ಶನಿವಾರ, ಮೇ 8, 2021
26 °C

ಮಹಾತ್ಮರ ಸ್ಮರಣೆ ಬದುಕಿಗೆ ಪ್ರೇರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾತ್ಮರ ಸ್ಮರಣೆ ಬದುಕಿಗೆ ಪ್ರೇರಣೆ

ಗುಲ್ಬರ್ಗ: ನಾವು ಆಚರಿಸುವ ಮಹಾತ್ಮರ ಜಯಂತಿಗಳು ವರ್ತಮಾನದಲ್ಲಿ ಜೀವನ ಕಟ್ಟಿಕೊಳ್ಳುವುದರ ಜತೆಗೆ ಭವಿಷ್ಯತ್ತಿನಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರೇರೆಪಿಸುತ್ತವೆ ಎಂದು ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಮಹಿಳಾ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಗುರುವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ 121ನೇ ಜಯಂತಿ ನಿಮಿತ್ತ ಸಮಾನತೆಯ ಸಾಮ್ರಾಟ್ ಡಾ. ಅಂಬೇಡ್ಕರ್ ಒಂದು ಚಿಂತನ, `ಡಾ. ಅಂಬೇಡ್ಕರ್ ದೃಷ್ಟಿಯಲ್ಲಿ ಮಹಿಳಾ ಸಮಾನತೆ~ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಂಬೇಡ್ಕರ್ ದೇಶದಲ್ಲಿನ ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡಿದ್ದರು.  ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳಾ ಸಮುದಾಯಕ್ಕೆ ಸ್ವಾತಂತ್ರ್ಯ ನೀಡುವುದಕ್ಕಾಗಿ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಮಾನವೀಯತೆಯಿಂದ ಮೆರೆದಿದ್ದರು ಎಂದು ಕೊಂಡಾಡಿದರು.ಶಾಸಕಿ ಅರುಣಾ ಸಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸಬಾರದು. ರಾಷ್ಟ್ರನಾಯಕರ ವಿಚಾರಗಳನ್ನು ಎಲ್ಲರೂ ಗೌರವಿಸಬೇಕು. ಅಂಬೇಡ್ಕರ್ ಮಹಿಳಾ ಸಮಾನತೆಗಾಗಿ ಹೋರಾಡಿದ ಮಹಾತ್ಮ ಎಂದು ನುಡಿದರು.ಅತಿಥಿಯಾಗಿದ್ದ ಡಾ. ವಿಠ್ಠಲ ದೊಡ್ಮನಿ ಮಾತನಾಡಿ, ಅದ್ದೂರಿಯಾಗಿ ಆಚರಣೆಗೊಳ್ಳುತ್ತಿರುವ ಜಯಂತ್ಯುತ್ಸವಗಳಲ್ಲಿ ಕೆಲವು ಬಾರಿ ಕ್ಷುಲ್ಲಕ ಕಾರಣಗಳೇ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಹ ಗದ್ದಲ, ಕಾದಾಟಕ್ಕೆ ಕಾರಣವಾಗುತ್ತಿವೆ. ಇಂತಹ ಘಟನೆಗಳನ್ನು ವೀಕ್ಷಿಸುತ್ತಿದ್ದರೆ ಮುಂದೊಂದು ದಿನ ಜಯಂತಿಗಳ ಆಚರಣೆಗಳು ಮೂಲ ಉದ್ದೇಶದಂತೆ ಜರುಗುತ್ತವೆಯೇ ಎಂಬ ಸಂಶಯ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಅಂಬೇಡ್ಕರ್ ರಚಿಸಿ, ಅನುಷ್ಠಾನಗೊಳಿಸಿದ ಸಂವಿಧಾನದಿಂದ ಇಂದು ಅನೇಕ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ. ರಾಷ್ಟ್ರಪತಿ, ಪ್ರಧಾನ ಮಂತ್ರಿಗಳ ಹುದ್ದೆಗಳಲ್ಲಿ ಮಹಿಳೆ ಮುಂದುವರೆಯಬೇಕಾದರೆ ಅಂಬೇಡ್ಕರರ ಸಾಂವಿಧಾನಿಕ ದೂರದೃಷ್ಟಿ ಕಾರಣ ಎಂದು ವಿವರಿಸಿದರು.ಮಹಾನ್ ವ್ಯಕ್ತಿಗಳ ಜಯಂತಿಗಳು ಮೆರವಣಿಗೆ ಮತ್ತು ಭಾವಚಿತ್ರಗಳ ಪೂಜೆಗೆ ಸೀಮಿತಗೊಳ್ಳಬಾರದು, ಯುವಜನತೆಯಲ್ಲಿ ಚಿಂತನೆ ಮೂಡಿಸುವಂತಹ ಚರ್ಚೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದಿನಾಚರಣೆಗೆ ಒಳ್ಳೆಯ ಅರ್ಥ ಕಲ್ಪಿಸಬೇಕು ಎಂದು ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ನುಡಿದರು.

 

ಪ್ರಾಚಾರ್ಯ ಮುರಳೀಧರ ರತ್ನಗಿರಿ ಮಾತನಾಡಿದರು. ಉಪನ್ಯಾಸಕ ರಾಜಶೇಖರ ಕಲ್ಬುರ್ಗಿ ನಿರೂಪಿಸಿದರು. ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮಿ, ಅಂಬಿಕಾ ವಚನ ಗಾಯನ ಮಾಡಿದರು. ಶ್ರೀಕಾಂತ ತಿಳಗೊಳ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.