ಮಹತ್ವದ ಹೆಜ್ಜೆ

7

ಮಹತ್ವದ ಹೆಜ್ಜೆ

Published:
Updated:

ನವದೆಹಲಿಯಲ್ಲಿ ನಡೆದ `ಆಗ್ನೇಯ ಏಷ್ಯಾ ದೇಶಗಳ ಸಂಘಟನೆ'ಯ (ಆಸಿಯಾನ್)  ಶೃಂಗಸಭೆಯ ಕೊನೆಯಲ್ಲಿ ಘೋಷಿಸಲಾಗಿರುವ, ಸೇವೆಗಳು ಮತ್ತು ಬಂಡವಾಳ ಹೂಡಿಕೆ ರಂಗದಲ್ಲಿ `ಮುಕ್ತ ವ್ಯಾಪಾರ ಒಪ್ಪಂದ'ದ (ಎಫ್‌ಟಿಎ) ಸಂಧಾನ ಮಾತುಕತೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ದೇಶದ ವಾಣಿಜ್ಯ ವಹಿವಾಟು  ಹೊಸ ಮಾರುಕಟ್ಟೆಗಳಿಗೆ ಇನ್ನಷ್ಟು ವಿಸ್ತರಣೆಗೊಳ್ಳುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಈ  ಒಪ್ಪಂದವು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲು ಇನ್ನೂ ಒಂದು ವರ್ಷ ಬೇಕಾಗುತ್ತದೆ ಎಂದರೂ ಆ ನಿಟ್ಟಿನಲ್ಲಿನ ಅಡೆತಡೆಗಳೆಲ್ಲ ಈಗಾಗಲೇ ನಿವಾರಣೆಗೊಂಡಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. `ಸೇವೆಗಳು ಮತ್ತು ಬಂಡವಾಳ ಹೂಡಿಕೆಯ' ಮುಕ್ತ  ವ್ಯಾಪಾರ ಒಪ್ಪಂದ ಜಾರಿ ನಿಟ್ಟಿನಲ್ಲಿ ಸಂಧಾನ ಮಾತುಕತೆಗಳು ಯಶಸ್ವಿಯಾಗಿರುವುದು, ಶೃಂಗಸಭೆಯ ಯಶಸ್ಸಿಗೂ ಕನ್ನಡಿ ಹಿಡಿಯುತ್ತದೆ. `ಎಫ್‌ಟಿಎ' ಜಾರಿಗೆ ಬರುವುದರಿಂದ ಲೆಕ್ಕಪತ್ರ, ವಾಸ್ತುಶಿಲ್ಪ, ಎಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯ, ಶುಶ್ರೂಷೆ, ಔಷಧ ಮತ್ತು ಆಡಳಿತ ನಿರ್ವಹಣೆ ಸಲಹೆ ಮತ್ತಿತರ ಸೇವಾ ರಂಗದಲ್ಲಿ ಭಾರತದ ವೃತ್ತಿನಿರತರಿಗೆ ಆಗ್ನೇಯ ಏಷ್ಯಾ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ. ಸೇವಾ ವಲಯವು ದೇಶದ ಆರ್ಥಿಕ ವೃದ್ಧಿಗೆ ಶೇ 55ರಷ್ಟು ಕೊಡುಗೆ ನೀಡುತ್ತಿದ್ದು, `ಆಸಿಯಾನ್' ಸಂಘಟನೆಯ 10 ದೇಶಗಳ ಹೊಸ ಮಾರುಕಟ್ಟೆಯಲ್ಲಿ ವಹಿವಾಟು ವಿಸ್ತರಣೆ ಆಗುವುದರಿಂದ ಕೊಡುಗೆ ಪ್ರಮಾಣ ಇನ್ನಷ್ಟು ಹೆಚ್ಚುವುದರಲ್ಲಿ ಸಂದೇಹ ಇಲ್ಲ. 2010ರಲ್ಲಿ `ಆಸಿಯಾನ್' ಜತೆ ಸರಕುಗಳ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬಂದ ನಂತರ, ಸೇವೆಗಳು ಮತ್ತು ಬಂಡವಾಳ ಹೂಡಿಕೆ ವಲಯದಲ್ಲಿಯೂ `ಎಫ್‌ಟಿಎ' ಜಾರಿಗೆ ತರುವ ನಿಟ್ಟಿನಲ್ಲಿ ಮಾತುಕತೆಗಳು ಪ್ರಗತಿಯ್ಲ್ಲಲಿದ್ದವು. ಆ ಪ್ರಯತ್ನಗಳೆಲ್ಲ ಈಗ ಫಲ ನೀಡಿವೆ.ಜಾಗತಿಕ ಜನಸಂಖ್ಯೆಯ ಶೇ 50ಕ್ಕಿಂತ ಹೆಚ್ಚಿನ ಪ್ರಮಾಣದ ಮಾರುಕಟ್ಟೆ ಪಾಲು ಹೊಂದಿರುವ `ಆಸಿಯಾನ್' ಜತೆಗಿನ ಈ ಒಪ್ಪಂದ ಭಾರತಕ್ಕೆ ಗಮನಾರ್ಹ ಆರ್ಥಿಕ ಪ್ರಯೋಜನ ಕಲ್ಪಿಸಿಕೊಡಲಿದೆ. ಬಂಡವಾಳ ಹೂಡಿಕೆ ಮತ್ತು ವ್ಯಾಪಾರ ವೃದ್ಧಿ ತೀವ್ರಗೊಳ್ಳುವುದರ ಜತೆಗೆ ಸಾಂಸ್ಕೃತಿಕ ಸಂಬಂಧವೂ ವೃದ್ಧಿಯಾಗಲಿದೆ. ಈ  ಒಪ್ಪಂದ ಜಾರಿಗೆ `ಆಸಿಯಾನ್' ದೇಶಗಳು ಬದ್ಧತೆ ಪ್ರಕಟಿಸಿರುವುದು ಭಾರತದ ಒಟ್ಟಾರೆ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿ ದೃಷ್ಟಿಯಿಂದ ತುಂಬ ಮಹತ್ವದ ವಿದ್ಯಮಾನವಾಗಿದೆ. ದಕ್ಷಿಣ ಚೀನಾ ವಿವಾದವು ಈ ವಲಯದಲ್ಲಿ ಈಗಾಗಲೇ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿರುವಾಗ, `ಆಸಿಯಾನ್' ಜತೆಗಿನ ಭಾರತದ ಬಾಂಧವ್ಯ ವೃದ್ಧಿಯು ಚೀನಾದ ಆಕ್ರಮಣಕಾರಿ ಧೋರಣೆಗೆ ಕಡಿವಾಣ ವಿಧಿಸಲೂ ನೆರವಾಗುವ ಸಾಧ್ಯತೆಗಳಿವೆ. ಮಹತ್ವಾಕಾಂಕ್ಷೆಯ, ಸಮತೋಲನದ ಮತ್ತು ಸಮಗ್ರ ಆರ್ಥಿಕ ಒಪ್ಪಂದ ಜಾರಿ ನಿಟ್ಟಿನ್ಲ್ಲಲಿ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಯಾವುದೇ ಕಾರಣಕ್ಕೂ  ಒಪ್ಪಂದದ ಉದ್ದೇಶಗಳಿಗೆ ಧಕ್ಕೆ ಒದಗದಂತೆ ಎಚ್ಚರ ವಹಿಸಬೇಕಾಗಿದೆ. ಈಗಾಗಲೇ ಸರಕುಗಳ ವಿಷಯದಲ್ಲಿ ಜಾರಿಯಲ್ಲಿ ಇರುವ `ಮುಕ್ತ ವ್ಯಾಪಾರ ಒಪ್ಪಂದ'ವು ಸೇವೆಗಳ ವಿಷಯದಲ್ಲಿಯೂ ಯಶಸ್ಸಿನ ಹಾದಿಯಲ್ಲಿ ಸಾಗುವ ನಿಟ್ಟಿನಲ್ಲಿ ಯಾವುದೇ ಅಡಚಣೆ ಎದುರಾಗದಂತೆ `ಆಸಿಯಾನ್' ದೇಶಗಳು ಎಚ್ಚರವಹಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry