ಸೋಮವಾರ, ಅಕ್ಟೋಬರ್ 21, 2019
26 °C

ಮಹಲಿಂಗರಂಗ ಕನ್ನಡದ ಸಾಂಸ್ಕೃತಿಕ ವೀರ

Published:
Updated:
ಮಹಲಿಂಗರಂಗ ಕನ್ನಡದ ಸಾಂಸ್ಕೃತಿಕ ವೀರ

ದಾವಣಗೆರೆ: ಪಂಡಿತರಿಗಷ್ಟೇ ಮೀಸಲೆಂಬಂತೆ ಸಂಸ್ಕೃತ ಭಾಷೆಯಲ್ಲಿ ಮುಚ್ಚಿಟ್ಟಿದ್ದ ಅದ್ವೈತ ಸಿದ್ಧಾಂತವನ್ನು ಕನ್ನಡದಲ್ಲಿ ಬಿಚ್ಚಿಟ್ಟು ಜನಸಾಮಾನ್ಯರಿಗೆ ಹಂಚಿದ ಕೀರ್ತಿ ದಾವಣಗೆರೆಯ ಕನ್ನಡದ ಉದ್ದಾಮ ಕವಿ `ಮಹಲಿಂಗರಂಗ~ ಅವರಿಗೆ ಸಲ್ಲುತ್ತದೆ ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ. ಸಿದ್ದಪ್ಪ ಅಭಿಪ್ರಾಯಪಟ್ಟರು.ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಗೌರಮ್ಮ ಪಿ. ರಾಮರಾವ್ ಚಾರಿಟಬಲ್ ಟ್ರಸ್ಟ್ ನಗರದ ತರಳಬಾಳು ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಮಹಲಿಂಗರಂಗ ಪ್ರಶಸ್ತಿ~ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.`ಸಂಸ್ಕೃತ~ ಮಡಿಭಾಷೆಯೆಂದು, ಕನ್ನಡ ಬಳಸಿದರೆ ಮೈಲಿಗೆಯಾಗುತ್ತದೆ ಎಂದು ನಂಬಿದ್ದ ಸಂಸ್ಕೃತ ಪಂಡಿತರಿಗೆ ಸವಾಲು ಎಸೆದ ಕವಿ ಮಹಲಿಂಗರಂಗ, ಉಪನಿಷತ್ತಿನ ತತ್ವವನ್ನು ಕನ್ನಡದಲ್ಲಿ ಪ್ರತಿಬಿಂಬಿಸಿದ್ದಾರೆ. ಪರಕೀಯ ಎನ್ನಿಸುವ ಸಂಸ್ಕೃತಕ್ಕಿಂತ, ತಾಯಿಯ ಹಾಲಿನಂತೆ ಸಹಜವಾಗಿ ಒಲಿದಿರುವ ತಾಯ್ನುಡಿಯಾದ ಕನ್ನಡದಿಂದಲೇ ಮೋಕ್ಷ ಸಾಧ್ಯ ಎಂಬುದನ್ನು ತಮ್ಮ `ಅನುಭಾವಾಮೃತ~ ಕೃತಿಯಿಂದ ಸಾಧಿಸಿ ತೋರಿಸಿದ್ದಾರೆ. ಹಾಗಾಗಿ, ಮಹಲಿಂಗರಂಗ ಕನ್ನಡದ ಸಾಂಸ್ಕೃತಿಕ ವೀರ ಎಂದರೂ ಅತಿಶೋಕ್ತಿಯಲ್ಲ ಎಂದು ಬಣ್ಣಿಸಿದ ಅವರು, ಕನ್ನಡ ಬರೀ ಸಾಹಿತ್ಯ ಭಾಷೆಯಾಗಿ ಅಭಿವೃದ್ಧಿಯಾದರೆ ಸಾಲದು; ಕನ್ನಡ ತಂತ್ರಜ್ಞಾನದ ವಿಜ್ಞಾನ ಭಾಷೆಯಾಗಿ ಬೆಳೆಯಬೇಕು ಎಂದರು.ಸಾಧುಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್. ಜಯದೇವಪ್ಪ ಮಾತನಾಡಿ, ಮಹಲಿಂಗರಂಗರ ಅದ್ವೈತಕ್ಕೂ, ಲೇಖಕ ಕೆ.ಜಿ. ಗುರುಮೂರ್ತಿ ಅವರ ಮಾನವ ಶಾಸ್ತ್ರಕ್ಕೂ ಸಾಮ್ಯತೆ ಇದೆ. ಹಾಗಾಗಿ, ಗುರುಮೂರ್ತಿ ಅವರಿಗೆ `ಮಹಲಿಂಗರಂಗ ಪ್ರಶಸ್ತಿ~ ನೀಡಿರುವುದು ಅರ್ಥಪೂರ್ಣ ಎಂದರು.ಶಾಯಿರಿ ಕವಿ ಪ್ರೊ.ಇಟಗಿ ಈರಣ್ಣ ಮಾತನಾಡಿ, ಭಾಷಾ ರಾಜಕಾರಣದಿಂದ ಕನ್ನಡ ಅವಜ್ಞೆ, ತುಳಿತಕ್ಕೆ ಒಳಗಾಗಿದ್ದ ಕಾಲದಲ್ಲಿ ಉದಯಿಸಿದ ನಾರಾಯಣಪ್ಪ, ಚಾಮರಸರ ಸಾಲಿನಲ್ಲಿ ನಿಲ್ಲುವಂತಹ ವ್ಯಕ್ತಿತ್ವ ಕವಿ ಮಹಲಿಂಗರಂಗ ಅವರಿಗೆ ಇತ್ತು. `ಅನುಭವಾಮೃತ~ ಕೃತಿಗೆ ಅವರು ಭಾಮಿನೀ ಷಟ್ಪದಿಯಲ್ಲಿ ವಿಶ್ವಶಕ್ತಿಯನ್ನು ತುಂಬಿದ್ದಾರೆ. ಇದು ಗಹನವಾದ ಅಧ್ಯಾತ್ಮವನ್ನು ಸರಳ ಶೈಲಿಯಲ್ಲಿ ದೇಸಿ ಉಪಮೆಗಳೊಡನೆ ಅನಾವರಣಗೊಳಿಸುವ ಮೌಲಿಕ ಕೃತಿಯಾಗಿದೆ ಎಂದರು.ಸಾಹಿತ್ಯ ಹೃದಯ ಶ್ರೀಮಂತಿಕೆಯನ್ನು ಬೆಳೆಸುತ್ತದೆ. ಕೇವಲ ವಿಜ್ಞಾನದ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬ ಭ್ರಮೆಯಿಂದ ಹೊರಬರಬೇಕಿದೆ. ಅಭಿವೃದ್ಧಿ ಎಂದು ಬಡಿದಾಡುವ; ಸೂರ್ಯ-ಚಂದ್ರರನ್ನು ಬದಲಿಸುವ ಶಕ್ತಿ ಪ್ರದರ್ಶಿಸುವ ನಾವು ಇದುವರೆಗೂ ನಮ್ಮ ರೈತರನ್ನೇಕೆ ಬದಲಿಸಿಲ್ಲ. ನಾಗರಿಕತೆಯ ಆದಿಯಲ್ಲಿದ್ದ ರೈತರ ನೇಗಿಲು; ಕೂರಿಗೆ -ಕುಂಟೆ, ಬಂಡಿಗಳಲ್ಲೇಕೆ ಬದಲಾವಣೆ ಕಂಡಿಲ್ಲ. ಭ್ರಷ್ಟಾಚಾರ, ದೌರ್ಜನ್ಯ, ತಾರತಮ್ಯಗಳಿಗೇಕೆ ಕಡಿವಾಣ ಬಿದ್ದಿಲ್ಲ. ಹೃದಯ ಶ್ರೀಮಂತಿಕೆ, ಸಾಂಸ್ಕೃತಿಕ ಬದುಕು, ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡ ದೇಶವೇ ನಿಜವಾದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬಲ್ಲದೇ ಹೊರತು, ವಿಜ್ಞಾನದ ಅಭಿವೃದ್ಧಿಯಲ್ಲ ಎಂದು ಮಾರ್ಮಿಕವಾಗಿ ನುಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಸದಾಶಿವಪ್ಪ ಶ್ಯಾಗಲೆ ಮಾತನಾಡಿ, ರೂ 2 ಕೋಟಿ ವೆಚ್ಚದಲ್ಲಿ ಕನ್ನಡ ಭವನದ ನಿರ್ಮಾಣ ಕಾರ್ಯ ಸಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಅವರು ವಾಚನಾಲಯ ಮತ್ತು ಗ್ರಂಥಾಲಯಕ್ಕೆ ರೂ 7ಲಕ್ಷ ಅನುದಾನ ನೀಡಿದ್ದಾರೆ. ದಾನಿಗಳಿಂದ ರೂ 2ಲಕ್ಷದಷ್ಟು ಹಣ ಸಂಗ್ರಹಿಸಲಾಗಿದೆ. ಉಳಿದಂತೆ ಪರಿಷತ್ತಿನ ರೂ 3ಲಕ್ಷ ಹಣ ಸಂಗ್ರಹವಿದೆ. ಶೀಘ್ರ ಕನ್ನಡ ಭವನ ನಿರ್ಮಾಣ ಕಾರ್ಯಕ್ರವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಘಟಕ ಶ್ರಮಿಸುತ್ತಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿದರು. ಲೇಖಕ ಡಾ.ಕೆ.ಜಿ. ಗುರುಮೂರ್ತಿ ಅವರಿಗೆ `ಮಹಲಿಂಗರಂಗ ಪ್ರಶಸ್ತಿ~ ಪ್ರದಾನ ಮಾಡಲಾಯಿತು.ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕ ಮಾತನಾಡಿದರು.

ಪ್ರೊ.ಎಸ್.ಬಿ. ರಂಗನಾಥ್, ಮೋತಿ ರಾಮರಾವ್, ಬಿ.ವಿ. ವೀರಭದ್ರಪ್ಪ, ಮಳಲ್ಕೆರೆ ಗುರುಮೂರ್ತಿ, ಕುಂ.ಬಾ. ಸದಾಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು. ಎಂ.ಡಿ. ದೀಪಾ ಪ್ರಾರ್ಥಿಸಿದರು. ಎಚ್.ಎನ್. ಪ್ರದೀಪ ಕಾರ್ಯಕ್ರಮ ನಿರೂಪಿಸಿದರು. ಎಲ್. ನಾಗರಾಜ್ ವಂದಿಸಿದರು.

 

Post Comments (+)