ಮಹಾಗಣಪತಿ ಉತ್ಸವಕ್ಕೆ ಕೋಟೆ ನಾಡು ಸಜ್ಜು

7

ಮಹಾಗಣಪತಿ ಉತ್ಸವಕ್ಕೆ ಕೋಟೆ ನಾಡು ಸಜ್ಜು

Published:
Updated:

ಚಿತ್ರದುರ್ಗ: ಹಿಂದೂ ಮಹಾಸಭಾದ ಗಣೇಶ ವಿಸರ್ಜನೆಯ ಅಂಗವಾಗಿ ಶನಿವಾರ ನಡೆಯಲಿರುವ ‘ಬೃಹತ್‌ ಶೋಭಾ ಯಾತ್ರೆ’ಗೆ ಕೋಟೆ ನಾಡು ಸಜ್ಜಾಗಿದೆ.ಶೋಭಾಯಾತ್ರೆ ಸಾಗಲಿರುವ  ಪ್ರಮುಖ ಬೀದಿಗಳೆಲ್ಲಾ ಕೇಸರಿ ಮಯವಾಗಿವೆ. ನಗರದ ಪ್ರಮುಖ ವೃತ್ತಗಳಾದ ಮಹಾವೀರ ವೃತ್ತ, ಮದಕರಿ ವೃತ್ತ, ಮಹಾತ್ಮ ಗಾಂಧಿ ವೃತ್ತಗಳಲ್ಲಿ ಕೇಸರಿ ಬಾವುಟಗಳು, ಬಂಟಿಂಗ್ಸ್, ಟೇಪುಗಳು ರಾರಾಜಿಸುತ್ತಿವೆ. ‘ಸಮುದಾಯವನ್ನು ಒಗ್ಗೂಡಿಸುವ ಹಾಗೂ ಧಾರ್ಮಿಕ ಭಾವನೆ ಜಾಗೃತಿಗಾಗಿ ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ನಡೆಯುವಂತೆ ನಗರದಲ್ಲೂ ಗಣೇಶೋತ್ಸವ ಆಯೋಜಿಸಲಾಗುತ್ತಿದೆ. ಗಣೇಶ ಉತ್ಸವಕ್ಕೆ ಜಿಲ್ಲೆಯ ಜತೆಗೆ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಸುಮಾರು 50 ಸಾವಿರ ಜನ ಸೇರುವ ನಿರೀಕ್ಷೆ ಇದೆ’ ಎನ್ನುತ್ತಾರೆ ಹಿಂದೂ ಮಹಾಸಭಾ ಗಣೇಶೋತ್ಸವ ಆಯೋಜಿಸುತ್ತಿರುವ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು.ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಉತ್ಸವ ನಡೆಯಲಿದೆ. ಸ್ಟೇಡಿಯಂ ರಸ್ತೆಯ ಆಂಜನೇಯ ಸ್ವಾಮಿ ದೇವಾಲಯದಿಂದ ಆರಂಭವಾಗುವ ಈ ಉತ್ಸವ ಬಿ.ಡಿ.ರಸ್ತೆ, ಮದಕರಿ ವೃತ್ತ, ಎಂ.ಜಿ.ವೃತ್ತ, ಕನಕ ವೃತ್ತದ ಮೂಲಕ ಚಂದ್ರವಳ್ಳಿ ತಲುಪಲಿದೆ. ಚಂದ್ರವಳ್ಳಿ ಕೆರೆಯಲ್ಲಿ ಗಣಪತಿ ವಿಗ್ರಹ ವಿಸರ್ಜಿಸಲಾಗುತ್ತದೆ. ಉತ್ಸವದಲ್ಲಿ 25ಕ್ಕೂ ಹೆಚ್ಚು ದೇಶಭಕ್ತರ ಸ್ತಬ್ಧಚಿತ್ರಗಳು ಪಾಲ್ಗೊಳ್ಳುತ್ತವೆ. 20ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸುತ್ತವೆ. ಉತ್ಸವ ಸಾಗುವ ರಸ್ತೆಯಲ್ಲಿ 30 ಕಡೆ ಸ್ವಯಂ ಸೇವಕರು ಉಪಹಾರ, ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಉತ್ಸವದಲ್ಲಿ ಚಿತ್ರದುರ್ಗ ಶಾರದಾಶ್ರಮದ ಬ್ರಹ್ಮನಿಷ್ಠಾನಂದ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಗುರುಪೀಠದ ಸೇವಾಲಾಲ್ ಸ್ವಾಮೀಜಿ, ಮಡಿವಾಳ ಮಾಚಿದೇವ ಗುರುಪೀಠದ ಮಾಚಿದೇವ ಶ್ರೀ, ಯಾದಾವನಂದ ಶ್ರೀ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಶೋಭಾಯಾತ್ರೆಯ ಸಂಚಾಲಕರಲ್ಲಿ ಒಬ್ಬರಾದ ಬಂಜರಂಗದಳದ ಪ್ರಬಂಜನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry