ಗುರುವಾರ , ಅಕ್ಟೋಬರ್ 17, 2019
27 °C

ಮಹಾನಗರಿಯಲ್ಲಿ ಕಿರ್‌ಮಿರ ವಾದ

Published:
Updated:

ಪಾಂಡವರಿಗೆ ದೇಶಭ್ರಷ್ಟರೆಂಬ ಪಟ್ಟ. ದ್ರೌಪತಿಯೊಡನೆ ಅರಣ್ಯ ವಾಸ. ಆಗ ಸಿಂಹಿಕ ರಾಕ್ಷಸನೊಡನೆ ಕಾಳಗ, ಆ ಅಬ್ಬರ, ಭೀಕರತೆ...ಇದೇನು ಮಹಾಭಾರತದ ಕಥೆ ಹೇಳುತ್ತಿರುವೆ ಎಂದಿರಾ? ಮಹಾಭಾರತದ ತುಣುಕನ್ನು ನೋಡುಗರ ಕಣ್ಣುಕಟ್ಟುವಂತೆ  ಕಥಕ್ಕಳಿಯ `ಕಿರ್‌ಮಿರ ವಾದ~ ನೃತ್ಯದ ಮೂಲಕ ರಸವತ್ತಾಗಿ ಕಟ್ಟಿಕೊಟ್ಟದ್ದು `ನೀನಂ~ ಕಥಕ್ಕಳಿ ತಂಡ.ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ `ಕಿರ್‌ಮಿರ ವಾದ~ ನೃತ್ಯ ಪ್ರದರ್ಶನ ನಡೆದದ್ದು ನಗರದ ವಿಮಾನಪುರದಲ್ಲಿರುವ ಕೈರಾಳೆ ನಿಲಯಂ ಆಡಿಟೋರಿಯಂನಲ್ಲಿ. `ಬೆಂಗಳೂರು ಕ್ಲಬ್ ಫಾರ್ ಕಥಕ್ಕಳಿ ಅಂಡ್ ಆರ್ಟ್ಸ್~ ಸಂಸ್ಥೆಯು ಕೈರಾಳೆ  ಕಲಾಸಮಿತಿಯ ಸಹಯೋಗದೊಂದಿಗೆ ಕಥಕ್ಕಳಿಯ ಈ ನೃತ್ಯ ರೂಪಕದ ಪ್ರದರ್ಶನವನ್ನು ಆಯೋಜಿಸಿತ್ತು.ಈ ನೃತ್ಯದಲ್ಲಿ ಧರಿಸುವ ವೇಷಭೂಷಣವೇ ಆಕರ್ಷಣೀಯ. ಪ್ರೇಕ್ಷಕರ ಮನ ಸೆಳೆಯುವ ಈ ವೇಷದ ತಯಾರಿ ಹೆಚ್ಚು ಸಮಯ ಬೇಡುತ್ತದೆ. ಅಕ್ಕಿ, ಅರಿಶಿನ, ಬಣ್ಣ, ಮೈದಾ ಹಿಟ್ಟು, ಸುಣ್ಣ ಇವುಗಳ ಮಿಶ್ರಣವನ್ನು ಹಲವು ಗಂಟೆಗಳ ಕಾಲ ಕುದಿಸಿ ಹದಕ್ಕೆ ಬಂದ ನಂತರ ಅದರಲ್ಲಿ 24 ಮೀಟರ್ ಬಟ್ಟೆಯನ್ನು ಅದ್ದಲಾಗುತ್ತದೆ. ಸುಣ್ಣ ಮತ್ತು ಅರಿಶಿಣ ಮಿಶ್ರಣವಾದ್ದರಿಂದ ಅದು ರಕ್ತದ ಬಣ್ಣ ಪಡೆದುಕೊಳ್ಳುತ್ತದೆ. ಆನಂತರ ಕಲಾವಿದರು ಅದನ್ನೇ ವೇಷವಾಗಿ ಧರಿಸುತ್ತಾರೆ. ಈ ವೇಷದ ಭಾರವೇ 42 ಕೆ.ಜಿ.ಯಷ್ಟಿರುತ್ತದೆ.ಹೀಗೆ ಮಾಡುವುದರಿಂದ ಕಲಾವಿದರ ಮುಖದಲ್ಲಿ ನೈಜತೆ ಎದ್ದು ಕಾಣುತ್ತದೆ. ಪಾತ್ರದ ನೈಜ ಪ್ರದರ್ಶನವೇ ಈ ನೃತ್ಯದ ವಿಶೇಷತೆ.ನೃತ್ಯ ಪ್ರದರ್ಶನದಿಂದ ಹರ್ಷಿತರಾದ ಕ್ರಿಸ್ಟಲ್ ಗ್ರೂಪ್‌ನ ಕಾರ್ಯನಿರ್ವಹಣಾಧಿಕಾರಿ ಕೆ.ಕೆ.ನಂಬೂದರಿ `ಇದು ಕಥಕ್ಕಳಿಯ ಅದ್ಭುತ ಪ್ರದರ್ಶನ. ಇದಕ್ಕೆ ನಾನು ಸಾಕ್ಷಿಯಾಗಿದ್ದೇನೆ~ ಎಂದರು.`ಟೀವಿಯಲ್ಲಿ ನೋಡಿ ಮಾತ್ರವೇ ಗೊತ್ತಿದ್ದ ಈ ಕಥಕ್ಕಳಿ ನೃತ್ಯ ರೂಪಕವನ್ನು ನಿಜವಾಗಿ ವೀಕ್ಷಿಸಿದ್ದು ನನ್ನ ಸಂತಸ ಕ್ಷಣಗಳಲ್ಲಿ ಇದೂ ಒಂದಾಯಿತು. ಯುವ ಪೀಳಿಗೆ ಸಾಂಪ್ರದಾಯಿಕ ಕಲೆಗಳಿಗೆ ಪ್ರಾಶಸ್ತ್ಯ ನೀಡುತ್ತಿರುವುದು ಸಂತಸದ ಸಂಗತಿ~ ಎಂದರು ಸ್ವಾತಿ ಮೆನನ್.

 

Post Comments (+)