾಗಲಿದ್ದು, ಬಹುತೇಕ ಹಲವು ಗಂಟೆಗಳನ್ನು ಕೂಡಿ ಕಳೆಯಲಿದ್ದಾರೆ. ಆದರೆ, ಇಲ್ಲಿಯವರೆಗೂ ಉಭಯ ನಾಯಕರ ಮಾತುಕತೆಗೆ ಯಾವುದೇ ಅಧಿಕೃತ ಸಭೆ ನಿಗದಿಯಾಗಿಲ್ಲ. ಭೇಟಿಯ ವೇಳೆ ಅನೌಪಚಾರಿಕ ಮಾತುಕತೆ ನಡೆಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಇಲ್ಲಿಯ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.ಪೋಸ್ಕೊ ಯೋಜನೆ ಅನುಷ್ಠಾನ: ಸಿಂಗ್ ಭರವಸೆ
ಪೋಸ್ಕೊ ಕಂಪೆನಿ ಒಡಿಶಾದಲ್ಲಿ 12 ಶತಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಅಗತ್ಯ ನೆರವು, ಸಹಕಾರ ನೀಡುವುದಾಗಿ ಪ್ರಧಾನಿ ಸಿಂಗ್ ಭರವಸೆ ನೀಡಿದ್ದಾರೆ.ದ್ವಿಪಕ್ಷೀಯ ಮಾತುಕತೆ ವೇಳೆ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಅವರಿಗೆ ಈ ಭರವಸೆ ನೀಡಿರುವ ಪ್ರಧಾನಿ, ಅತಿ ದೊಡ್ಡ ವಿದೇಶಿ ಬಂಡವಾಳದ  ನೇರ ಹೂಡಿಕೆಯಾಗಿರುವ ಈ ಯೋಜನೆಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುವುದಾಗಿ ಹೇಳಿದ್ದಾರೆ. `ಯೋಜನೆಗೆ ಅಗತ್ಯ ಅನುಮತಿಗಳನ್ನು ಈಗಾಗಲೇ ಕೇಂದ್ರ ಸರ್ಕಾರ ನೀಡಿದ್ದು ಒಡಿಶಾ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡಿದೆ.

 

ಯೋಜನೆ ಅನುಷ್ಠಾನದಲ್ಲಿ ಎದುರಾಗಿರುವ ಕೆಲವು ಕಾನೂನಾತ್ಮಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಹಿಡಿಯಲಾಗುವುದು~ ಎಂದು  ವಿದೇಶಾಂಗ ವ್ಯವಹಾರ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಅಚ್ಚರಿ ಮೂಡಿಸಿದ ಒಬಾಮ ಭೇಟಿ
ಸೇನಾಮುಕ್ತ ವಲಯ (ದಕ್ಷಿಣ ಕೊರಿಯಾ) (ಎಎಫ್‌ಪಿ): ಪರಮಾಣು ಭದ್ರತಾ ಸಮಾವೇಶದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾನುವಾರ ದಕ್ಷಿಣ ಕೊರಿಯಾದ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು.ಹೆಲಿಕಾಪ್ಟರ್ ಮೂಲಕ ಸೇನಾ ಮುಕ್ತ ವಲಯಕ್ಕೆ ತೆರಳಿದ ಅವರು, ಗುಂಡು ನಿರೋಧಕ ಗಾಜಿನ ಹಿಂದೆ ನಿಂತು ಉತ್ತರ ಕೊರಿಯಾದ ಗಡಿ ಪ್ರದೇಶದತ್ತ ಇಣುಕಿ ನೋಡಿದರು. ಅನೇಕ ಗಂಟೆ ಕುತೂಹಲದಿಂದ ವೀಕ್ಷಿಸಿದರು. ಅವರ ಈ ಭೇಟಿ ದ. ಕೊರಿಯಾದ ಬಲ ಹೆಚ್ಚಿಸಿದೆ ಎಂದು ಭಾವಿಸಲಾಗಿದೆ. ಉ. ಕೊರಿಯಾವು ಸಂಸ್ಥಾಪಕ ಅಧ್ಯಕ್ಷ ಕಿಮ್ ಸುಂಗ್ ಜನ್ಮಶತಮಾನೋತ್ಸವ ಪ್ರಯುಕ್ತ ಮುಂದಿನ ತಿಂಗಳು ಉಪಗ್ರಹ ಉಡಾಯಿಸಲು ಭರದ ಸಿದ್ಧತೆ ನಡೆಸಿದೆ.   

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.