ಮಹಾವೀರನ ಹೆಸರಿನಲ್ಲಿ ಜಿಂಕೆವನ

7

ಮಹಾವೀರನ ಹೆಸರಿನಲ್ಲಿ ಜಿಂಕೆವನ

Published:
Updated:

ಹೈದರಾಬಾದ್‌ಗೆ ಹೋಗುವ ಪ್ರವಾಸಿಗರು ರಾಜಧಾನಿ ನಗರಕ್ಕೆ ಸಮೀಪದ ಜಿಂಕೆ ಉದ್ಯಾನಕ್ಕೆ ಹೋಗದಿದ್ದರೆ ಅವರ ಪ್ರವಾಸ ಅಪೂರ್ಣವೇ ಸರಿ! ಹೈದರಾಬಾದ್‌ನಿಂದ 15 ಕಿಮೀ ದೂರದಲ್ಲಿ ಇರುವ `ಮಹಾವೀರ ಹರಿಣ ವನಸ್ತಾಲಿ' ಪ್ರವಾಸಿಗರ ಕುತೂಹಲ ತಣಿಸುವ ಸ್ಥಾನಗಳಲ್ಲೊಂದು.1975ರಲ್ಲಿ ಭಾರತ ಸರ್ಕಾರ ಇದನ್ನು ರಾಷ್ಟ್ರೀಯ ಉದ್ಯಾನ ಎಂದು ನಾಮಕರಣ ಮಾಡಿತು. ಅದೇ ವರ್ಷ ಜೈನ ತೀರ್ಥಂಕರ ಮಹಾವೀರರ 2500ನೇ ಜನ್ಮ ಶತಮಾನೋತ್ಸವ ಆಚರಣೆ ನಡೆದಿದ್ದು, ಅದರ ಸವಿನೆನಪಿಗಾಗಿ ಈ ಉದ್ಯಾನಕ್ಕೆ `ಮಹಾವೀರ'ರ ಹೆಸರನ್ನು ಇಡಲಾಗಿದೆ. ವನಸ್ತಾಲಿಪುರಂ ಎಂಬ ಹೆಸರಿನ ಈ ಪ್ರದೇಶವೂ ಉದ್ಯಾನದ ಹೆಸರಿನಲ್ಲಿ ಸೇರಿಕೊಂಡು `ಮಹಾವೀರ ಹರಿಣ ವನಸ್ತಾಲಿ' ಎಂದಾಗಿದೆ. ಹೈದರಾಬಾದ್- ವಿಜಯವಾಡ ರಸ್ತೆಯಲ್ಲಿ ಸಿಗುವ ಈ ವನ್ಯಜೀವಿ ತಾಣ ಜಿಂಕೆಗಳ ಸಂರಕ್ಷಣಾ ಪ್ರದೇಶ ಎಂದೇ ಹೆಸರುವಾಸಿ.ಹಚ್ಚ ಹಸುರಿನ ಕಾಡು, ಜೊತೆಜೊತೆಗೆ ಕಡು ಹಳದಿ ಹುಲ್ಲುಗಾವಲು ಈ ಪರಿಸರದ ವೈಶಿಷ್ಟ್ಯ. ಕಾಡಿನ ಅಂತರಾಳಕ್ಕೆ ಹೋದಷ್ಟೂ ದಟ್ಟ ಕಾಡು ಎದುರಾಗುತ್ತದೆ. ಹುಲ್ಲುಗಳು, ಪೊದೆಗಳ ನಡುವೆ ಬೇಕಾದಷ್ಟು ಪ್ರಾಣಿಗಳು ಸುಳಿದಾಡುತ್ತಿರುತ್ತವೆ. ಆಂಧ್ರಪ್ರದೇಶದ ಅರಣ್ಯ ಇಲಾಖೆ ಈ ವನ್ಯಜೀವಿ ತಾಣವನ್ನು ನಿರ್ವಹಿಸುತ್ತಿದೆ. ಪ್ರವಾಸಿಗರು ಸಫಾರಿ ಹೊರಡಲು ಬಯಸಿದರೆ ಅವರಿಗೆ ನೆರವಾಗಲು ವಾಹನ ವ್ಯವಸ್ಥೆಯೂ ಇದೆ.ಕೃಷ್ಣಮೃಗಗಳ ದೊಡ್ಡ ಸಂತತಿ ಉದ್ಯಾನದಲ್ಲಿದೆ. ಅಳಿವಿನ ಅಂಚಿನಲ್ಲಿ ಇರುವ 350 ಅಪರೂಪದ ಕೃಷ್ಣಮೃಗಗಳು ಇಲ್ಲಿವೆ. ನಾಲ್ಕು ಕೊಂಬಿನ ಜಿಂಕೆಗಳು, ಚುಕ್ಕೆ ಜಿಂಕೆಗಳಿಗೂ ಈ ಪರಿಸರ ನೆಲೆಯಾಗಿದೆ. ಅಷ್ಟು ಮಾತ್ರವಲ್ಲ, ಚಿರತೆ, ಕಾಡು ಕರಡಿ, ಕಾಡು ಬೆಕ್ಕು, ಹಾವುಗಳು ಹೀಗೆ ಇಲ್ಲಿರುವ ಪ್ರಾಣಿ-ಪಕ್ಷಿಗಳ ಬಳಗ ಬೆಳೆಯುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry