ಮಂಗಳವಾರ, ಮೇ 17, 2022
27 °C

`ಮಹಾಭಾರತದ ಮೇಲೆ `ಭಯೋತ್ಪಾದಕ' ದಾಳಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಕೃತಿಗಳನ್ನು ವಿರೂಪ ಮಾಡುವುದು ಕೂಡ ಒಂದು ರೀತಿಯ ಭಯೋತ್ಪಾದನೆ. ಇಂಥ ಕೃತ್ಯಗಳು ಮಹಾಭಾರತದ ಮೇಲೆಯೂ ನಡೆದಿವೆ. ಹೀಗಾಗಿ ಈ ಕೃತಿಯ ಮೂಲಪಾಠಕ್ಕೆ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ  ಚಿಂತನೆ ನಡೆಯಬೇಕು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು' ಎಂದು ವಿದ್ವಾಂಸ ಕೊರ್ಲಹಳ್ಳಿ ನರಸಿಂಹಾಚಾರ್ಯ ಹೇಳಿದರು.ಉಡುಪಿ ಪಲಿಮಾರು ಮಠದ ತತ್ವ ಸಂಶೋಧನಾ ಸಂಸತ್ತಿನ ಪ್ರಸಾರೋತ್ಸವ ಸಮಿತಿ ದೇಶದ ನೂರು ಕಡೆಗಳಲ್ಲಿ ನಡೆಸಲಿರುವ ಮಹಾಭಾರತ ಶುದ್ಧಪಾಠದ ಅಭಿಯಾನವನ್ನು ನಗರದ ಭವಾನಿ ನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಸೋಮವಾರ ಸಂಜೆ ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು.`ಪ್ರಪಂಚದಲ್ಲಿ ಇಲ್ಲದಿರುವುದೆಲ್ಲವೂ ಮಹಾಭಾರತದಲ್ಲಿದೆ. ಮಹಾಭಾರತದಲ್ಲಿ ಇಲ್ಲದ್ದು ಎಲ್ಲೂ ಇಲ್ಲ. ಅದುವೇ ಈ ಗ್ರಂಥದ ಗರಿಮೆ. ಮಹಾಭಾರತವು ವೇದಕ್ಕಿಂತ ಶ್ರೇಷ್ಠ. ಅನಂತ ವೇದದಲ್ಲಿಲ್ಲದ ಅಂಶಗಳು ಮಹಾಭಾರತದಲ್ಲಿವೆ. ಆದರೆ ಈ ಗ್ರಂಥವನ್ನು ಅನೇಕರು ತಮಗೆ ಬೇಕಾದಂತೆ ಬದಲಾಯಿಸಿದ್ದಾರೆ. ಗ್ರಂಥ ವಿರೂಪ ಮಾಡುವ ಕಾರ್ಯದ ಚುಕ್ಕಾಣಿಯನ್ನು ಪಂಡಿತರೇ ಹಿಡಿದಿದ್ದಾರೆ' ಎಂದು ವಿಷಾದಿಸಿದರು.`ನಾರಾಯಣಂ ನಮಸ್ಕೃತ್ಯಂ ಎಂಬ ಶ್ಲೋಕದಿಂದ ಆರಂಭವಾಗುವುದನ್ನೇ ಮಹಾಭಾರತದ ಮೂಲಪಾಠ ಎಂದು ಎಲ್ಲರೂ ನಂಬಿದ್ದಾರೆ. ಆದರೆ ಈ ಶ್ಲೋಕದಲ್ಲಿ ವ್ಯಾಸ ಮುನಿ ತಮಗೆ ತಾವೇ ನಮಸ್ಕರಿಸುವ ಸಾಲು ಇದೆ. ಹೀಗಾಗಿ ಇದು ಮೂಲಪಾಠವಲ್ಲ. ನಾರಾಯಣಂ ಸುರಗುರುಂ ಜಗದೇಕನಾಥಂ ಎಂಬ ಶ್ಲೋಕದಿಂದ ಆರಂಭವಾಗುವುದೇ ಮೂಲಪಾಠ ಎಂದು ಅಧ್ಯಯನದಿಂದ ತಿಳಿದು ಬಂದಿದೆ' ಎಂದು ಕೊರ್ಲಹಳ್ಳಿ ಹೇಳಿದರು.`ಮೂಲಪಾಠದಲ್ಲಿರುವ ಅನೇಕ ವಿಷಯಗಳನ್ನು ಸಹಿಸದ ಕೆಲವರು ಪಾಠವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ, ತಮಗೆ ಹಿತವಾಗುವಂತೆ ತಿದ್ದಿದ್ದಾರೆ. ಕೆಲವರು ಪ್ರಕ್ಷೇಪಗಳನ್ನು ಮಾಡಿದರು, ಇನ್ನು ಕೆಲವರು ವಿಕ್ಷೇಪಗಳನ್ನು ಮಾಡಿದರು. ಇದರಿಂದಾಗಿ ದೇಶದ ದೊಡ್ಡ ಸಂಪತ್ತಾದ ಮಹಾಭಾರತದ ಮೂಲದ ಬಗ್ಗೆ ಗೊಂದಲ ಉಂಟಾಗಿದೆ' ಎಂದು ಅವರು ವಿವರಿಸಿದರು.ವೈದ್ಯರಾದ ಡಾ. ಬಿ.ಡಿ.ನಾಡಗೌಡ, ಡಾ. ಎಸ್.ಎ.ಮಿರಜ್, ಡಾ.ಜಿ.ಬಿ. ಸತ್ತೂರ, ಡಾ. ವಿನೋದ ಕುಲಕರ್ಣಿ, ಉದ್ಯಮಿಗಳಾದ ಉಷಾ ಹೆಗಡೆ, ಶ್ರೀಕಾಂತ ಕೆಮ್ತೂರ, ಶಂಕರಣ್ಣ ಮುನವಳ್ಳಿ, ದಯಾನಂದ ರಾವ್,  ಪಲಿಮಾರು ಮಠದ ತತ್ವ ಸಂಶೋಧನಾ ಸಂಸತ್ತಿನ ಪ್ರಸಾರೋತ್ಸವದ ಮುಖ್ಯಸ್ಥ ಪಂ. ಬಿ.ಎನ್. ವೆಂಕಟೇಶಾಚಾರ್ಯ  ಮತ್ತಿತರರು ಉಪಸ್ಥಿತರಿದ್ದರು. ಅಭಿಯಾನದ ನಿರ್ವಾಹಕ ಸಮೀರಾಚಾರ್ಯ ಕಂಠಪಲ್ಲಿ ನಿರೂಪಿಸಿದರು. ಸುಧೀರ ಜೋಶಿ ಪರಿಚಯ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.