5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಮಹತ್ವದ ತೀರ್ಪು

Published:
Updated:

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ತೃತೀಯ ಲಿಂಗದ ಕಾನೂನಿನ ಸ್ಥಾನಮಾನವನ್ನು ನೀಡಿ ಸುಪ್ರೀಂಕೋರ್ಟ್  ತೀರ್ಪು ನೀಡಿ­ರು­ವುದು ಐತಿಹಾಸಿಕ ಮೈಲುಗಲ್ಲು. ಇದರಿಂದ ರಾಷ್ಟ್ರದಲ್ಲಿ ಅಂದಾಜು 10 ಲಕ್ಷಕ್ಕೂ ಹೆಚ್ಚಿರುವ ಸಮುದಾಯಕ್ಕೆ ಲಿಂಗತ್ವ ಅಸ್ಮಿತೆಯನ್ನು ದಾಖ­ಲಿಸಲು ಹಕ್ಕು ದೊರೆತಂತಾಗಿದೆ.ಪಾಸ್ ಪೋರ್ಟ್, ಚಾಲನಾ ಪರ­ವಾನಗಿ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿಗಳಲ್ಲಿ ಲಿಂಗತ್ವ ಅಸ್ಮಿತೆ­ಯನ್ನು ದಾಖಲಿಸಲು ಇನ್ನು ಮುಂದೆ ಈ ಸಮುದಾಯ ಯಾವುದೇ ಮುಜು­ಗರ ಪಡಬೇಕಾಗಿಲ್ಲ. ಸಾಮಾಜಿಕ ಅಸ್ಪೃಶ್ಯತೆಯನ್ನು ಈ ಸಮುದಾಯ ಅನುಭವಿ­ಸುತ್ತಲೇ ಇದೆ. ಜೊತೆಗೆ ಶಿಕ್ಷಣ, ಉದ್ಯೋಗದಂತಹ ಮೂಲಭೂತ ಹಕ್ಕು­ಗಳೂ ಈ ಸಮುದಾಯಕ್ಕೆ ನಿರಾಕರಣೆಯಾಗಿರುವುದು ಕಟು ವಾಸ್ತವ.ಅಂಚಿಗೆ ಸರಿಸಲ್ಪಟ್ಟ ಈ ಸಮುದಾಯವನ್ನು  ಸಮಾಜ ಕಾಣುವ ರೀತಿಯೇ ಕೆಟ್ಟ­ದಾಗಿ­ರುತ್ತದೆ. ಕುಟುಂಬದವರ  ಸಹಾನುಭೂತಿಯೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಈ ಸಮುದಾಯದ ಹಕ್ಕುಗಳಿಗಾಗಿ ನಡೆಸ­ಲಾಗು­ತ್ತಿ­ರುವ ಆಂದೋಲನ ಇತ್ತೀಚಿನ ದಿನಗಳಲ್ಲಿ ತೀವ್ರತೆ  ಪಡೆದು­ಕೊಂಡಿರು­ವುದಂತೂ ನಿಜ. ಚುನಾಯಿತರಾಗಲು ಅವರಿಗಿರುವ ಹಕ್ಕನ್ನು ಕೋರ್ಟ್ ತೀರ್ಪು­ಗಳು ಎತ್ತಿ ಹಿಡಿದಿವೆ. ಹೀಗಾಗಿ 2009ರಲ್ಲೇ  ‘ಇತರ ಲಿಂಗ’ ಆಯ್ಕೆಯ ಅವಕಾಶವನ್ನು  ಚುನಾವಣಾ ಆಯೋಗ ಆರಂಭಿಸಿತ್ತು.  ಸಾವಿ­ರಾರು ಆಧಾರ್ ಕಾರ್ಡ್‌ಗಳನ್ನೂ ಈ ಸಮುದಾಯಕ್ಕೆ ವಿತರಿಸಲಾಗಿದೆ.