ಭಾನುವಾರ, ಫೆಬ್ರವರಿ 28, 2021
31 °C
ಅಪಾಯಕಾರಿ ಅಂಶದ ಪತ್ತೆಗಾಗಿ ವಿವಿಧ ರಾಜ್ಯಗಳಲ್ಲಿ ನೂಡಲ್ಸ್‌ ಮಾದರಿಯ ಪರೀಕ್ಷೆ

ಮಹಾ, ಕೇರಳ, ಗೋವಾದಲ್ಲಿ ಮ್ಯಾಗಿ ಪಾಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾ, ಕೇರಳ, ಗೋವಾದಲ್ಲಿ ಮ್ಯಾಗಿ ಪಾಸು

ನವದೆಹಲಿ (ಪಿಟಿಐ): ಮ್ಯಾಗಿ ನೂಡಲ್ಸ್‌ನಲ್ಲಿ ವಿಷಕಾರಕ ಅಂಶ ಪತ್ತೆಯಾದ ಬೆನ್ನಲ್ಲಿಯೇ ವಿವಿಧ ರಾಜ್ಯಗಳಲ್ಲಿ ಮ್ಯಾಗಿ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.ಕೇರಳದ ಪ್ರಯೋಗಾಲಯದಲ್ಲಿ  ಮೂರು ಬಗೆಯ ಮ್ಯಾಗಿ ನೂಡಲ್ಸ್‌ನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇದರಲ್ಲಿ  ಸೀಸವು ನಿಗದಿತ ಪ್ರಮಾಣಕ್ಕಿಂತಲೂ  ಕಡಿಮೆ  ಇರುವುದು ದೃಢಪಟ್ಟಿದೆ. ಆದರೆ ಮೊನೊಸೋಡಿಯಂ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ.ಗೋವಾದ ಮ್ಯಾಗಿ ಮಾದರಿಗಳಲ್ಲಿ  ಮೊನೊಸೋಡಿಯಂ ಹಾಗೂ ಸೀಸ ಪತ್ತೆಯಾಗಿಲ್ಲ. ಮಹಾರಾಷ್ಟ್ರದಲ್ಲಿ ಈವರೆಗೆ ಪರೀಕ್ಷೆಗೆ ಒಳಪಡಿಸಿದ ಮಾದರಿಗಳಲ್ಲಿ ಈ  ಎರಡು ಅಂಶಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಕಂಡುಬಂದಿಲ್ಲ.ಮೇಘಾಲಯದಲ್ಲಿ  ಸದ್ಯದಲ್ಲಿಯೇ ಮ್ಯಾಗಿ ಮಾರಾಟಕ್ಕೆ ನಿಷೇಧ ಹೇರುವ ಸಾಧ್ಯತೆ ಇದೆ. ಮ್ಯಾಗಿ ಮಾದರಿಗಳಲ್ಲಿ ಮೊನೊಸೋಡಿಯಂ ಗ್ಲುಟಮೇಟ್‌ ಹಾಗೂ ಸೀಸದ ಅಂಶವು ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.ತಮಿಳುನಾಡು, ತೆಲಂಗಾಣ, ಅಸ್ಸಾಂ, ಹರಿಯಾಣ ಮತ್ತಿತರ ರಾಜ್ಯಗಳು ಕೂಡ ಮ್ಯಾಗಿ ಮಾದರಿ ಪರೀಕ್ಷೆ ನಡೆಸುತ್ತಿವೆ.ಸೇನಾ ಸಿಬ್ಬಂದಿಗೆ ಸೂಚನೆ: ಮ್ಯಾಗಿ ವಿವಾದಕ್ಕೆ ಸಂಬಂಧಿಸಿ ಮುಂದಿನ ಆದೇಶ ಬರುವವರೆಗೆ ಮ್ಯಾಗಿ ನೂಡಲ್ಸ್‌ ಸೇವಿಸದಿರುವಂತೆ ಸೇನಾಪಡೆಯು  ತನ್ನ ಸಿಬ್ಬಂದಿಗೆ  ಸೂಚನೆ ನೀಡಿದೆ.ಮಾಲೋಚನೆ: ಮ್ಯಾಗಿ ಮಸಾಲಾದಲ್ಲಿ ಸೀಸದ ಅಂಶ  ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವುದು ಪತ್ತೆಯಾದ ಬೆನ್ನಲ್ಲಿಯೇ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ಅವರು ನೆಸ್ಲೆ ಇಂಡಿಯಾ ಅಧಿಕಾರಿಗಳ ಜತೆ ಬುಧವಾರ ಸಮಾಲೋಚನೆ ನಡೆಸಿದರು.ನಗರದ ವಿವಿಧ ಭಾಗಗಳಿಂದ ಸಂಗ್ರಹಿಸಿದ ಮ್ಯಾಗಿ ಮಾದರಿಗಳನ್ನು ಪರೀಕ್ಷಿಸಿದಾಗ ಅವುಗಳಲ್ಲಿ ಸೀಸದ ಅಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವುದು ದೃಢಪಟ್ಟಿದೆ. ಆದಕಾರಣ ಸರ್ಕಾರವು ನೆಸ್ಲೆ ವಿರುದ್ಧ ಕ್ರಮ ಜರುಗಿಸಲು ಮಂಗಳವಾರ ನಿರ್ಧರಿಸಿತ್ತು. ಸಂಗ್ರಹಿಸಿದ ಒಟ್ಟು 13 ಮಾದರಿಗಳಲ್ಲಿ 10 ಮಾದರಿಗಳು ಸೇವನೆಗೆ ಯೋಗ್ಯವಲ್ಲ ಎನ್ನುವುದು ದೃಢಪಟ್ಟಿದೆ.‘ಆದೇಶ ಬಂದಿಲ್ಲ’: ಮ್ಯಾಗಿ ನೂಡಲ್ಸ್‌ಗಳನ್ನು ವಾಪಸ್‌ ತೆಗೆದುಕೊಳ್ಳುವಂತೆ ಕೇಂದ್ರ ಅಥವಾ ರಾಜ್ಯದ ಆಹಾರ ಮತ್ತು ಔಷಧ ಆಡಳಿತದಿಂದ( ಎಫ್‌ಡಿಎ) ಯಾವುದೇ ಆದೇಶ ಬಂದಿಲ್ಲ ಎಂದು ನೆಸ್ಲೆ ಇಂಡಿಯಾ ಹೇಳಿದೆ.ಸಿಎಸ್‌ಇ ಸ್ವಾಗತ: ವಿಷಕಾರಕ ಅಂಶಗಳು ಪತ್ತೆಯಾದ ಕಾರಣ ಮ್ಯಾಗಿಯನ್ನು ಪರೀಕ್ಷೆಗೆ ಒಳಪಡಿಸುತ್ತಿರುವುದನ್ನು ದೆಹಲಿಯ ವಿಜ್ಞಾನ ಹಾಗೂ ಪರಿಸರ ಕೇಂದ್ರ (ಸಿಎಸ್‌ಇ)ಸ್ವಾಗತಿಸಿದೆ.ಇದು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯ. ಆದಕಾರಣ ಇಲ್ಲಿ ರಾಜಿಗೆ ಅವಕಾಶ ಇಲ್ಲ. ಸಂಸ್ಕರಿತ ಆಹಾರವನ್ನು ಇದೇ ಮೊದಲ ಬಾರಿ  ಸರ್ಕಾರ ಪರೀಕ್ಷೆಗೆ ಒಳಪಡಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಸಿಎಸ್‌ಇ ಉಪನಿರ್ದೇಶಕ ಚಂದ್ರಭೂಷಣ್‌ ಹೇಳಿದ್ದಾರೆ.2012ರಲ್ಲಿ ಸಿಎಸ್‌ಸಿ ವಿವಿಧ ರೀತಿಯ ಸಂಸ್ಕರಿತ ಆಹಾರಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಮ್ಯಾಗಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉಪ್ಪಿನ ಅಂಶ  ( 3 ಗ್ರಾಂ) ಹಾಗೂ ಶೇ70ರಷ್ಟು ಶರ್ಕರಪಿಷ್ಟ ಕಂಡುಬಂದಿತ್ತು.ಮಿತಿ ಮೀರಿದರೆ ದುಷ್ಪರಿಣಾಮ

ಹಲವು ಸಿದ್ಧ ಆಹಾರ ಉತ್ಪನ್ನಗಳಲ್ಲಿ ಕಂಡುಬರುವ ಸೀಸ ಹಾಗೂ ಎಂಎಸ್‌ಜಿ (ಮೊನೊ ಸೋಡಿಯಂ ಗ್ಲುಟಮೇಟ್‌)ಪ್ರಮಾಣ ನಿಗದಿಗಿಂತ ಹೆಚ್ಚಾದರೆ ಅದು ಆರೋಗ್ಯದ ಮೇಲೆ  ದುಷ್ಪರಿಣಾಮ ಬೀರುತ್ತದೆ.

