ಮಂಗಳವಾರ, ನವೆಂಬರ್ 19, 2019
29 °C

ಮಹಾರಾಷ್ಟ್ರ ಸಚಿವರ ಹೇಳಿಕೆಗೆ ಕತ್ತಿ ಖಂಡನೆ

Published:
Updated:

ಬೆಳಗಾವಿ: `ಎರಡು ಭಾಷಿಕರ ನಡುವೆ ವೈಷಮ್ಯ ಬೆಳೆಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್.ಪಾಟೀಲ ಅವರು ಈಚೆಗೆ ಪ್ರಚೋದನಕಾರಿ ಭಾಷಣ ಮಾಡಿದ್ದು  ಖಂಡನೀಯ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆರ್.ಆರ್.ಪಾಟೀಲ  ವಿರುದ್ಧ ಕಿಡಿಕಾರಿದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಮರಾಠಿ ಭಾಷಿಕರು ಕನ್ನಡ ಭಾಷಿಕರೊಂದಿಗೆ ಸುಮಧುರ ಬಾಂಧವ್ಯ ಹೊಂದಿದ್ದಾರೆ. ಆದರೆ, ಎರಡು ಭಾಷಿಕರ ನಡುವೆ ವೈಷಮ್ಯ ಬೆಳೆಸುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡುವುದು ಖಂಡನೀಯ ಎಂದರು.`ರಾಜ್ಯದ ಉತ್ತರ ಗಡಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮರಾಠಿ ಭಾಷಿಕರು ಸಹ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಸಿ.ಡಿ.ಯನ್ನು ಮಹಾರಾಷ್ಟ್ರದ ಸಚಿವರು ನೋಡಲಿ. ಇನ್ನಾದರೂ ವಿವಾದಾತ್ಮಕ ಹೇಳಿಕೆ ನೀಡುವುದನ್ನು ಬಿಡಬೇಕು' ಎಂದರು.ಶೀಘ್ರ ನೀರು ಬಿಡುಗಡೆ: `ನೀರು ಹಂಚಿಕೆ ಕುರಿತು ಮಹಾರಾಷ್ಟ್ರ- ಕರ್ನಾಟಕ ಅಂತರರಾಜ್ಯ ಒಪ್ಪಂದದ ಪ್ರಕಾರ ಕೊಯ್ನಾ ಜಲಾಶಯ ದಿಂದ ಕೃಷ್ಣಾ ನದಿಗೆ 1.37 ಟಿಎಂಸಿ ಅಡಿ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿದೆ. ಶನಿವಾರ (ಏ. 13) ನೀರು ಬಿಡುವ ನಿರೀಕ್ಷೆ ಇದೆ' ಎಂದು ಸಚಿವ ಉಮೇಶ ಕತ್ತಿ ತಿಳಿಸಿದರು.`ಹೆಚ್ಚುವರಿಯಾಗಿ 4 ಟಿಎಂಸಿ ಅಡಿ ನೀರು ಬಿಡಲು ಮನವಿ ಮಾಡಿದ್ದೇವೆ. ಇದಕ್ಕಾಗಿ ಹಣ ನೀಡಲು ಸಹ ಸರ್ಕಾರ ಸಿದ್ಧವಿದ್ದು, ಮಹಾರಾಷ್ಟ್ರಕ್ಕೆ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಾಗುವುದು' ಎಂದರು.

ಪ್ರತಿಕ್ರಿಯಿಸಿ (+)