ಸೋಮವಾರ, ಮೇ 23, 2022
24 °C

ಮಹಾತ್ಮ ಗಾಂಧೀಜಿ, ಶಾಸ್ತ್ರೀಜಿಗೆ ಪ್ರೀತಿಯ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸರಳ ಜೀವನ ಮತ್ತು ಅಹಿಂಸಾ ಮಾರ್ಗದ ಸತ್ಯಾಗ್ರಹದ ಮೂಲಕ ಮಹಾತ್ಮ ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅವರ ಆದರ್ಶ ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಸ್ಮರಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಶ್ವ ಮನ್ನಣೆ ಗಳಿಸಿದ ಮಹಾನ್ ಪುರುಷ ಮಹಾತ್ಮ ಗಾಂಧೀಜಿ ಅವರ ಸ್ಮರಣೆ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಯಬೇಕು ಎಂದರು.ಲಾಲ್‌ಬಹದ್ದೂರ್ ಶಾಸ್ತ್ರಿ ಸಹ ಪ್ರಧಾನ ಮಂತ್ರಿಯಾಗಿದ್ದರೂ ತಮ್ಮ ಸರಳ, ಸಜ್ಜನಿಕೆಯಿಂದ ಉದಾತ್ತ ಧ್ಯೇಯಗಳೊಂದಿಗೆ ದೇಶ ಎದುರಿಸುತ್ತಿದ್ದ ಕಡುಬಡತನ, ಆಹಾರ ಸಮಸ್ಯೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದಂತಹ ಮಹಾನ್ ವ್ಯಕ್ತಿಯಾಗಿದ್ದರು ಎಂದು ಗುಣಗಾನ ಮಾಡಿದರು. ಇಂತಹ ಮಹಾನ್ ಪುರುಷರ ಜೀವನ ಚರಿತ್ರೆಯನ್ನು ಶಾಲಾ, ಕಾಲೇಜುಗಳ ಪಠ್ಯ ವಿಷಯಗಳನ್ನಾಗಿ ಅಳವಡಿಸಿರುವುದು ಗಮನಾರ್ಹವಾಗಿದೆ ಎಂದು ತಿಳಿಸಿದರು.ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಿ. ಚಿದಾನಂದಪ್ಪ ಮಾತನಾಡಿದರು. 

ಸೇಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ಭಜನೆ ವೈಷ್ಣವ ಜನತೆ ತೇರೋ ಕಹಿಯೇ, ರಾಮ ರತನ್ ಧನ್ ಪಾಯೋ, ಹಾಗೂ ಭಗವದ್ಗೀತೆ, ಕುರಾನ್, ಬೈಬಲ್ ಗ್ರಂಥಗಳನ್ನು ಪಠಿಸಿದರು.ಪ್ರೊಬೇಷನ್ ಐಎಎಸ್ ಅಧಿಕಾರಿ ವಿನೋದಪ್ರಿಯ, ಉಪ ವಿಭಾಗಾಧಿಕಾರಿ ನಾಗರಾಜ್, ಸ್ವಾತಂತ್ರ್ಯ ಹೋರಾಟಗಾರರು, ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.ಹೆಚ್ಚುವರಿ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಣಪ್ಪ ಸ್ವಾಗತಿಸಿದರು. ವೆಂಕಣ್ಣಾಚಾರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ. ನೀಲಮ್ಮ ವಂದಿಸಿದರು. ಮೊಳಕಾಲ್ಮುರು

ಮಹಾತ್ಮ ಗಾಂಧಿ ಅವರ ಆದರ್ಶಗಳಿಗೆ ವಿರುದ್ಧ ದಿಕ್ಕಿನಲ್ಲಿ ಪ್ರಸ್ತುತ ದೇಶ ಸಾಗುತ್ತಿರುವ ಮೂಲಕ ಆತಂಕ ಮೂಡಿಸಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ವಿಷಾದಿಸಿದರು.ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾತಿ ಹೆಸರಿನ ಜಯಂತಿಗಳು ಮೆರವಣಿಗೆ, ಸಡಗರದಿಂದ ಆಚರಿಸಲಾಗುತ್ತದೆ. ಆದರೆ ದೇಶಕ್ಕಾಗಿ ಪ್ರಾಣ ಮುಡುಪಿಟ್ಟ ಗಾಂಧೀಜಿ ಅವರ ಜಯಂತಿಯನ್ನು ನಾಲ್ಕು ಗೋಡೆಗಳ ಒಳಗಡೆ ಸರಳವಾಗಿ ಆಚರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ನಾವೆಲ್ಲರೂ ಪರಾಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.ಮುಂದಿನ ವರ್ಷದಿಂದ ತಾಲ್ಲೂಕು ಆಡಳಿತ ವತಿಯಿಂದ ಗಾಂಧಿ ಜಯಂತಿಯನ್ನು ಬಹಿರಂಗ ಕಾರ್ಯಕ್ರಮವಾಗಿ ಅದ್ದೂರಿ ಆಚರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಗತ್ಯವಿರುವ ಸಹಕಾರವನ್ನು ತಾವು ನೀಡುವುದಾಗಿ ಶಾಸಕರು ಭರವಸೆ ನೀಡಿದರು.

ತಹಶೀಲ್ದಾರ್ ಕೆ. ವೆಂಕಟಪ್ಪ ಅಧ್ಯಕ್ಷತೆ ವಹಿಸಿದ್ದರು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರತ್ಮಮ್ಮ ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಕಾಂತರೆಡ್ಡಿ, ಸದಸ್ಯ ಚಿದಾನಂದಪ್ಪ, ಸಿಪಿಐನ ಪಟೇಲ್, ಜಿ. ಪಾಪನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಉಮಾದೇವಿ, ಕೃಷಿ ಅಧಿಕಾರಿ ಡಾ.ಕೆಂಗೇಗೌಡ, ವಿಷ್ಣುಸೇನಾ ಸಮಿತಿಯ ಶ್ರೀನಿವಾಸ ಮೂರ್ತಿ, ಸಾಕ್ಷರ ಭಾರತ್ ತಾಲ್ಲೂಕು ಸಂಯೋಜಕ ಕೆ. ಶಾಂತವೀರಣ್ಣ, ಮರಿಕುಂಟೆ ತಿಪ್ಪೇಸ್ವಾಮಿ, ಖಾಸೀಂ, ನಾಗರಾಜ ನಾಯಕ್ ಉಪಸ್ಥಿತರಿದ್ದರು. ಹೊಸದುರ್ಗ

ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ  ಭಾನುವಾರ  ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳ ಕೇಂದ್ರ ಸ್ಥಳದಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಸ್ವಚ್ಚತಾ ಉತ್ಸವ ಹಮ್ಮಿಕೊಳ್ಳಲಾಗಿತ್ತು.ಸ್ವಚ್ಛತಾ ಉತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಸದಸ್ಯರು ಜಾಥಾ ನಡೆಸಿ, ಸ್ವಚ್ಛತೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.ತಾಲ್ಲೂಕಿನ ಒಟ್ಟು 33 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತ ಉತ್ಸವದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಶಾಲಾ ಶಿಕ್ಷಕರು, ಅಂಗನವಾಡಿ  ಕಾರ್ಯಕರ್ತೆಯರು, ಸ್ತ್ರೀಶಕ್ತಿ  ಸಂಘಗಳ ಸದಸ್ಯರು ಭಾಗವಹಿಸಿದ್ದರು.ಧರ್ಮಪುರ

ಗಾಂಧೀಜಿ ತತ್ವಗಳು ಕೇವಲ ಭಾರತಕ್ಕೆ ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅನುಕರಣೀಯವಾಗಿದ್ದು, ಸಾರ್ವಕಾಲಿಕವಾಗಿವೆ ಎಂದು ಧರ್ಮಪುರ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಸ್. ನರೇಂದ್ರಪ್ಪ ತಿಳಿಸಿದರು. ಇಲ್ಲಿನ ಪಂಚಲಿಂಗೇಶ್ವರ ಪದವಿಪೂರ್ವ ಹಾಗೂ ಪ್ರಥಮದರ್ಜೆ ಕಾಲೇಜಿನಲ್ಲಿ ಭಾನುವಾರ  ಹಮ್ಮಿಕೊಂಡಿದ್ದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಶ್ರೀನಿವಾಸ್, ಉಪ ಪ್ರಾಂಶುಪಾಲ ಜುಂಜಪ್ಪ, ಉಪನ್ಯಾಸಕರಾದ ಲಕ್ಷ್ಮೀಕಾಂತ್, ಎಂ.ಎನ್. ರಂಗಸ್ವಾಮಿ, ಕೆ. ಪಾಂಡುರಂಗಪ್ಪ ಮಾತನಾಡಿದರು. ಬೊಪ್ಪಣ್ಣ, ಆ.ದೋ. ಪಾಂಡು, ಎಂ.ಜಿ. ರಂಗಸ್ವಾಮಿ, ಹೊನ್ನೇಶ್, ಉಗ್ರಪ್ಪ, ಮಂಜುನಾಥ್, ತಿಮ್ಮರಾಜು  ಉಪಸ್ಥಿತರಿದ್ದರು.ನಾಯಕನಹಟ್ಟಿ

ವಿದ್ಯಾರ್ಥಿಗಳು ಗಾಂಧೀಜಿಯ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಜಿ.ಪಂ. ಸದಸ್ಯೆ ಲಕ್ಷ್ಮೀದೇವಿ ಸಲಹೆ ನೀಡಿದರು.ಸಮೀಪದ ರೇ. ಲಂಬಾಣಿಹಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಗಾಂಧೀ ಜಯಂತಿ, ಉಚಿತ ನೋಟ್‌ಬುಕ್ ಮತ್ತು ಬೈಸಿಕಲ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಗಾಂಧೀಜಿ ಅವರ ಅಂದಿನ ಶ್ರಮವೇ ಇಂದಿನ ನಮ್ಮ ಸ್ವತಂತ್ರ ಜೀವನ. ಅವರು  ಶಿಸ್ತು ಮತ್ತು ಸರಳತೆಗೆ ಸಾಕ್ಷಿಯಾದವರು ಎಂದು ತಿಳಿಸಿದರು.ತಾ.ಪಂ. ಸದಸ್ಯ ಬಸವರಾಜ್, ಗ್ರಾ.ಪಂ. ಸದಸ್ಯ ಆರ್. ಜಯಣ್ಣ, ಮುಖ್ಯ ಶಿಕ್ಷಕ ಮೋಹನ್ ಕುಮಾರ್ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಸಣ್ಣಮಲ್ಲಮ್ಮ, ಸದಸ್ಯೆ ಸಾವಿತ್ರಿಬಾಯಿ, ಎಸ್‌ಡಿಎಂಸಿ ಅಧ್ಯಕ್ಷ ಮೋತಿನಾಯ್ಕ ಹಾಜರಿದ್ದರು. ಶಿಕ್ಷಕ ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು .ಚಳ್ಳಕೆರೆ

ಉದಾರೀಕರಣ, ಜಾಗತೀಕರಣ, ಖಾಸಗೀಕರಣದ ಪ್ರಸ್ತುತ ಕಾಲಘಟ್ಟದಲ್ಲಿ ಮಹಾತ್ಮ ಗಾಂಧಿ ಅವರ ಆದರ್ಶ, ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಜೀವಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿ.ವೈ. ಶಿವರುದ್ರಪ್ಪ ಹೇಳಿದರು.ಪಟ್ಟಣದ ನೆಹರು ವೃತ್ತದಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರಸ್ತುತ ದೇಶದಲ್ಲಿ ಭ್ರಷ್ಟಾಚಾರ, ಅನೈತಿಕ ರಾಜಕಾರಣ ತಾಂಡವವಾಡುತ್ತಿದೆ. ಇಂದಿನ ರಾಜಕಾರಣಿಗಳು ಜನಹಿತವನ್ನು ಮರೆತು ಹಣ ಮಾಡುವ ದಂಧೆಯಲ್ಲಿ ತೊಡಗಿರುವುದು ರಾಷ್ಟ್ರದ ದುರಂತವೇ ಸರಿ ಎಂದು ಅವರು ವಿಷಾದಿಸಿದರು.ಗಾಂಧೀಜಿ ಅರ್ಥಿಕ ಚಿಂತನೆಗಳನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ. ಇಂದಿನ ಆಡಳಿತಾರೂಢ ಸರ್ಕಾರಗಳು ಗಾಂಧೀಜಿ ಅರ್ಥಿಕ ನೀತಿಗಳನ್ನು ಅಳವಡಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಹೇಳಿದರು.ಕಾರ್ಮಿಕ ಮುಖಂಡರಾದ ಖಾದರ್‌ಬಾಷಾ, ದಾದಾಪೀರ್, ಚಿತ್ತಪ್ಪ, ಕೆ. ಕುಮಾರ್, ನಾಗಾಚಾರ್, ಷರೀಫ್, ಬಿ. ರವಿ, ಅಜ್ಜಪ್ಪ ಮಾತನಾಡಿದರು. ಚಾಲಕರ ಸಂಘದ ಮುಖಂಡ ಓಬಯ್ಯ ಸ್ವಾಗತಿಸಿದರು. ಬಿ. ವೆಂಕಟೇಶ್ ವಂದಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.