ಸೀಸ: ಸಿದ್ಧ ಆಹಾರ ವಸ್ತುಗಳಲ್ಲಿ ಸೀಸದ ಕಣಗಳ ಪ್ರಮಾಣ 2.5 ಪಿಪಿಎಂ (ಪ್ರತಿ ಹತ್ತು ಲಕ್ಷ ಕಣಗಳಲ್ಲಿ ಸೀಸದ ಪ್ರಮಾಣ) ಮೀರಬಾರದು. ಒಂದು ವೇಳೆ ಹೆಚ್ಚಾದಲ್ಲಿ ಅದು ವಿಷಕಾರಕವಾಗುತ್ತದೆ. ಇದರಿಂದ ರಕ್ತಹೀನತೆ, ಹೊಟ್ಟೆನೋವು, ಏಕಾಗ್ರತೆ ಕೊರತೆ, ಹೃದಯ ಬಡಿತ ಏರುಪೇರು, ಮೂತ್ರಪಿಂಡ ಹಾಗೂ ಲಿವರ್‌ ತೊಂದರೆಗಳು ಕಾಣಿಸಿಕೊಳ್ಳುತ್ತವೆ.ಮೊನೊಸೋಡಿಯಂ ಗ್ಲುಟಮೇಟ್‌:  ಟೊಮೆಟೊ, ಸೋಯಾಬೀನ್‌, ಒಣ ಅಣಬೆ ಹಾಗೂ ಹಾಲಿನ ಉತ್ಪನ್ನಗಳಲ್ಲಿ ಇದು ನೈಸರ್ಗಿಕವಾಗಿ ಕಂಡುಬರುತ್ತದೆ. ಮೊನೊ ಸೋಡಿಯಂ ಗ್ಲುಟಮೇಟ್‌ ಅನ್ನು ಪಿಷ್ಟ, ಸಕ್ಕರೆ ಇತ್ಯಾದಿಗಳ ಹುದುಗಿಸುವಿಕೆಯಿಂದ ಕೃತಕವಾಗಿ ತಯಾರಿಸಿ  ಸಿದ್ಧ ಆಹಾರಗಳಲ್ಲಿ ಬಳಸಲಾಗುತ್ತದೆ. ಇದು ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು.

 

‘ಕಾನೂನಿಗೆ ಸಹಕರಿಸುವೆ’

ಮುಂಬೈ: 
ಕಾನೂನು ಏನು ಹೇಳುತ್ತದೆಯೋ ಹಾಗೆ ನಡೆದುಕೊಳ್ಳುತ್ತೇನೆ ಎಂದು ಮ್ಯಾಗಿ ಪ್ರಚಾರ ರಾಯಭಾರಿ ಅಮಿತಾಭ್‌್ ಬಚ್ಚನ್‌ ಬುಧವಾರ ಮುಂಬೈನಲ್ಲಿ ಹೇಳಿದ್ದಾರೆ.

‘ನನಗೆ ಈವರೆಗೆ ನೋಟಿಸ್‌ ಬಂದಿಲ್ಲ. ಬಂದ ತಕ್ಷಣ ಅದನ್ನು ನನ್ನ ವಕೀಲರ ಮುಂದೆ ಇಡುತ್ತೇನೆ. ಕಾನೂನು ಹೇಳುವಂತೆ ನಡೆದುಕೊಳ್ಳುತ್ತೇನೆ. 2 ವರ್ಷಗಳಿಂದ ನಾನು ಮ್ಯಾಗಿ ಪ್ರಚಾರದಲ್ಲಿ ತೊಡಗಿಲ್ಲ. ನನಗೂ ಮ್ಯಾಗಿ ಉತ್ಪನ್ನಕ್ಕೂ ಸಂಬಂಧ ಇಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಭುವನೇಶ್ವರ ವರದಿ: ಮ್ಯಾಗಿ ವಿವಾದದ  ಕಾರಣ, ಶುಕ್ರವಾರ ಅಮಿತಾಭ್‌ ಬಚ್ಚನ್‌ ಅವರ ಉದ್ದೇಶಿತ ಒಡಿಶಾ ಭೇಟಿಯನ್ನು  ವಿರೋಧಿಸುವುದಾಗಿ ಇಲ್ಲಿನ ಕಳಿಂಗ ಸೇನೆಯು ಹೇಳಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.