ಮಹಾನಗರಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ

7

ಮಹಾನಗರಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ

Published:
Updated:

ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಗಳಲ್ಲಿ ಬೇಸಿಗೆ ಆರಂಭದಲ್ಲೇ ಸಾಂಕ್ರಾಮಿಕ ರೋಗಗಳು ಉಲ್ಬಣಿಸುವ ಸಾಧ್ಯತೆ ಕಾಣಿಸಿಕೊಂಡಿದೆ. ಮೈಸೂರಿನಲ್ಲಿ 108 ಜಾಂಡಿಸ್ ಮಾದರಿ ಪ್ರಕರಣಗಳು ವರದಿಯಾಗಿದ್ದರೆ, ಮಂಗಳೂರು ನಗರವನ್ನು ಮಲೇರಿಯಾ, ಫೈಲೇರಿಯಾದಂತಹ ರೋಗಗಳು ಬಾಧಿಸುವ ಸಾಧ್ಯತೆ ಹೆಚ್ಚಿದೆ ಎಂಬ ಮುನ್ಸೂಚನೆ ಆರೋಗ್ಯ ಇಲಾಖೆಯಿಂದಲೇ ರವಾನೆಯಾಗಿದೆ.ರಾಜ್ಯದ ಏಳು ಮಹಾನಗರ ಪಾಲಿಕೆಗಳಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಅಧಿಕಾರಿಗಳ ಜೊತೆ ಇತ್ತೀಚೆಗೆ ವಿಧಾನಸೌಧದಲ್ಲಿ ವಿಡಿಯೊ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಮಾಹಿತಿ ಬಹಿರಂಗಪಡಿಸಿದರು.ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಆಯುಕ್ತ ಹರೀಶ್‌ಕುಮಾರ್ ಜೊತೆ ಸಚಿವರು ಸಂವಾದ ನಡೆಸಿದರು. ನಂತರ ಮೈಸೂರು ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಈಗಾಗಲೇ ಸಾಂಕ್ರಾಮಿಕ ರೋಗ ಹಬ್ಬಿರುವ ಮಾಹಿತಿ ಲಭ್ಯವಾಯಿತು. `ಜಾಂಡಿಸ್ ಮಾದರಿ ರೋಗಕ್ಕೆ,  ಕುಡಿಯುವ ನೀರಿನ ಕೊಳವೆಯ ಸೋರಿಕೆ ಕಾರಣ ಎಂಬುದು ಪತ್ತೆಯಾಗಿದೆ~ ಎಂದು ಆಯುಕ್ತ ಕೆ.ಎ.ರಾಯ್ಕರ್ ತಿಳಿಸಿದರು.ಅಲ್ಲಲ್ಲಿ ತೊಂದರೆ: ಬಳ್ಳಾರಿಯ ಕೆಲವೆಡೆ, ಗುಲ್ಬರ್ಗದ 10 ವಾರ್ಡ್‌ಗಳು, ದಾವಣಗೆರೆಯ ಆರು ವಾರ್ಡ್, ಹುಬ್ಬಳ್ಳಿಯ 23 ವಾರ್ಡ್‌ಗಳಲ್ಲಿ ನೀರಿನ ಪೂರೈಕೆಯಲ್ಲಿ ಸಮಸ್ಯೆ ಇದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು. ಬಹುತೇಕ ಕಡೆಗಳಲ್ಲಿ ವಿದ್ಯುತ್ ಕೊರತೆಯೇ ಸಮಸ್ಯೆಗೆ ಕಾರಣ ಎಂದರು. ಈ ಹಿನ್ನೆಲೆಯಲ್ಲಿ ನೀರು ಪೂರೈಕೆ ಘಟಕಗಳಿಗೆ ನಿರಂತರ ವಿದ್ಯುತ್ ಒದಗಿಸುವಂತೆ ಆಯಾ ವಿದ್ಯುತ್ ಸರಬರಾಜು ಕಂಪೆನಿಗಳ  ಜೊತೆ ಮಾತುಕತೆ ನಡೆಸಲಾಗುವುದು ಎಂದು ಸುರೇಶ್‌ಕುಮಾರ್ ತಿಳಿಸಿದರು.ಎಲ್ಲ ನಗರಗಳಲ್ಲಿ ಕತ್ತರಿಸಿದ ಹಣ್ಣುಗಳನ್ನು ರಸ್ತೆ ಬದಿ ಮಾರಾಟ ಮಾಡುವುದನ್ನು ನಿಷೇಧಿಸುವಂತೆಯೂ ಸಚಿವರು ನಿರ್ದೇಶನ ನೀಡಿದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎನ್.ಸಿ.ಮುನಿಯಪ್ಪ ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಎಂ.ಎಸ್.ರವಿಶಂಕರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry