ಗುರುವಾರ , ಮೇ 13, 2021
39 °C

ಮಹಾರಾಷ್ಟ್ರದಿಂದ ನೀರು ತರಿಸಲು ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ 4 ಟಿ.ಎಂ.ಸಿ. ನೀರನ್ನು ಕೃಷ್ಣಾ ನದಿಗೆ ಮತ್ತು ಉಜ್ಜನಿ ಜಲಾಶಯದಿಂದ 2 ಟಿ.ಎಂ.ಸಿ. ನೀರನ್ನು ಭೀಮಾ ನದಿಗೆ ಬಿಡುವಂತೆ ಆ ರಾಜ್ಯದ ಮುಖ್ಯಮಂತ್ರಿಗಳಿಗೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ತಾವು ಕೋರಿದ್ದು, ಮಾನವೀಯ ದೃಷ್ಟಿಯಿಂದ ಈ ಜಲಾಶಯಗಳಲ್ಲಿ ನೀರಿನ ಲಭ್ಯತೆಯನ್ನು ಆಧರಿಸಿ ನೀರು ಬಿಡುವ ಭರವಸೆ ದೊರಕಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.ಶುಕ್ರವಾರ ಚಿತ್ತಾಪುರ ತಾಲ್ಲೂಕಿನ ಕೊರವಾರ ಗ್ರಾಮದಲ್ಲಿ ಬರ ಪರಿಸ್ಥಿತಿ ಮತ್ತು ಕುಡಿಯುವ ನೀರಿನ ಸಮಸ್ಯೆಯ ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಕೃಷ್ಣಾ ಮತ್ತು ಭೀಮಾ ತೀರದ ಗ್ರಾಮಗಳ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.ತಮ್ಮ ನೇತೃತ್ವದ ತಂಡವು ಬರ ಪರಿಸ್ಥಿತಿ ಅಧ್ಯಯನ ಪ್ರವಾಸವನ್ನು ಏ.9ರಿಂದ ಬೀದರ್ ಜಿಲ್ಲೆಯಿಂದ ಪ್ರಾರಂಭಿಸಲಿದೆ. ತಂಡವು ಏಪ್ರಿಲ್ 12ರವರೆಗೆ ಗುಲ್ಬರ್ಗ, ಯಾದಗಿರಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಪ್ರವಾಸ ಕೈಗೊಂಡು ಈ ಜಿಲ್ಲೆಗಳಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ಅವಲೋಕನ, ಕುಡಿಯುವ ನೀರು,ಮೇವು ಬ್ಯಾಂಕ್ ಸ್ಥಾಪನೆ ಮತ್ತು ಜಾನುವಾರು ಸಂರಕ್ಷಣೆ ಕುರಿತು ಜಿಲ್ಲಾಡಳಿತದಿಂದ ಕೈಗೊಂಡ ಕ್ರಮಗಳು, ಸರ್ಕಾರ ಬಿಡುಗಡೆ ಮಾಡಿದ ಹಣದ ಖರ್ಚಿನ ವಿವರ ಹಾಗೂ ಇನ್ನೂ ಬೇಕಾಗುವ ಅನುದಾನ ಮುಂತಾದ ವಿಷಯಗಳನ್ನು ಪರಿಶೀಲಿಸಿ ಅಂತಿಮ ವರದಿಯನ್ನು ಮುಂದಿನ ಕ್ರಮಕ್ಕಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.ಗುಲ್ಬರ್ಗ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ವಿವಿಧ ನೀರಾವರಿ ಯೋಜನೆಗಳ ಜಲಾಶಯಗಳಲ್ಲಿ ನೀರಿನ ಲಭ್ಯತೆಯನ್ನು ಗಮನಿಸಿ ಈ ಜಲಾಶಯಗಳ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಜನರ ಮತ್ತು ಜಾನುವಾರುಗಳ ಕುಡಿಯುವ ನೀರಿನ ತೀವ್ರ ಸಮಸ್ಯೆಯ ಪರಿಹಾರಕ್ಕಾಗಿ ಜಲಾಶಯಗಳಿಂದ ವಿವಿಧ ಕಾಲುವೆಗಳಿಗೆ ಮತ್ತು ಹಳ್ಳಗಳಿಗೆ ಕೂಡಲೇ ನೀರು ಬಿಡಲು ಮುಖ್ಯ ಎಂಜಿನಿಯರ್ ಅವರಿಗೆ ಸೂಚಿಸಲಾಗಿದೆ.ಸದ್ಯಕ್ಕೆ  ಜಿಲ್ಲೆಯ ಬೆಣ್ಣೆತೊರಾ ಜಲಾಶಯದಲ್ಲಿ 3.88 ಟಿ.ಎಂ.ಸಿ., ಗಂಡೋರಿನಾಲಾದಲ್ಲಿ 1.18 ಟಿ.ಎಂ.ಸಿ., ಅಮರ್ಜಾದಲ್ಲಿ 0.739 ಟಿ.ಎಂ.ಸಿ. ಮತ್ತು ಭೀಮಾ ಏತ ನೀರಾವರಿ ಯೋಜನೆಯಲ್ಲಿ 0.586 ಟಿ.ಎಂ.ಸಿ. ನೀರು ಲಭ್ಯವಿದೆ. ಅದೇ ರೀತಿ ಗುಲ್ಬರ್ಗ ನಗರಕ್ಕೂ ಬೆಣ್ಣೆತೊರಾ ನದಿಯಿಂದ ನಿರಂತರವಾಗಿ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.ಇದಕ್ಕೂ ಮುನ್ನ ಹೆಬ್ಬಾಳ ಗ್ರಾಮಕ್ಕೆ ಭೇಟಿ ನೀಡಿದರು. ಸದರಿ ಗ್ರಾಮದ ಕುಡಿಯುವ ನೀರಿನ ಯೋಜನೆಗೆ ಸರಬರಾಜಾಗುವ ಜಲಮೂಲವನ್ನು ಸರಿಪಡಿಸಬೇಕಲ್ಲದೆ ಇತರ ಜಲಮೂಲಗಳಿಂದ ನೀರು ಪಡೆದು ಫಿಲ್ಟರ್ ಮಾಡಿದ ನೀರನ್ನು ಸಮರ್ಪಕವಾಗಿ ವಿತರಿಸುವ ವ್ಯವಸ್ಥೆ ಮಾಡಬೇಕು. ಪೈಪ್‌ಲೈನ್, ವಿದ್ಯುತ್ ಮೋಟಾರು ಪಂಪ್ ದುರಸ್ತಿ ಕಾರ್ಯವನ್ನು ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನದಿಂದ ಕೈಗೊಳ್ಳುವಂತೆ ಆದೇಶಿಸಿದರು.ಹೆಬ್ಬಾಳ ಗ್ರಾಪಂ ವ್ಯಾಪ್ತಿಯ ಕಮಕನೂರ, ನಿಪ್ಪಾಣಿ, ಕೊಂಚಿ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಬೇಕು ಎಂದರು. ಕೊರವಾರ  ಮತ್ತು ಮಂಗಾಣಿತಾಂಡಾ ಗ್ರಾಮಗಳ ಜನರು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಸಚಿವರ ಗಮನಕ್ಕೆ ತಂದಾಗ ಈ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೊಳವೆ ಬಾವಿಗಳನ್ನು ಶುಚಿಗೊಳಿಸಲು ಮತ್ತು ಫ್ಲಶ್ ಮಾಡಲು ಹಾಗೂ ಅವಶ್ಯವಿರುವ ಓಣಿಗಳಲ್ಲಿ ಹೊಸ ಪೈಪ್‌ಲೈನ್ ಹಾಕುವಂತೆ ಸೂಚಿಸಿದರು.ನೀರಾವರಿ ವಲಯದ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣನವರ್, ಶಾಸಕ ವಾಲ್ಮೀಕ ನಾಯಕ್, ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್., ಜಿಪಂ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ, ಡಿ.ಆರ್.ಡಿ.ಎ. ಯೋಜನಾ ನಿರ್ದೇಶಕ ಕೆಂಚಣ್ಣನವರ್ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.