ಬುಧವಾರ, ಆಗಸ್ಟ್ 21, 2019
28 °C

`ಮಹಾಕಾವ್ಯಗಳಲ್ಲಿ ಮಾನವೀಯತೆ ಪಾಠ'

Published:
Updated:
`ಮಹಾಕಾವ್ಯಗಳಲ್ಲಿ ಮಾನವೀಯತೆ ಪಾಠ'

ಬೆಂಗಳೂರು: `ಪ್ರಸ್ತುತ ದಿನಗಳಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ರಾಮಾಯಣ ಮತ್ತು ಮಹಾಭಾರತದ ಮೂಲಕ ಮಾನವೀಯತೆಯ ಪಾಠ ಕಲಿಯಬೇಕಿದೆ' ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಹೇಳಿದರು.ಆಶ್ವಾಸನ್ ಪ್ರತಿಷ್ಠಾನ ಮತ್ತು ರೋಟರಿ ಕ್ಲಬ್ ಆಫ್ ಬೆಂಗಳೂರು ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಹಿರಿಯರ ಪಾತ್ರ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಮಾನವೀಯ ಅಂಶಗಳ ಕುರಿತು ನಮ್ಮ ದೇಶದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ನೀತಿ ಪಾಠ ಹೇಳಲಾಗಿದೆ. ಮಾನವೀಯತೆ ಮರೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಈ ಮಹಾಕಾವ್ಯಗಳ ಅಂಶಗಳು ಮಾದರಿಯಾಗುತ್ತವೆ' ಎಂದರು.`ರಾಮ ವನವಾಸಕ್ಕೆ ಹೋದಾಗ ಭರತ ಅಧಿಕಾರದ ಲಾಲಸೆ ಇಲ್ಲದೆ ರಾಜ್ಯಭಾರ ಮಾಡಿದ. ರಾಜ್ಯದ ಆಡಳಿತ ಮತ್ತು ಪ್ರಜೆಗಳ ಹಿತರಕ್ಷಣೆ ಕಾಯ್ದುಕೊಳ್ಳುವ ಬಗ್ಗೆ ರಾಮ ವನವಾಸದ ಸಂದರ್ಭದಲ್ಲಿ ಭೇಟಿಯಾದ ಭರತನಿಗೆ ಕಿವಿ ಮಾತು ಹೇಳುತ್ತಾನೆ. ಭರತ ಹಾಗೂ ರಾಮನಂತಹ ಆಡಳಿತಗಾರರು ಇಂದು ಬೇಕಾಗಿದ್ದಾರೆ' ಎಂದರು.`ಇಂದಿನ ಆಧುನಿಕ ಯುಗದಲ್ಲಿ ಜನರು ಮಾನವೀಯತೆ ಮರೆತು, ಹೆಚ್ಚು ಸ್ವಾರ್ಥಿಗಳಾಗಿದ್ದಾರೆ. ಯುವಕರು ಹಿರಿಯರನ್ನು ಗೌರವಿಸುತ್ತಿಲ್ಲ. ಈ ಪ್ರವೃತ್ತಿಯನ್ನು ತಪ್ಪಿಸಬೇಕಿದೆ' ಎಂದರು.ರೋಟರಿ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷೆ ಪೂರ್ಣಿಮಾ ರಂಗನಾಥ್ ಮಾತನಾಡಿ, `ಹಿರಿಯರಿಗೆ ಅನೇಕ ಆರೋಗ್ಯ ಸಮಸ್ಯೆಗಳಿರುತ್ತವೆ. ಅವರು ಇಂದು ಏಕಾಂಗಿತನದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮನೆಯಲ್ಲಿನ ಕಿರಿಯರು ಹಿರಿಯರ ಆರೋಗ್ಯದ ಬಗ್ಗೆ ಗಮನ ನೀಡಬೇಕು. ಅವರಿಗೆ ಗೌರವ ನೀಡಬೇಕು' ಎಂದು ಹೇಳಿದರು.`ವೃದ್ಧರೂ ಸಹ ತಮ್ಮಿಂದಾದ ಕೆಲಸ ಮಾಡಿ, ಸ್ವಾಭಿಮಾನದಿಂದ ಬದುಕುವಂತೆ ಮಾಡಲು ರೋಟರಿ ಸಂಸ್ಥೆಯು ಉದ್ಯೋಗ ಮೇಳವನ್ನು ಆಯೋಜಿಸುತ್ತ ಬಂದಿದೆ. ಹಿರಿಯರ ಅನುಭವವನ್ನು ಕಿರಿಯರು ಪಡೆದು ಉನ್ನತಿ ಸಾಧಿಸಬೇಕು' ಎಂದರು.

Post Comments (+)