ಮಂಗಳವಾರ, ಮಾರ್ಚ್ 9, 2021
23 °C
16ಕ್ಕೆ ರಾಜ್ಯದ ಪರ ವಕೀಲ ನಾರಿಮನ್‌ ಭೇಟಿ

ಮಹಾದಾಯಿಗಾಗಿ ಒಗ್ಗಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾದಾಯಿಗಾಗಿ ಒಗ್ಗಟ್ಟು

ಬೆಂಗಳೂರು: ಮಹಾದಾಯಿ ಮಧ್ಯಂತರ ಆದೇಶದ ಕುರಿತು ರಾಜ್ಯದ ಪರ ವಕೀಲ ಫಾಲಿ ಎಸ್‌. ನಾರಿಮನ್‌ ಅವರನ್ನು ಇದೇ 16ರಂದು ಭೇಟಿ ಮಾಡಿ ಅವರ ಸಲಹೆಯಂತೆ ಮುಂದಿನ ಹೆಜ್ಜೆ ಇಡಲು ಸದನ ನಾಯಕರು, ಸಂಸದರು, ಶಾಸಕರ ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿದೆ.ಮಹಾದಾಯಿ ವಿಷಯದಲ್ಲಿ ಸಮಾಲೋಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ  ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗದಗ, ಹಾವೇರಿ, ಬೆಳಗಾವಿ ಮತ್ತು ಧಾರವಾಡ  ಜಿಲ್ಲೆಗಳಿಗೆ 7.56 ಟಿಎಂಸಿ ಅಡಿ ನೀರು ಬಳಸಲು ಅನುಮತಿ ನೀಡುವಂತೆ ಮಹಾದಾಯಿ ನ್ಯಾಯಮಂಡಳಿಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು.ಅರ್ಜಿ  ವಜಾ ಆಗಿರುವುದರಿಂದ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸುವುದು ಹಾಗೂ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸುವ ಆಯ್ಕೆಗಳಿವೆ. ಈ ಬಗ್ಗೆ ನಾರಿಮನ್‌, ಕಾನೂನು ತಜ್ಞರು ಹಾಗೂ ನೀರಾವರಿ ತಜ್ಞರ ಜತೆ ಈಗಾಗಲೇ ಚರ್ಚಿಸಲಾಗಿದೆ’ ಎಂದರು.ಬುಧವಾರ ತೀರ್ಮಾನ: ಮಧ್ಯಂತರ ಆದೇಶ ವಿರೋಧಿಸಿ ನಡೆದ ಹೋರಾಟ ಸಂದರ್ಭದಲ್ಲಿ ಹೂಡಿರುವ ಮೊಕದ್ದಮೆ ವಾಪಸ್‌ ಪಡೆಯುವ ಬಗ್ಗೆ ಇದೇ ತಿಂಗಳ 10ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಅಮಾಯಕರು, ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ 188 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಇವರ ಪೈಕಿ ಬಹಳ ಜನ ಅಮಾಯಕರಿದ್ದಾರೆ. ಈ ಸಂಬಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಎಡಿಜಿಪಿ ರಾಘವೇಂದ್ರ ಔರಾದ್‌ಕರ್‌ ಅವರಿಗೆ ಸೂಚಿಸಿದ್ದೇನೆ. 2–3 ದಿನಗಳಲ್ಲಿ ವರದಿ ಕೈಸೇರಲಿದೆ.ಅಮಾಯಕರ ಮೇಲೆ ದಾಖಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ವಾಪಸ್‌ ಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.

ಸಭೆ ಆರಂಭವಾಗುತ್ತಿದ್ದಂತೆ ಸಂಸದರಾದ ಕಾಂಗ್ರೆಸ್ಸಿನ ಡಿ.ಕೆ. ಸುರೇಶ್‌, ಬಿಜೆಪಿಯ ಶೋಭಾ ಕರಂದ್ಲಾಜೆ ಅವರು ರೈತರ ಮೇಲೆ ಹೂಡಿರುವ ಮೊಕದ್ದಮೆ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದರು.ಸಭೆಯಲ್ಲಿ  ಮಾತಿನ ಚಕಮಕಿ: ಪ್ರಧಾನಿ ಮಧ್ಯಸ್ಥಿಕೆ ವಹಿಸಿದರೆ ಸಮಸ್ಯೆ ಪರಿಹಾರವಾಗಲಿದೆ ಎಂಬ ವಿಷಯ ಸಭೆಯಲ್ಲಿ ಪ್ರಸ್ತಾಪವಾದಾಗ ಕಾಂಗ್ರೆಸ್‌–ಬಿಜೆಪಿ ಸಂಸದರು ಪರಸ್ಪರ ದೂಷಿಸಿಕೊಂಡ ಘಟನೆ ಸಭೆಯಲ್ಲಿ ನಡೆದಿದೆ.ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ಬಿಜೆಪಿ ಸಂಸದರು ಪ್ರಧಾನಿ ಮನವೊಲಿಸಿ ನೀರು ಕೊಡಿಸಿ ಎಂದು ಕಾಂಗ್ರೆಸ್‌ ಸಂಸದರು, ಶಾಸಕರು ಆಗ್ರಹಿಸಿದರು. ಬಿಜೆಪಿ ಸಂಸದರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸರ್ವಪಕ್ಷ ಸಭೆಯಲ್ಲಿ ಇಂತಹ ಚರ್ಚೆ ಅಸಂಗತ ಎಂದು ಆಕ್ಷೇಪ ಎತ್ತಿದರು.ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಗೋವಾ ವಿಧಾನಸಭೆಯ ವಿರೋಧ ಪಕ್ಷ ಕಾಂಗ್ರೆಸ್‌ನ ನಾಯಕ ದಿಗಂಬರ ಕಾಮತ್‌ ಅವರು  ಪ್ರಧಾನ ಮಧ್ಯಸ್ಥಿಕೆಯಿಂದ ಪ್ರಯೋಜನವಿಲ್ಲ ಎಂದು ಅಧಿವೇಶನದಲ್ಲಿಯೇ ಹೇಳಿದ್ದಾರೆ. ಮೊದಲು ನಿಮ್ಮ ಪಕ್ಷದವರನ್ನು ಒಪ್ಪಿಸಿ ಎಂದು ಅವರು ತಿರುಗೇಟು ನೀಡಿದರು.‘ಲೋಕಸಭೆಯಲ್ಲಿ ಪ್ರಕಾಶ ಹುಕ್ಕೇರಿ, ಸುರೇಶ ಅಂಗಡಿ ಕಚ್ಚಾಡಿಕೊಂಡಂತೆ ಇಲ್ಲಿಯೂ ಮುಂದುವರಿಸುವುದು ಬೇಡ. ನಾವೆಲ್ಲಾ ಒಂದಾಗಿದ್ದೇವೆ ಎಂಬ  ಸಂದೇಶ ರವಾನಿಸೋಣ. ಕಾನೂನು ಹೋರಾಟವೊಂದೇ ದಾರಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಧ್ವನಿಗೂಡಿಸಿದರು.ಸಭೆಯಲ್ಲಿ ರಾಜ್ಯ  ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ರಮೇಶ ಜಿಗಜಿಣಗಿ, ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಕೆ.ಎಸ್. ಈಶ್ವರಪ್ಪ, ಮುಂಬೈ ಕರ್ನಾಟಕದ ಬಹುತೇಕ ಸಂಸದರು, ಶಾಸಕರು ಪಾಲ್ಗೊಂಡಿದ್ದರು.ಪ್ರತಿಭಟನೆ ಬಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ ಆವರಣ ಪ್ರವೇಶಿಸುವಾಗ ಕಳಸಾ–ಬಂಡೂರಿ ಹೋರಾಟ ಸಮಿತಿ ಸದಸ್ಯರು, ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌, ಸಾ.ರಾ. ಗೋವಿಂದು ಅವರು ಪ್ರತಿಭಟನೆ ನಡೆಸುತ್ತಿದ್ದರು. ಸಿದ್ದರಾಮಯ್ಯ  ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಪಾದಯಾತ್ರೆಯಲ್ಲಿಯೇ ವಿಧಾನಸೌಧ ತಲುಪಿದರು.ಅಮಾಯಕರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಸ್‌ ಪಡೆಯಬೇಕು ಎಂಬ ಆಗ್ರಹಕ್ಕೆ ಮುಖ್ಯಮಂತ್ರಿ ಸ್ಪಂದಿಸದೇ ಇದ್ದುದರಿಂದ  ಆಕ್ರೋಶಗೊಂಡ ಪ್ರತಿಭಟನಾನಿರತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದರು.ಸರ್ವಪಕ್ಷ ನಿಯೋಗ ಕರೆದೊಯ್ಯುವುದು ಒಳಿತು: ದೇವೇಗೌಡ

‘ಮಹಾದಾಯಿ ನೀರಿನ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯುವುದು ಒಳಿತು’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಸಲಹೆ ನೀಡಿದ್ದಾರೆ.‘ಅನಾರೋಗ್ಯದಿಂದಾಗಿ ಸಂಸದರ ಸಭೆಯಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ’  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ದೇವೇಗೌಡ, ‘ಇದು ರೈತರ ಅಳಿವು–ಉಳಿವಿನ ಪ್ರಶ್ನೆಯಾಗಿದೆ. ಪರಿಹಾರಕ್ಕೆ ಒತ್ತಾಯಿಸಿ ಪ್ರಧಾನಿ ಬಳಿಗೆ ಹೋಗುವುದೇ ಸೂಕ್ತ.ಕುಡಿಯುವ ನೀರಿಗಾಗಿ ಒಂದೂವರೆ ವರ್ಷದಿಂದ ಶಾಂತಿಯುತವಾಗಿ ಹೋರಾಡುತ್ತಿರುವ ನಮ್ಮ ಅನ್ನದಾತರ ಹಿತವೇ ನಮ್ಮೆಲ್ಲರಿಗೂ ಮುಖ್ಯ. ಈ ಸಂಕಷ್ಟ ಸ್ಥಿತಿಯಲ್ಲಿ ಪಕ್ಷ ರಾಜಕೀಯ ಬದಿಗೊತ್ತಿ ನೊಂದ ರೈತರ ಕಣ್ಣೀರು ಒರೆಸುವುದಷ ಆದ್ಯತೆ ಆಗಬೇಕು’ ಎಂದು ಅವರು ವಿವರಿಸಿದ್ದಾರೆ.ಎರಡು ಆಯ್ಕೆ

* ಅಂತರರಾಜ್ಯ ಜಲವಿವಾದ ಕಾಯ್ದೆ–1956ರ ಸೆಕ್ಷನ್‌ 5(3) ರ ಅನ್ವಯ ಮಧ್ಯಂತರ ಆದೇಶದ ಬಗ್ಗೆ ಸ್ಪಷ್ಟೀಕರಣ ಕೇಳಿ ಮಹಾದಾಯಿ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಕೆ.

* ನ್ಯಾಯಮಂಡಳಿಯ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಕೆ.***

ರಾಜ್ಯದ ಪರ ವಕೀಲ ಫಾಲಿ ಎಸ್‌. ನಾರಿಮನ್‌ ತಂಡದ ಮೇಲೆ ಸಭೆ ವಿಶ್ವಾಸವಿದೆ. ನೆಲ–ಜಲ ವಿಷಯದಲ್ಲಿ ರಾಜಕೀಯ ಮಾಡಲ್ಲ

-ಸಿದ್ದರಾಮಯ್ಯ, ಮುಖ್ಯಮಂತ್ರಿ

***

ಮಹಾದಾಯಿ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಜತೆ ವಿರೋಧ ಪಕ್ಷ ನಿಲ್ಲಲಿದೆ.

-ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ

***

ಮಹಾದಾಯಿ ನೀರು ಸಿಗುವುದಿಲ್ಲ ಎಂಬ ವಿಷಯದಲ್ಲಿ ಜನರ ಆತಂಕ ದೂರ ಮಾಡಲು ಕಾನೂನು ವ್ಯಾಪ್ತಿಯಲ್ಲಿ ಹೋರಾಟ ನಡೆಸಬೇಕಿದೆ.

-ಎಚ್‌.ಡಿ. ಕುಮಾರಸ್ವಾಮಿ, ರಾಜ್ಯ ಜೆಡಿಎಸ್‌ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.