ಮಹಾನಗರ ಪಾಲಿಕೆ ಸದಸ್ಯರಿಗೆ ಪದಚ್ಯುತಿಯ ಭೀತಿ

7
ನಮ್ಮನ್ನೇ ಮುಂದುವರಿಸಿ: ಕೋರ್ಟ್‌ಗೆ ಸದಸ್ಯರ ಮೊರೆ

ಮಹಾನಗರ ಪಾಲಿಕೆ ಸದಸ್ಯರಿಗೆ ಪದಚ್ಯುತಿಯ ಭೀತಿ

Published:
Updated:

ವಿಜಾಪುರ: ‘ಮಹಾನಗರ ಪಾಲಿಕೆಯ ಸದಸ್ಯರ ಅವಧಿ ಕೇವಲ ಆರು ತಿಂಗಳು ಮಾತ್ರ. ಆ ನಂತರ ಕ್ಷೇತ್ರಗಳ ಪುನರ್‌ ವಿಂಗಡಣೆಯಾಗಿ, ಹೊಸದಾಗಿ ಚುನಾವಣೆ ನಡೆಸಲಾಗುವುದು’ ಎಂದು ಸರ್ಕಾರ ಹೇಳಿದೆ. ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿರುವ ಇಲ್ಲಿಯ ಮಹಾನಗರ ಪಾಲಿಕೆಯ ಸದಸ್ಯರು ಹೈಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದಾರೆ.‘ಐದು ವರ್ಷದ ಅವಧಿಗೆ ಮತದಾರರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಮಗೆ ನ್ಯಾಯಯುತವಾಗಿ ಐದು ವರ್ಷ ಆಡಳಿತ ನಡೆಸಲು ಅವಕಾಶ ನೀಡಬೇಕು. ಇದಕ್ಕಾಗಿ ಕಾನೂನು ಹೋರಾಟ ಆರಂಭಿಸಿದ್ದೇವೆ. ಮಹಾನಗರ ಪಾಲಿಕೆಯ ಎಲ್ಲ ಪಕ್ಷಗಳ 35 ಜನ ಸದಸ್ಯರು ತಲಾ ರೂ10,000 ವಂತಿಗೆ ಸಂಗ್ರಹಿಸಿ, ಕಾನೂನು ಪ್ರಕ್ರಿಯೆ ಆರಂಭಿಸಲು ಹಿರಿಯ ಸದಸ್ಯರನ್ನು ಬೆಂಗಳೂರಿಗೆ ಕಳಿಸಿದ್ದೇವೆ’ ಎಂದು ಕೆಲ ಸದಸ್ಯರು ಹೇಳುತ್ತಿದ್ದಾರೆ.‘ಕರ್ನಾಟಕ ಮುನ್ಸಿಪಲ್‌ ಕಾಯ್ದೆ 1964ರ ಕಲಂ 11ರ ಪ್ರಕಾರ ಮೂರು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಸಭೆಗಳ ಸದಸ್ಯರ ಸಂಖ್ಯೆ 30ಕ್ಕೆ ನಿಗದಿ ಪಡಿಸಲಾಗಿದೆ. ವಿಜಾಪುರದ ಜನಸಂಖ್ಯೆ ಈಗ 3.27 ಲಕ್ಷ. ಹೀಗಾಗಿ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡಿ ಮತ್ತು ಸಂಖ್ಯೆ ಹೆಚ್ಚಿಸಿಯೇ ನಮ್ಮ ನಗರಸಭೆಗೆ ಚುನಾವಣೆ ನಡೆಸಬೇಕಿತ್ತು. ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಚುನಾವಣೆಯನ್ನು ತ್ವರಿತವಾಗಿ ನಡೆಸಲಾಗಿದೆ. ಆಗ ಮಾಡದ ಕ್ಷೇತ್ರಗಳ ಪುನರ್‌ ವಿಂಗಡಣೆಯನ್ನು ಈಗ ಮಾಡಿದರೆ ನಮಗೆ ಅನ್ಯಾಯವಾಗುತ್ತಿದ್ದು, ಸರ್ಕಾರದ ಈ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತಿದ್ದೇವೆ’ ಎಂದು ಮಹಾನಗರ ಪಾಲಿಕೆಯ ಹಿರಿಯ ಸದಸ್ಯ ರವೂಫ್‌ ಶೇಖ ಹೇಳಿದರು.ಇನ್ನೂ ಅಧಿಕೃತ ಸದಸ್ಯರೇ ಆಗಿಲ್ಲ: ವಿಜಾಪುರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿರವ ಸರ್ಕಾರ, ಹಾಲಿ  ಸದಸ್ಯರಿಗೆ ‘ಮಹಾನಗರ ಪಾಲಿಕೆಯ ಸದಸ್ಯರು’ ಎಂಬ ಮಾನ್ಯತೆ ನೀಡಿದೆ. ಈ ಬಡ್ತಿ ದೊರೆತಿದ್ದರೂ ಈ ಎಲ್ಲ ಸದಸ್ಯರಿಗೆ ಇನ್ನೂ ಅಧಿಕೃತವಾಗಿ ಸದಸ್ಯತ್ವದ ಸ್ಥಾನಮಾನ ದೊರೆತಿಲ್ಲ.ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರು ಆಯ್ಕೆಯಾದ ನಂತರ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಮೊದಲ ಸಭೆ ನಡೆಯುತ್ತದೆ. ಆ ಸಭೆಯಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅಧಿಸೂಚನೆ ಹೊರಡಿಸಿದ ನಂತರ ಆ ಸದಸ್ಯರಿಗೆ ಅಧಿಕೃತ ಸ್ಥಾನಮಾನ ದೊರೆಯುತ್ತದೆ. ಆ ಅಧಿಸೂಚನೆ ಹೊರಡಿಸಿದ ದಿನದಿಂದ ಐದು ವರ್ಷಗಳ ಕಾಲ ಅವರ ಅಧಿಕಾರದ ಅವಧಿ ಇರುತ್ತದೆ ಎಂಬುದು ಸಾಮಾನ್ಯ ನಿಯಮ.ವಿಜಾಪುರ ನಗರಸಭೆ (ಈಗ ಮಹಾನಗರ ಪಾಲಿಕೆ) ಅಧ್ಯಕ್ಷ–ಉಪಾಧ್ಯಕ್ಷರ ಹುದ್ದೆಗೆ ಇನ್ನೂ ಚುನಾವಣೆಯೇ ನಡೆಯದಿ ರುವುದರಿಂದ ಈ ಎಲ್ಲ 35 ಸದಸ್ಯರಿಗೆ ಇನ್ನೂ ಅಧಿಕೃತವಾಗಿ ಸದಸ್ಯತ್ವ ದೊರೆತಿಲ್ಲ. ಸದಸ್ಯರಿಗೆ ಅಧಿಕೃತ ಸ್ಥಾನಮಾನ ದೊರೆಯದ ಕಾರಣ ಅವರು ಸಾಮಾನ್ಯ ಸಭೆಗಳಿಗೂ ಹಾಜರಾಗುವಂತಿಲ್ಲ. ಮಹಾನಗರ ಪಾಲಿಕೆಗೆ ಜಿಲ್ಲಾಧಿಕಾರಿಯವರು ಆಡಳಿತಾಧಿಕಾರಿಯಾಗಿದ್ದರೂ  ಇದೇ ಕಾರಣಕ್ಕೆ ಸಾಮಾನ್ಯ ಸಭೆ ಕರೆದಿಲ್ಲ.ಸದಸ್ಯರಿಗೆ ಹೆಚ್ಚಿನ ಅಧಿಕಾರ: ನಗರ ಸಭೆಯ ಸದಸ್ಯರಿಗೆ ಮಾಸಿಕ ರೂ1,000 ಗೌರವ ಧನ ದೊರೆತರೆ, ಮಹಾನಗರ ಪಾಲಿಕೆಯ ಸದಸ್ಯರಿಗೆ ಮಾಸಿಕ ರೂ3,500 ಗೌರವ ಧನ ದೊರೆಯುತ್ತದೆ.‘ಮಹಾನಗರ ಪಾಲಿಕೆಗೆ ಹೆಚ್ಚಿನ ಸೌಲಭ್ಯ–ಅಧಿಕಾರ ದೊರೆಯಲಿವೆ. ರೂ30 ಲಕ್ಷ ಮೊತ್ತದ ವರೆಗಿನ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಿ ಅನುಷ್ಠಾನಗೊಳಿಸಲು ನಗರಸಭೆ ಸಾಮಾನ್ಯ ಸಭೆಗೆ ಅಧಿಕಾರ ಇತ್ತು. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ರೂ50 ಲಕ್ಷದ ವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡಿ ಅನುಷ್ಠಾನಗೊಳಿಸುವ ಅಧಿಕಾರ ಇದೆ’ ಎಂಬುದು ಪಾಲಿಕೆಯ ಆಯುಕ್ತ ಜಿ.ರಾಮದಾಸ ಅವರ ವಿವರಣೆ.ಮಹಾನಗರ ಪಾಲಿಕೆಯಲ್ಲಿ ಮೇಯರ್‌, ಉಪ ಮೇಯರ್‌ ಹುದ್ದೆಗಳ ಜೊತೆಗೆ ಹಣಕಾಸು ಮತ್ತು ತೆರಿಗೆ, ಆರೋಗ್ಯ ಮತ್ತು ನೈರ್ಮಲ್ಯ, ಸಾಮಾಜಿಕ ನ್ಯಾಯ ಮತ್ತಿತರ ಸ್ಥಾಯಿ ಸಮಿತಿಗಳು ರಚನೆಯಾಗಲಿವೆ. ಈ ಎಲ್ಲ ಸಮಿತಿಗಳಿಗೆ ಸದಸ್ಯರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕಿರುವುದರಿಂದ ಹೆಚ್ಚಿನ ಸದಸ್ಯರಿಗೆ ಅವಕಾಶ ದೊರೆಯಲಿದೆ.ವಾರ್ಡ್‌ ಸಮಿತಿಗಳ ರಚನೆ: ಮಹಾನಗರ ಪಾಲಿಕೆಯಿಂದ ಜನತೆಗೆ ಆಗುವ ಪ್ರಯೋಜನ ಎಂದರೆ ವಾರ್ಡ್‌ ಸಮಿತಿಗಳ ರಚನೆ. ಪಾಲಿಕೆಯವರು ವಾರ್ಡ್‌ ಸಭೆಗಳನ್ನು ನಡೆಸಿ, ಅಲ್ಲಿ ವಾರ್ಡ್‌ ಸಮಿತಿಗಳನ್ನು ರಚಿಸುತ್ತಾರೆ. ವಾರ್ಡ್‌ ಸಭೆಯಲ್ಲಿಯೇ ಆ ಸಮಿತಿಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹುಬ್ಬಳ್ಳಿ–ಧಾರವಾಡ ಮತ್ತಿತರ ಮಹಾನಗರ ಪಾಲಿಕೆಗಳಲ್ಲಿ ಜಾರಿಯಲ್ಲಿರುವ ಈ ನಿಯಮ ಇಲ್ಲಿಗೂ ಅನ್ವಯವಾಗಲಿದೆ ಎಂಬುದು ಅಧಿಕಾರಿಗಳ ಮಾಹಿತಿ.ಮನವಿ ಪರಿಶೀಲನೆ: ಸಚಿವ

‘ಅಧಿಕಾರ ಅವಧಿ ಮೊಟಕುಗೊಳಿಸದೇ ತಮ್ಮನ್ನೇ ಮುಂದುವರಿಸಬೇಕು ಎಂದು ಮಹಾನಗರ ಪಾಲಿಕೆಯ ಸದಸ್ಯರು ನನಗೆ ಹಾಗೂ ಕಾನೂನು ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಈಗಿರುವ ಸದಸ್ಯರನ್ನು ಮುಂದುವರಿಸುವ ವಿಷಯ ಚರ್ಚೆಯ ಹಂತದಲ್ಲಿದ್ದು, ಇನ್ನು ಯಾವುದೇ ನಿರ್ಧಾರವಾಗಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ವಿಜಾಪುರ ನಗರಸಭೆಯನ್ನು ಈಗಷ್ಟೇ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಅಗತ್ಯ ಸಿಬ್ಬಂದಿ ನಿಯೋಜನೆ, ಮೂಲಸೌಲಭ್ಯ ಕಲ್ಪಿಸುವ ಪ್ರಕ್ರಿಯೆ ಆರಂಭಗೊಂಡಿದೆ ಎಂದೂ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry