ಮಹತ್ವದ ಹೆಜ್ಜೆ

7

ಮಹತ್ವದ ಹೆಜ್ಜೆ

Published:
Updated:

ಕುಖ್ಯಾತ ಪಾತಕಿ ಯಾಸೀನ್ ಭಟ್ಕಳ ಬಂಧನ ದೇಶದಲ್ಲಿ ಪಾಕ್ ಪ್ರಚೋದಿತ ಉಗ್ರಗಾಮಿ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ.ಐದಾರು ವರ್ಷಗಳಿಂದ ದೇಶದ ಹಲವು ನಗರಗಳಲ್ಲಿ ಬಾಂಬ್ ಸ್ಫೋಟದಂತಹ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಇನ್ನೂರಕ್ಕೂ ಹೆಚ್ಚು ಅಮಾಯಕರನ್ನು ಬಲಿ ತೆಗೆದುಕೊಂಡು ನೂರಾರು ಜನರನ್ನು ಗಾಯಗೊಳಿಸಿ, ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಯಾಸೀನ್‌ನ ಪಾತಕ ಕೃತ್ಯಗಳಿಗೆ ಕೊನೆಗೂ ತಡೆಬಿದ್ದಿದೆ. ಅವನ ಬಂಧನ ಭಾರತೀಯ ಭದ್ರತಾ ಪಡೆಗಳ ದೊಡ್ಡಬೇಟೆ.

 

ದೇಶದ ರಕ್ಷಣಾ ವ್ಯವಸ್ಥೆಯ ಕಣ್ಣುತಪ್ಪಿಸಿ ದೀರ್ಘ ಕಾಲ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಾಧ್ಯವಿಲ್ಲ. ಕಠಿಣ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ದೇಶಕ್ಕಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹದಿನೈದು ದಿನಗಳ ಹಿಂದೆ ಇನ್ನೊಬ್ಬ ಭಯೋತ್ಪಾದಕ ಅಬ್ದುಲ್ ಕರೀಂ ತುಂಡಾನ ಬಂಧನವಾಗಿತ್ತು. ಈ ಇಬ್ಬರು ಪಾತಕಿಗಳ ಬಂಧನದಿಂದ ದೇಶ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಇವರನ್ನು ಬಂಧಿಸಿದ ಭದ್ರತಾ ಪಡೆಗಳ ಸಿಬ್ಬಂದಿ ಅಭಿನಂದನೆಗೆ ಅರ್ಹರು.ದೇಶದ್ರೋಹಿ ಕೃತ್ಯಗಳಿಂದ ಯಾಸೀನ್ ಹುಟ್ಟಿದೂರು ಭಟ್ಕಳ ಮತ್ತು ಕರ್ನಾಟಕಕ್ಕೆ ಕಳಂಕ ತಂದಿದ್ದಾನೆ. ತನಿಖೆ ಸಂದರ್ಭದಲ್ಲಿ ಅವನು ಬಹಿರಂಗಗೊಳಿಸಿದ ಸಂಗತಿಗಳು ಆಘಾತಕಾರಿಯಾಗಿವೆ. ನೂರಕ್ಕೂ ಹೆಚ್ಚು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವುದಾಗಿ ಹೇಳಿಕೊಂಡಿದ್ದಾನೆ. ಅವನ ಮಾತುಗಳನ್ನು ಉಪೇಕ್ಷಿಸಲಾಗದು. ಯಾಸೀನ್ ಬೆಂಬಲಿಗರಿಂದ ಅಪಾಯವಿದೆ.ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸಂಚುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತಲೆಮರೆಸಿಕೊಂಡಿರುವ ಉಗ್ರರನ್ನು ಬಗ್ಗು ಬಡಿಯುವವರೆಗೆ ದೇಶಕ್ಕೆ ನೆಮ್ಮದಿ ಇಲ್ಲ. ಆತನಿಂದ ತರಬೇತಿ ಪಡೆದವರು ಇನ್ನಷ್ಟು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ. ವಿಚಾರಣೆ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳಿಗೆ ಯಾಸೀನ್ ತಿಳಿಸಿರುವ ಸಂಗತಿಗಳನ್ನು ನಿಜವೆಂದು ಭಾವಿಸಲಾಗದು. ತನಿಖೆಯ ಜಾಡು ತಪ್ಪಿಸಲು ಅವನು ಸುಳ್ಳು ಹೇಳಿರುವ ಸಾಧ್ಯತೆ ಇದೆ. ಇಂಡಿಯನ್ ಮುಜಾಹಿದೀನ್ ಸಂಘಟನೆಯ ಭೂಗತ ಕಾರ್ಯಕರ್ತರು ಎಲ್ಲೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹಿಸುವ ಕೆಲಸ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಪೊಲೀಸರಿಗೆ ಸವಾಲಿನದು. ಅದಕ್ಕೆ  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಹಕಾರದ ಅಗತ್ಯವಿದೆ. ಅದಕ್ಕೆ ಸಾರ್ವಜನಿಕರೂ ಕೈಜೋಡಿಸಬೇಕು. ಯಾಸೀನ್ ಬಂಧನದ ನಂತರ ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳು ಚುರುಕಾಗುತ್ತವೆ.2006ರಿಂದ ಇಲ್ಲಿಯತನಕ ಹದಿನಾಲ್ಕು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಆತನ ಮೇಲಿದೆ. ಅವನು ಒಂಬತ್ತು ರಾಜ್ಯಗಳ ಪೊಲೀಸರಿಗೆ ಬೇಕಾದವನು. ಅವನ ಮೇಲಿರುವ ಆರೋಪಗಳ ತನಿಖೆ ಮತ್ತು ವಿಚಾರಣೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಏನೇ ಆಗಿರಲಿ ಅನಗತ್ಯ ವಿಳಂಬಕ್ಕೆ ಅವಕಾಶ ಕೊಡದೆ ತ್ವರಿತವಾಗಿ ತನಿಖೆ ಮತ್ತು ವಿಚಾರಣೆ ಮಾಡಿ ಮುಗಿಸಬೇಕು. ಅದಕ್ಕೆ ವಿವಿಧ ರಾಜ್ಯಗಳ ಪೊಲೀಸರ ನಡುವೆ ಸಾಮರಸ್ಯದ ಅಗತ್ಯವಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಜತೆ ಚರ್ಚಿಸಿ, ತನಿಖೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಆದಷ್ಟು ಬೇಗ ಆತನಿಗೆ ಶಿಕ್ಷೆಯಾದರೆ ಅವನ ದುಷ್ಕೃತ್ಯಗಳಿಗೆ ಬಲಿಯಾದವರ ಆತ್ಮಗಳಿಗೆ ಶಾಂತಿ ಸಿಕ್ಕೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry