ಮಂಗಳವಾರ, ನವೆಂಬರ್ 19, 2019
27 °C

ಮಹಾವೀರ ಜಯಂತಿ: ಜಿನಮಂದಿರಗಳಲ್ಲಿ ವಿಶೇಷ ಪೂಜೆ

Published:
Updated:
ಮಹಾವೀರ ಜಯಂತಿ: ಜಿನಮಂದಿರಗಳಲ್ಲಿ ವಿಶೇಷ ಪೂಜೆ

ಬೆಂಗಳೂರು: ನಗರದಲ್ಲಿ ಮಂಗಳವಾರ ಮಹಾವೀರ ಜಯಂತಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ನಗರದ ಜಿನಮಂದಿರಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾವೀರ ಮೂರ್ತಿಯ ಮೆರವಣಿಗೆ ಹಾಗೂ ಉತ್ಸವಗಳು ನಡೆದವು.2,612ನೇ ಮಹಾವೀರ ಜಯಂತಿಯನ್ನು ನಗರದೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಯಿತು. ವಿಲ್ಸನ್ ಗಾರ್ಡನ್‌ನ ಖಂಡೇಲ್‌ವಾಲ್ ದಿಗಂಬರ ಜೈನ ಸಮಾಜವು ಮಹಾವೀರ ಜಯಂತಿಯನ್ನು ದಿಗಂಬರ ಜಿನ ಮಂದಿರದಲ್ಲಿ ವಿಶೇಷವಾಗಿ ಆಚರಿಸಿತು. ಜಿನ ಮಂದಿರಗಳಲ್ಲಿ ವಿಶೇಷ ಪೂಜೆಗಳು ನಡೆದವು.ಸ್ವಾತಂತ್ರ್ಯ ಉದ್ಯಾನದ ಬಳಿ ನಡೆದ ಮಹಾವೀರರ ಪ್ರತಿಮೆಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಮಹಾವೀರರ ಪ್ರತಿಮೆಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಮಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.ರಾಜಾಜಿನಗರ ಆಟದ ಮೈದಾನದ ಸಮೀಪದ ಜಿನ ಮಂದಿರದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆಯನ್ನು ಆಯೋಜಿಸಲಾಗಿತ್ತು. ನೂರಾರು ಭಕ್ತರು ಮಹಾವೀರರ ದರ್ಶನ ಪಡೆದರು. ನಂತರ ಸಾರ್ವಜನಿಕರಿಗೆ ಮಜ್ಜಿಗೆ ಹಾಗೂ ಪಾನಕವನ್ನು ವಿತರಿಸಲಾಯಿತು.ಧಾರ್ಮಿಕ ಸಭೆ : ದಿಗಂಬರ ಜೈನ ಮಹಾವೀರ ಸಂಘವು ನಗರದ ಚಿಕ್ಕಪೇಟೆಯ ಮಹಾವೀರ ಜಿನಮಂದಿರದಲ್ಲಿ ಮಂಗಳವಾರ ಮಹಾವೀರರ 2,612ನೇ ಜಯಂತಿ ಅಂಗವಾಗಿ ಧಾರ್ಮಿಕ ಸಭೆಯನ್ನು ಆಯೋಜಿಸಿತ್ತು.ಉಪನ್ಯಾಸಕಿ ಜಯಲಕ್ಷ್ಮೀ ಅಭಯಕುಮಾರ್ ಮಾತನಾಡಿ, `ಮಹಾವೀರನ ಉಪದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇತರರಿಗೆ ನೋವಾಗದಂತೆ ಪ್ರಾಮಾಣಿಕವಾಗಿ ಬದುಕಬೇಕು' ಎಂದರು.ಸಂಘದ ಮಾಜಿ ಅಧ್ಯಕ್ಷ ದಿ. ಎಂ.ಸಿ.ಅನಂತರಾಜಯ್ಯ ಅವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ `ಪ್ರಜಾವಾಣಿ'ಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, `ಜೈನರು ತಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ದಿಗಂಬರ ಜೈನರಲ್ಲಿ ಮಹಿಳೆಯರನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ಕಾಣುವ ಮನೋಭಾವ ಬದಲಾಗಬೇಕು' ಎಂದರು.ರಾಜ್ಯ ಸರ್ಕಾರದ ಔಷಧ ನಿಯಂತ್ರಕ ಡಾ.ಭರತೇಶ್ ಜಗಶೆಟ್ಟಿ ಮಾತನಾಡಿ, `ಜೈನ ಧರ್ಮೀಯರೆಲ್ಲರೂ ಒಗ್ಗೂಡಬೇಕು. ಜೈನ ಧರ್ಮದ ಆಚಾರ ವಿಚಾರಗಳನ್ನು ಕೈ ಬಿಡಬಾರದು' ಎಂದು ಕರೆನೀಡಿದರು. ಸಂಘದ ಅಧ್ಯಕ್ಷ ಟಿ.ಜಿ.ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.ಸನ್ಮಾನ ಕಾರ್ಯಕ್ರಮ: ಕರ್ನಾಟಕ ಜೈನ ಅಸೋಸಿಯೇಷನ್ ನಗರದ ಜೈನ ಭವನದಲ್ಲಿ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು.ಕಾರ್ಯಕ್ರಮದಲ್ಲಿ ಮಾತನಾಡಿದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಜಿತ್ ಗುಂಜಾಳ್, `ಪುರುಷ ಮತ್ತು ಮಹಿಳೆಯರ ನಡುವೆ ಸಮಾನತೆಯನ್ನು ಸಾರಿದ ಮಹಾವೀರ ಆದರ್ಶ ಸಮಾಜ ಸುಧಾರಕ' ಎಂದು ಬಣ್ಣಿಸಿದರು.ಬರಹಗಾರ ದೇವೇಂದ್ರಪ್ಪ ಎನ್. ಅಕ್ಕಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಬಿ.ಎನ್.ಧನ್ಯಕುಮಾರ್, ಮಹಾವೀರ ಶಿಕ್ಷಣಸಂಸ್ಥೆಯ ಅಧ್ಯಕ್ಷ ಡಾ.ಅಭಯಕುಮಾರ ಶಾಂ. ಮಂಟಗಣಿಕರ್, ವೈದ್ಯ ಡಾ.ಎ.ಎಲ್.ಬ್ರಹ್ಮಣ್ಣ, ಕ್ರೀಡಾಪಟುಗಳಾದ ವಿ.ಕರುಣಾ ಜೈನ್, ಎಚ್.ಎ. ಪ್ರಜ್ಞಾ, ಶಾಶ್ವತ್ ಜೈನ್, ಎನ್.ನಿಖಿಲ್, ಗಾಯಕಿ ಟಿ.ಎಲ್.ಕುಸುಮಾ ಜೈನ್ ಅವರನ್ನು ಸನ್ಮಾನಿಸಲಾಯಿತು.ದಿಗಂಬರ ಜೈನ ಮಠದ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮೀಜಿ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಎಚ್.ವಿ.ಪಾರ್ಶ್ವನಾಥ್, ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರಕುಮಾರ್ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)