ಸೋಮವಾರ, ಅಕ್ಟೋಬರ್ 21, 2019
23 °C

ಮಹಾಯಾಗಗಳಿಗೆ ಮುಕ್ತಿಮಠ ಸಜ್ಜು

Published:
Updated:
ಮಹಾಯಾಗಗಳಿಗೆ ಮುಕ್ತಿಮಠ ಸಜ್ಜು

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯ ಪಂಚಗ್ರಾಮ ಮುಕ್ತಿಮಠದಲ್ಲಿ ನಡೆಯಲಿರುವ ಆಯುತ ಚಂಡಿ ಮಹಾಯಾಗ ಹಾಗೂ ಅತಿರುದ್ರ ಮಹಾಯಾಗಕ್ಕೆ ಪೂರ್ವಭಾವಿ ಪೂಜಾ ಪ್ರಕ್ರಿಯೆಗಳು ಗುರುವಾರದಿಂದ ಆರಂಭವಾಗಲಿದೆ.ಜ.12 ರಿಂದ ಜ.24ರ ವರೆಗೆ ನಡೆಯಲಿರುವ ಯಾಗದಲ್ಲಿ ರಾಜ್ಯದ ರಾಜಕೀಯ ಮುಖಂಡರು, ಧಾರ್ಮಿಕ ಗುರುಗಳು ಭಾಗವಹಿಸಲಿದ್ದಾರೆ. ಯಜ್ಞಶಾಲಾ ಪೂಜೆ, ಗಣಪತಿ ಹವನ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ಕೆ ಗುರುವಾರ ಚಾಲನೆ ಸಿಗಲಿದೆ.750 ಋತ್ವಿಜರು, 1008 ಸ್ವಾಮಿಗಳು ಹಾಗೂ ದಕ್ಷಿಣ ಭಾರತದ 32 ದೇವಾಲಯಗಳ ಅರ್ಚಕರು ಈ ಯಾಗಗಳ ಪೂಜಾ ವಿಧಿವಿಧಾನ ನಡೆಸಿಕೊಡಲಿದ್ದಾರೆ. ಜ.14 ರಂದು ಆಯುತ ಚಂಡಿ ಹಾಗೂ ಅತಿರುದ್ರ ಮಹಾಯಾಗ ಆರಂಭವಾಗಲಿವೆ.ಅಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜ.16 ರಂದು ಸಂಗನಬಸವ ಸ್ವಾಮೀಜಿ, ಜ.23 ರಂದು ರಾಘವೇಶ್ವರ ಸ್ವಾಮೀಜಿ, ಜ.24 ರಂದು ಕಂಚಿಕಾಮಕೋಟಿಯ ಜಯಂದ್ರ ಸರಸ್ವತಿ ಸ್ವಾಮೀಜಿ ಹಾಗೂ ರವಿಶಂಕರ ಗುರೂಜಿ ಪಾಲ್ಗೊಳ್ಳಲಿದ್ದಾರೆ.25 ಸಾವಿರ ಚದುರ ಅಡಿಯ ಯಾಗಶಾಲೆ, 62 ಸಾವಿರ ಚದುರ ಅಡಿಯ ಸಭಾ ಭವನ, 2 ಸಾವಿರ ಮಂದಿ ಭಕ್ತರು ಹಾಗೂ ಕಾರ್ಯಕರ್ತರ ವಸತಿಗಾಗಿ ತಾತ್ಕಾಲಿಕ ಶೆಡ್ ಹಾಕಲಾಗಿದೆ. 75 ಸ್ನಾನಗೃಹಗಳನ್ನೂ ನಿರ್ಮಿಸಲಾಗಿದೆ. 35 ಸಾವಿರ ಚದುರ ಅಡಿಯ ಅಡುಗೆ ಮನೆ ಸಿದ್ಧಗೊಳಿಸಲಾಗಿದೆ. ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.ಪ್ರತಿ ದಿನ ಮಧ್ಯಾಹ್ನ 3ಕ್ಕೆ ಧಾರ್ಮಿಕ ಸಭೆ, ಸಂಜೆ ಜಾನಪದ ಕಲಾ ಪ್ರದರ್ಶನ ನಡೆಯಲಿದೆ. ಜ.19 ರಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರ ನೇತೃತ್ವದಲ್ಲಿ ಕೃಷಿ ಮೇಳ, ಜ.15 ರಂದು ಸಾಹಿತ್ಯ ಸಂವಾದ, ಜ.16 ರಂದು ರವಿ ಭಜಂತ್ರಿ ಹಾಗೂ ಇಂದುಮತಿ ಸಾಲಿಮಠ ಅವರಿಂದ ಹಾಸ್ಯೋತ್ಸವ, ಜ.22 ರಂದು ದೇವಿ ಮಹಾತ್ಮಾ ಯಕ್ಷಗಾನ, ಜ.23 ರಂದು ವಸುಧಾ ಶರ್ಮಾ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿವೆ.ಮುಕ್ತಿ ಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಯಾಗ ನಡೆಯಲಿದೆ ಎಂದು ಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

Post Comments (+)