ಮಹಾಧವಲ ಗ್ರಂಥ ಲೋಕಾರ್ಪಣೆ 8ಕ್ಕೆ

7

ಮಹಾಧವಲ ಗ್ರಂಥ ಲೋಕಾರ್ಪಣೆ 8ಕ್ಕೆ

Published:
Updated:

ಕಾರ್ಕಳ: ತಾಲ್ಲೂಕಿನ ಅತಿಶಯ ಕ್ಷೇತ್ರ ನಲ್ಲೂರಿನಲ್ಲಿ ಇದೇ 8ರಂದು ಕನ್ನಡ ಅನುವಾದಿತ ಮಹಾಧವಲ ಗ್ರಂಥಗಳ ಲೋಕಾರ್ಪಣೆ ನಡೆಯಲಿದೆ ಎಂದು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.ನಲ್ಲೂರಿನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ವೇಣೂರಿನಲ್ಲಿ ದ್ರವ್ಯಗಳ ಅಭಿಷೇಕ ನಡೆದರೆ, ನಲ್ಲೂರಿನಲ್ಲಿ ಮಹಾಧವಲ ಅಕ್ಷರಾಭಿಷೇಕ ನಡೆಯಲಿದೆ. ಮೂಡಬಿದಿರೆಯಲ್ಲಿರುವ ಧವಲ ಗ್ರಂಥಗಳು ಕನ್ನಡ ಜನತೆಗೆ ಲಭ್ಯವಾಗಬೇಕೆನ್ನುವ ದೃಷ್ಟಿಯಿಂದ ಹಾಗೂ ಕನ್ನಡ ಘನತೆಯ ಹಿತದೃಷ್ಟಿಯಿಂದ ಅನುವಾದ ಯೋಜನೆ ಹಾಕಿಕೊಳ್ಳಲಾಗಿತ್ತು.ಧವಲತ್ರಯಗಳ ಒಟ್ಟು 39 ಗ್ರಂಥಗಳಲ್ಲಿ 16 ಧವಲ ಗ್ರಂಥಗಳು ಬಿಡುಗಡೆಯಾಗಿದ್ದು 7 ಮಹಾಧವಲ ಗ್ರಂಥಗಳು ಬಿಡುಗಡೆಗೆ ಸಿದ್ಧಗೊಂಡಿವೆ. 16 ಜಯಧವಲದಲ್ಲಿ 8 ಗ್ರಂಥಗಳು ಮುದ್ರಣಗೊಂಡಿವೆ. ದೇಶದಲ್ಲಿ ವ್ಯವಸ್ಥಿತ ಸಮವಸರಣ ಖ್ಯಾತಿಯ ನಲ್ಲೂರು ಕೂಷ್ಮಾಂಡಿನಿ ಕ್ಷೇತ್ರದಲ್ಲಿ ಈ ಗ್ರಂಥಗಳ ಅನಾವರಣ ನಡೆಯಲಿದೆ~ ಎಂದರು.ಫೆಬ್ರವರಿ 6ರಂದು ಸಮವಸರಣದಲ್ಲಿ ಬೆಳಿಗ್ಗೆ 9.45ಕ್ಕೆ ಜಿನಗುಣ ಸಂಪತ್ತಿ ಆರಾಧನೆ, ಮಧ್ಯಾಹ್ನ 3ಕ್ಕೆ ಶ್ರುತಸ್ಕಂದ ಆರಾಧನೆ, 4.30ಕ್ಕೆ ಕಾರ್ಕಳ ಜೈನಮಠದ ಯತಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರಿಂದ ಮಹೋತ್ಸವ ಶುಭಾರಂಭವಾಗಲಿದೆ.7ರಂದು ಬೆಳಿಗ್ಗೆ 9.45ಕ್ಕೆ ಪ್ರತಿಷ್ಠಾಚಾರ್ಯ ಕೆ.ವರ್ಧಮಾನ ಇಂದ್ರರ ನೇತೃತ್ವದಲ್ಲಿ ಅಷ್ಟಮಹಾಪ್ರಾತಿಹಾರ್ಯ ಪೂಜೆ,ಧವಲತ್ರಯ ಗ್ರಂಥಗಳ ಸ್ಥಾಪನೆ. ಕುಬೇರ ಚೌಗುಲೆ ಅವರಿಂದ ಸಂಗೀತ ಪೂಜಾಷ್ಟಕ ನಡೆಯಲಿದೆ. ಮಧ್ಯಾಹ್ನ 2.30ರಿಂದ ಧವಲತ್ರಯ ಗ್ರಂಥಗಳ ತಾತ್ವಿಕ ವಿಮರ್ಶೆ ನಡೆಯಲಿದೆ.ವಿದ್ವಾಂಸರಾದ ಡಾ.ಪಿ.ಡಿ.ಶ್ರೀಧರ, ರತನ್‌ಚಂದ್ ನೇಮಿನಾಥ್ ಕೋಠಿ, ಆದಿಸಾಗರ ವರ್ಣಿಜಿ, ಡಾ.ಟಿ.ಆರ್.ಜೋಡಟ್ಟಿ, ಜಲಜಾ ಜೈನ್, ಜೀವಂಧರ ಕುಮಾರ್ ಹೋತಪೇಟೆ ಭಾಗವಹಿಸಲಿರುವರು. ಧವಲ ಗ್ರಂಥ ಸಂಯೋಜಕ ಮೂಡಬಿದಿರೆಯ ಡಾ.ಎಸ್.ಪಿ.ವಿದ್ಯಾ ಕುಮಾರ್ ಅವರನ್ನು ಅಭಿನಂದಿಸಲಾಗುವುದು ಎಂದರು.

 

8ರಂದು ಮಹಾಧವಲ ಗ್ರಂಥ ಲೋಕಾರ್ಪಣೆ ಆಚಾರ್ಯ 108 ಸುದೇಶ ಸಾಗರ ಮುನಿರಾಜ ಉಪಸ್ಥಿತಿಯಲ್ಲಿ ಬಾಹುಬಲಿ ಪ್ರಾಕೃತ ಪೀಠದ ಅಧ್ಯಕ್ಷ ಹಾಗೂ ಗ್ರಂಥಗಳ ಪ್ರಧಾನ ಸಂಪಾದಕ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಮೂಡಬಿದಿರೆ ಜೈನಮಠದ ಯತಿ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ಕೇಂದ್ರ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ಅವರು ಗ್ರಂಥಗಳ ಅನಾವರಣ ನಡೆಸುವರು. ಗೋಷ್ಠಿಯಲ್ಲಿ ಅಭಿವೃದ್ಧಿ ಸಮಿತಿಯ ನಲ್ಲೂರು ಮಹಾವೀರ ಜೈನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry