ಭಾನುವಾರ, ಜನವರಿ 19, 2020
21 °C

ಮಹಾಪುರುಷರು ಜಾತಿಗೆ ಸೀಮಿತವಾಗದಿರಲಿ: ರಾಮದಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಹಾಪುರಷರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಬುಧವಾರ ಹೇಳಿದರು.ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಸುತ್ತೂರು, ಆದಿಚುಂಚನಗಿರಿ, ಪೇಜಾವರ ಮಠದ ಸ್ವಾಮೀಜಿಗಳು ಒಂದು ಜಾತಿಗೆ ಸೀಮಿತರಾದವರಲ್ಲ, ಅವರೆಲ್ಲ ಹಿಂದೂ ಸಮಾಜಕ್ಕೆ ಸೇರಿದವರು. ಎಲ್ಲ ಮಠಾಧೀಶರು ಸೇರಿ ಸನಾತನ ಹಿಂದೂ ಧರ್ಮದ ಬೆಳವಣಿಗೆಗೆ ಕೆಲಸ ಮಾಡಬೇಕು~ ಎಂದು ಕೋರಿದರು.`ಸಿದ್ಧರಾಮೇಶ್ವರ 800 ವರ್ಷಗಳ ಹಿಂದೆ ಬದುಕಿದ್ದ ದಾರ್ಶನಿಕ ಶರಣ. ಇವರು ಬಸವಣ್ಣ ಹೇಳಿದ ಕಾಯಕ ತತ್ವವನ್ನು ಅನುಷ್ಠಾನಕ್ಕೆ ತಂದವರು. ಇವರು ಅತ್ಯಂತ ಶ್ರಮಜೀವಿಯಾಗಿದ್ದರು. ಪ್ರಸ್ತುತ ಸಮಾಜಕ್ಕೆ ಸಿದ್ಧರಾಮೇಶ್ವರ ಕಾಯಕ ಮತ್ತು ಸ್ವಾವಲಂಬಿ ಬದುಕು ಅಗತ್ಯವಾಗಿದೆ~ ಎಂದು ಹೇಳಿದರು.`ರಾಜ್ಯದ ಎಲ್ಲ ಪದವೀಧರರಿಗೂ ಸರ್ಕಾರ ಉದ್ಯೋಗ ಕೊಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯುವಕರು ಶ್ರಮಜೀವಿಗಳಾಗುವ ಮುಖಾಂತರ ಸ್ವಾವಲಂಬಿಗಳಾಗಬೇಕು. ಇದಕ್ಕೆ ಸಿದ್ಧರಾಮೇಶ್ವರ ಶರಣ ಸ್ಫೂರ್ತಿಯಾಗಬೇಕು. ಏಕೆಂದರೆ ಇರುವ ಕಾಯಕದಲ್ಲಿ ದೇವರನ್ನು ಕಂಡವರು~ ಎಂದರು.`ಸಿದ್ಧರಾಮೇಶ್ವರರು ನೊಳಂಬ ರಾಜ್ಯವನ್ನು ಆಳುತ್ತಿದ್ದಾಗ ಕೆರೆ, ಕಟ್ಟೆಗಳು, ಹೊಂಡಗಳನ್ನು ನಿರ್ಮಿಸಿದರು. ಈ ಮೂಲಕ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಿದರು. ಇಂತಹ ದೂರದೃಷ್ಟಿ ಅವರಲ್ಲಿತ್ತು~ ಎಂದ ಅವರು `ಬಿಜೆಪಿ ಸರ್ಕಾರ ಕೆರೆಗಳ ಪುನಶ್ಚೇತನಕ್ಕಾಗಿ ಪ್ರತಿ ಜಿಲ್ಲೆಗೆ 5 ಕೋಟಿ ರೂಪಾಯಿಗಳನ್ನು ನೀಡಿದೆ~ ಎಂದು ತಿಳಿಸಿದರು.ಬೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬೇಬಿಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಸಕ ತನ್ವೀರ್ ಸೇಟ್ ಆಗಮಿಸಿದ್ದರು. ಸಾಹಿತಿ ಹಿ.ಚಿ.ಶಾಂತವೀರಯ್ಯ ಪ್ರಧಾನ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್. ಅಣ್ಣೇಗೌಡ ಸ್ವಾಗತಿಸಿದರು.

ನಾಗೇಶ ಕಂದೇಗಾಲ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಆಕರ್ಷಕ ಮೆರವಣಿಗೆ: ಬೆಳಿಗ್ಗೆ 9.30 ಕ್ಕೆ ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಚಿವ ರಾಮದಾಸ್ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸಿದ್ಧರಾಮೇಶ್ವರರ ಮೂರ್ತಿಯನ್ನು ತೆರೆದ ಜೀಪಿನಲ್ಲಿ ತರಲಾಯಿತು. ಇದರ ಜೊತೆಗೆ ಪೂಜಾ ಕುಣಿತ, ಪಟ ಕುಣಿತ, ಸೋಮನ ಕುಣಿತ, ಗೊರವರ ಕುಣಿತ, ಕಂಸಾಳೆ, ಮುಖವಾಡ ತಂಡಗಳು ಇದ್ದವು. ಹೀಗಾಗಿ ಮೆರವಣಿಗೆ ಆಕರ್ಷಕವಾಗಿತ್ತು.

ಪ್ರತಿಕ್ರಿಯಿಸಿ (+)