ಮಹಮ್ಮದ ಪೈಗಂಬರರು ಸರ್ವರಿಗೂ ಆದರ್ಶ

7

ಮಹಮ್ಮದ ಪೈಗಂಬರರು ಸರ್ವರಿಗೂ ಆದರ್ಶ

Published:
Updated:

ವಿಜಾಪುರ: `ದೇಶದ ಮುಸಲ್ಮಾನರು ಖಾಜಾ ಗರೀಬ್ ನವಾಜ್, ಖಾಜಾ ಬಂದೇನವಾಜ್ ಹಾಗೂ ಇತರ ಸೂಫಿ ಸಂತರ ಮೇಲೆ ಸಂಪೂರ್ಣ ವಿಶ್ವಾಸ ಮತ್ತು ನಂಬಿಕೆ ಇಟ್ಟಿದ್ದಾರೆ~ ಎಂದು ಹೈದಾರಾಬಾದಿನ ಮೌಲಾನಾ ಕಾಜಿಂ ಪಾಷಾ ಹೇಳಿದರು.ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಶನಿವಾರ  ಪ್ರವಾದಿ ಮಹಮ್ಮದ ಪೈಗಂಬರ ಜನ್ಮದಿನದ ನಿಮಿತ್ತ ಅಲ್ ಹಾಸ್ಮಿ ಯೂತ್ ವಿಂಗ್ ವತಿಯಿಂದ ಏರ್ಪಡಿಸಿದ್ದ ಮಿಲಾದೆ ಮುಸ್ತಫಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಸೂಫಿ ಸಂತರು ಪ್ರವಾದಿ ಮಹಮ್ಮದ ಪೈಗಂಬರರ ಜೀವನ ಚರಿತ್ರೆ, ತತ್ವ ಸಿದ್ಧಾಂತಗಳ ಪಾಲನೆ ಮಾಡಿ ಇಡೀ ಜಗತ್ತಿನಾದ್ಯಂತ ಸಂಚರಿಸಿ ಅವರ ತತ್ವ ಸಿದ್ಧಾಂತಗಳನ್ನು ಜನತೆಗೆ ತಿಳಿಸಿ ಈ ಮೂಲಕ  ಶಾಂತಿ, ಸೌಹಾರ್ದತೆಯ  ಸಂದೇಶ ಸಾರಿದರು.ಇಡೀ ಮಾನವ ಕುಲಕ್ಕೆ ಪ್ರವಾದಿ ಮಹಮ್ಮದ ಪೈಗಂಬರರು ಮಾದರಿ ಯಾಗಿದ್ದು, ಅವರ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟು ನಡೆದರೆ ಯಶಸ್ಸು ಖಂಡಿತ ಸಾಧ್ಯ. ಅವರ ಜೀವನಾದರ್ಶಗಳನ್ನು ಜನರು ಜೀವನ ದಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ಇಂಥಹ ಕಾರ್ಯಕ್ರಮಗಳು ಅರ್ಥಪೂರ್ಣವೆನಿಸುತ್ತವೆ.ನಮ್ಮ ದೇಶ ಮತ್ತು ದೇಶದ ಸಂವಿಧಾನದ ಕುರಿತು ಅತೀವ ಗೌರವವಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ದೇಶದ ಮುಸ್ಲಿಮರು ಭಾರತದಲ್ಲಿ ನೆಮ್ಮದಿ, ಶಾಂತಿಯಿಂದ ಇದ್ದಾರೆ.  ಶಾಂತಿಯನ್ನೇ ಬಯಸುತ್ತಾರೆ ಎಂದು ಹೇಳಿದರು.ಇನ್ನೊಬ್ಬ ಮುಖ್ಯ ಅತಿಥಿ ಮಾಜಿ ಸಚಿವ ಆರ್. ರೋಶನ್ ಬೇಗ ಅವರು ಮಾತನಾಡಿ, ಪಾಶ್ಚಾತ್ಯ ರಾಷ್ಟ್ರ ಹಾಗೂ ಹಿಂದುಪರ ಸಂಘಟನೆಗಳು  ಇಸ್ಲಾಂ ಧರ್ಮದ ಕುರಿತು ಅಪಪ್ರಚಾರ ಮಾಡುತ್ತಿವೆ. ಆದರೆ ಇಸ್ಲಾಂ ಧರ್ಮ ಶಾಂತಿ ಮತ್ತು ಸೌಹಾರ್ದದ ಸಂಕೇತವಾಗಿದೆ. ದೇಶದ ಮುಸ್ಲಿಮರು ಪ್ರವಾದಿ ಮಹಮ್ಮದ ಪೈಗಂಬರರ ತತ್ವ, ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸರ್ವರೊಂದಿಗೆ ಸೌಹಾರ್ಧತೆ ಮತ್ತು ಭಾವೈಕ್ಯತೆಯಿಂದ ಬಾಳಬೇಕು ಎಂದು ಕರೆ ಕೊಟ್ಟರು.ಪ್ರಾಸ್ತಾವಿಕವಾಗಿ ಮೌಲಾನಾ ತನ್ವೀರ್ ಪೀರಾ ಹಾಸ್ಮಿ ಮಾತನಾಡಿ, ಮನುಷ್ಯನು  ಪ್ರಾಪಂಚಿಕ ಜೀವನದಲ್ಲಿ ಯಶಸ್ಸು ಹೊಂದಬೇಕಾದರೆ ಪ್ರವಾದಿ ಮಹಮ್ಮದ ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ನಗರದ  ನೇತ್ರ ತಜ್ಞ ಡಾ. ಪ್ರಭುಗೌಡ ಪಾಟೀಲ ಹಾಗೂ ಜಾಮಿಯಾ ಹಾಸಿಂಪೀರದ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೊ. ಸೈಯ್ಯದ ಮೈಯುದ್ದೀನ್ ಹಾಸ್ಮಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಡಾ. ಅಫ್ಜಲ್ ಪೀರಜಾದೆ, ಎಸ್.ಎಂ. ಪಾಟೀಲ ಗಣಿಹಾರ, ಮೊಸಿನ್ ಗೊಲೆವಾಲೆ, ಕಪಾಲೆ ಇಂಜನಿಯರ್, ಎಂ.ಸಿ. ಮುಲ್ಲಾ, ಮುಜ್ತಫಾ ಹುಸೇನ ಜಾಗೀರದಾರ ಇವರಲ್ಲದೆ ನಗರದ ಮುಸ್ಲಿಂ ಧರ್ಮ ಗುರುಗಳು,  ಹಾಗೂ ಮುತುವಲ್ಲಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry