ಶುಕ್ರವಾರ, ಮೇ 27, 2022
22 °C

ಮಹಾದೇವ ನಗರ: ಸಮಸ್ಯೆಗಳ ಆಗರ

ಪ್ರಜಾವಾಣಿ ವಾರ್ತೆ/ ನವೀನ್ ಕುಮಾರ್ ಜಿ. Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಸ್ತೆ ಮಧ್ಯೆ ಬಿಸಿನೀರು ಬುಗ್ಗೆಯಂತೆ ಉಕ್ಕುವ ಚರಂಡಿ, ಪಕ್ಕದಲ್ಲಿಯೇ ತುಂಬಿ ಹರಿಯುತ್ತಿರುವ ನಾಲೆ, ಮುಖ್ಯ ರಸ್ತೆ ಬದಿಯಲ್ಲಿ ಗುಡ್ಡೆಬಿದ್ದ  ತ್ಯಾಜ್ಯ ಸಂಗ್ರಹ. ಮಳೆ ನಿಂತರೂ ಎಮ್ಮೆ ಈಜಾಡುವಷ್ಟು ನೀರು ತುಂಬಿರುವ ರಸ್ತೆ-ಇದು ಮಹಾದೇವ ನಗರದ ಚಿತ್ರಣ.ರಸ್ತೆ, ಚರಂಡಿ ಸಮಸ್ಯೆಯಿಂದ ರೋಸಿ ಹೋಗಿರುವ ಇಲ್ಲಿನ ಜನರನ್ನು ಮಾತನಾಡಿಸಿದರೆ, ಪಾಲಿಕೆ ಅಧಿಕಾರಿಗಳ ವಿರುದ್ಧ ಬೈಗುಳನ್ನು ಉದುರಿಸುತ್ತಾರೆ. ಇಷ್ಟಕ್ಕೂ ಅವರು ಈ ಅವ್ಯವಸ್ಥೆಯಿಂದ ಆಕ್ರೋಶಗೊಂಡಿದ್ದಾರೆ.ಮಹಾದೇವ ನಗರ-ಶೇಖ್‌ರೋಜಾ ಮುಖ್ಯರಸ್ತೆಯಿಂದ ಸಂಜಯ್ ಗಾಂಧಿ ಕಾಲೋನಿಗೆ ರಸ್ತೆ ಕವಲೊಡೆಯುವಲ್ಲಿ ಚರಂಡಿ ನಾಲೆಗೆ ಕಾಂಕ್ರಿಟ್ ಹಾಕಲಾಗಿದೆ. ಇದರಿಂದ ರಸ್ತೆಯ ಆಚೆ ಬದಿಯ ಚರಂಡಿ ರಸ್ತೆ ಮಧ್ಯದಲ್ಲೇ ಒಡೆದು ಹರಿಯುತ್ತಿದೆ. ಮಳೆ ಬಂತೆಂದರೆ ಇಲ್ಲಿನ ಸ್ಥಿತಿ ಇನ್ನಷ್ಟು ಬಿಗಡಾಸುತ್ತಿದೆ.ಇದೇ ರಸ್ತೆಯಲ್ಲಿ ಮುಂದೆ ಸಾಗಿದರೆ ಚರಂಡಿಯೇ ಕಾಣಸಿಗದು. ಪಕ್ಕದಲ್ಲಿರುವ ಖಾಸಗಿ ಶಾಲೆಯೊಂದಿದೆ. ಅದರ ಮುಂಭಾಗದ ರಸ್ತೆಯಲ್ಲಿ ಮಳೆ ನೀರು ಸಂಗ್ರಹಗೊಂಡು ನಡೆದಾಡಲೂ ಪರದಾಡಬೇಕಿದೆ. ಅಲ್ಲಿಂದ ಅಂಬಾಭವಾನಿ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಹೋದರೆ ಅದು ರಸ್ತೆಯೋ ಹಳ್ಳವೋ ಎಂಬ ಸಂಶಯ ಮೂಡುವಷ್ಟು ಹದಗೆಟ್ಟಿದೆ.`ರಸ್ತೆ ಮಧ್ಯೆ ಚರಂಡಿ ಉಕ್ಕಲು ಶುರುವಾಗಿ 20 ದಿವಸಗಳಿಗಿಂತಲೂ ಹೆಚ್ಚಾಯಿತು. ದ್ವಿಚಕ್ರ ವಾಹನಗಳಷ್ಟೆ ಪ್ರಯಾಸಪಟ್ಟು ತೆರಳುತ್ತಿವೆ. ಈಗಾಗಲೇ ಹಲವು ಬೈಕ್ ಸವಾರರು, ಮಕ್ಕಳು ಜಾರಿ ಬಿದ್ದಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ.ಪಾಲಿಕೆಯವರು ಚರಂಡಿ ನಾಲೆ ನಿರ್ಮಿಸುವಾಗ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡದ ಪರಿಣಾಮ ಈ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಕೆಲವು ಅಂಗಡಿ ಮನೆಗಳ ಮುಂದೆ ಮಾತ್ರ ನಾಲೆಗಳಿಗೆ ಸ್ಲ್ಯಾಬ್  ಮುಚ್ಚಲಾಗಿದೆ. ಒಂದಿಬ್ಬರು ಕಾರ್ಮಿಕರು ಬಂದು ಕೆಲಸ ನಿರ್ವಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು  ನಿವಾಸಿಗಳಾದ ನಾಂಗೇಂದ್ರ ತಲಾಟೆ, ಸುರೇಶ, ಗುರುಪ್ರಸಾದ ಶಾಂತಪ್ಪ ನರೋಣಾ ಮತ್ತಿತರರು ಸಮಸ್ಯೆ ವಿವರಿಸುತ್ತಾರೆ.ಇನ್ನು ಮುಖ್ಯ ರಸ್ತೆ ಬದಿಯಲ್ಲಿ ಗಿಡಗಂಟಿ ಬೆಳೆದು ವಿದ್ಯುತ್ ತಂತಿಗಳಿಗ ತಾಗಿಕೊಂಡಿರುವುದರಿಂದ ಗಾಳಿ ಬಂದರೆ ವಿದ್ಯುತ್ ತಂತಿಗಳು ಪರಸ್ಪರ ತಾಗಿಕೊಂಡು ಪದೇ ಪದೇ ವಿದ್ಯುತ್ ಪರಿವರ್ತಕ ಕೆಟ್ಟು ಹೋಗುತ್ತಿದೆ. ಪಾಲಿಕೆಯವರನ್ನು ಸಂಪರ್ಕಿಸಿದರೆ ಜೆಸ್ಕಾಂನವರತ್ತ ಬೊಟ್ಟು ಮಾಡುತ್ತಾರೆ ಎನ್ನುತ್ತಾರೆ ಇವರು.`ಇಲ್ಲಿ ರಸ್ತೆ ಹಳ್ಳದಂತಾಗಿದೆ. ಮಕ್ಕಳು ಶಾಲೆಗೆ ಹೇಗೆ  ತೆರಳಬೇಕು. ಯಾರಿಗೆ ಮನವಿ ಮಾಡಿದರೂ ಸಮಸ್ಯೆ ಪರಿಹಾರವಾಗಿಲ್ಲ' ಎನ್ನುತ್ತಾರೆ ಪೀರಣ್ಣ. `ಚರಂಡಿ ನಾಲೆ ನಿರ್ಮಿಸುವಾಗ ಗುತ್ತಿಗೆದಾರು ಮಾಡಿದ ತಪ್ಪಿನಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಕೇಳಿದರೆ ಶಾಸಕರ ಕೋಟಾದಡಿ ಕಾಮಗಾರಿ ನಡೆಸಲಾಗಿದೆ ಎನ್ನುತ್ತಾರೆ. ಪಾಲಿಕೆ ಅಧಿಕಾರಿಗಳು. ನಾವಿನ್ನೂ  ಅಧಿಕಾರ ಸ್ವೀಕರಿಸಿಲ್ಲ. ಸಮಸ್ಯೆ ಕುರಿತು ಮಹಾನಗರ ಪಾಲಿಕೆ ಆಯುಕ್ತರ ಗಮನಕ್ಕೂ ತರಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ' ಎನ್ನುತ್ತಾರೆ ಮಹಾನಗರ ಪಾಲಿಕೆ ಸದಸ್ಯೆ ಶರಣಮ್ಮ ಅಪ್ಪಾರಾವ್ ಬೆಣ್ಣೂರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.