ಈಗ ಈ ಸಮುದಾಯವನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರೆಂದು ಪರಿಗಣಿಸಿ ಶಿಕ್ಷಣ ಹಾಗೂ  ಉದ್ಯೋಗಗಳಲ್ಲಿ ಮೀಸಲು ನೀಡಬೇಕೆಂದು ಸುಪ್ರೀಂಕೋರ್ಟ್ ಹೇಳಿರುವುದು ಮಹತ್ವದ ಅಂಶ.  ಆದರೆ ಈ  ತೀರ್ಮಾನ,  ಸಮಾಜದಲ್ಲಿ ಅವರ ಸ್ಥಾನಮಾನಗಳಲ್ಲಿ ಎಷ್ಟರ ಮಟ್ಟಿಗೆ ಬದಲಾವಣೆಗಳನ್ನು ತರುತ್ತದೆ ಎಂದು ಹೇಳಲಾಗದು. ಕೇಂದ್ರದಲ್ಲಿ ಅಧಿಕಾರ ವಹಿಸಿಕೊಳ್ಳಲಿರುವ ಹೊಸ ಸರ್ಕಾರದ ಹೊಣೆಗಾರಿಕೆ ಈ ನಿಟ್ಟಿನಲ್ಲಿ ಹೆಚ್ಚಾಗಲಿದೆ.ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಹೊಸ ಯೋಜನೆಗಳು ಹಾಗೂ ಕಾನೂನುಗಳನ್ನು ರೂಪಿಸ­ಬೇಕು. ಆದರೆ ಇವು ದುರ್ಬಳಕೆಯಾಗದಂತೆ ಎಚ್ಚರವೂ ವಹಿಸ­ಬೇಕು. ಏಕಾಏಕಿ ಬದಲಾವಣೆ ಒಂದೇ ದಿನದಲ್ಲಿ ಸಾಧ್ಯವಿಲ್ಲ. ನಿಜವಾದ ಬದ­ಲಾವಣೆ ಸಮಾಜದೊಳಗಿಂದಲೇ ಬರಬೇಕು. ಅವರನ್ನು ವಿಚಿತ್ರ ಜನರು ಎಂದು ಪರಿಗಣಿಸುವುದು ತಪ್ಪಬೇಕು. ಲಿಂಗತ್ವ ಅಲ್ಪಸಂಖ್ಯಾತರನ್ನು ಗೌರವ­ದಿಂದಲೇ  ಕಾಣುವ ಸಂಸ್ಕೃತಿ ನಮ್ಮದಾಗಿತ್ತು.18ನೇ ಶತಮಾನದ ಬ್ರಿಟಿಷ್ ವಸಾ­ಹತು­ಶಾಹಿ ಕಾಲದಲ್ಲಿ ಅವರನ್ನು ಅಪರಾಧಿಗಳಾಗಿ ಕಾಣುವ ಪ್ರವೃತ್ತಿ ಆರಂಭ­ವಾಯಿತು. ಈಗಲೂ ಅಸ್ತಿತ್ವದಲ್ಲಿ ಉಳಿದುಕೊಂಡು ಬಂದಿರುವ 153 ವರ್ಷಗಳಷ್ಟು ಹಳೆಯದಾದ  ಭಾರತ ದಂಡ ಸಂಹಿತೆಯ ಸೆಕ್ಷನ್ 377ರ ಪ್ರಕಾರ, ಸಲಿಂಗ ಕಾಮ ಅಪರಾಧ. ಈಗ ಸುಪ್ರೀಂ ಕೋರ್ಟ್‌ನ ಹೊಸ  ತೀರ್ಪಿನಿಂದಾಗಿ  ವಿಚಿತ್ರ ಸ್ಥಿತಿ  ಎದುರಾಗಿದೆ.  ಹೊಸ ತೀರ್ಪಿನ ಪ್ರಕಾರ, ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾನೂನಿನ ಮಾನ್ಯತೆ ಸಿಕ್ಕಿದೆ. ಆದರೆ ಪರಸ್ಪರ ಸಮ್ಮತಿಯ  ಸಲಿಂಗ ಕಾಮ ಅಪರಾಧವಾಗುವಂತಹ ಗೊಂದ­ಲದ ಸ್ಥಿತಿಯಂತೂ ಇನ್ನೂ ಇದೆ. ಒಟ್ಟಾರೆ ಮಾನವ ಹಕ್ಕುಗಳ ಉಲ್ಲಂ­­ಘನೆಗೆ ಅವಕಾಶ ಇರಬಾರದು ಎಂಬಂತಹ ಕಳಕಳಿ ಸಮಾಜದಲ್ಲಿ ಮೂಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry