ಬುಧವಾರ, ನವೆಂಬರ್ 13, 2019
22 °C

ಮಹಾ ಬೆಂಗಳೂರು ಆಡಳಿತ ವ್ಯವಸ್ಥೆ: ಕಾಂಗ್ರೆಸ್ ಭರವಸೆ

Published:
Updated:

ಬೆಂಗಳೂರು: ಅಧಿಕಾರಕ್ಕೆ ಬಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜೊತೆ ಸುತ್ತಲಿನ ನಗರಗಳನ್ನೂ ಸೇರಿಸಿ ಆಡಳಿತ ನಡೆಸಲು ಅನುಕೂಲವಾಗುವಂತೆ `ಮಹಾ ಬೆಂಗಳೂರು ಆಡಳಿತ ವ್ಯವಸ್ಥೆ' (ಗ್ರೇಟರ್ ಬೆಂಗಳೂರು) ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜೊತೆ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ರಾಮನಗರ, ಕನಕಪುರ ಮತ್ತಿತರ ನಗರ ಪ್ರದೇಶಗಳ ಆಡಳಿತ ವ್ಯವಸ್ಥೆಯನ್ನು ಸಂಯೋಜಿಸುವ ಯೋಚನೆಯನ್ನು ಮುಂದಿಟ್ಟಿದೆ.  

ಬೃಹತ್ ಮುಂಬೈ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ರೂಪಿಸುವುದಾಗಿ ಹೇಳಿದೆ.ಜಲಮಂಡಲಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಸ್ಕಾಂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತಿತರ ಪ್ರಮುಖ ಸಂಸ್ಥೆಗಳನ್ನು ಬಿಬಿಎಂಪಿ ಅಡಿಯಲ್ಲಿ ತರಲು `ಬೃಹತ್ ಬೆಂಗಳೂರು ಮಹಾನಗರ ಕಾನೂನು' ಜಾರಿಗೆ ತರುವ ಆಶ್ವಾಸನೆಯೂ ಪ್ರಣಾಳಿಕೆಯಲ್ಲಿದೆ.ಪಾಲಿಕೆಯ ವ್ಯಾಪ್ತಿಯಲ್ಲಿ ಆಡಳಿತ ವಿಕೇಂದ್ರೀಕರಣ, ಸಂಚಾರ ದಟ್ಟಣೆ ಕಡಿಮೆ ಮಾಡಲು ವರ್ತುಲ ರೈಲ್ವೆ ಯೋಜನೆ, ನಗರದ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಭಾಗಗಳನ್ನು ಸಂಪರ್ಕಿಸಲು ಎತ್ತರಿಸಿದ ರಸ್ತೆ ನಿರ್ಮಾಣ, ಬಿಡದಿ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ಮತ್ತು ಸೋಮನಹಳ್ಳಿವರೆಗೆ ಮೆಟ್ರೊ ರೈಲು ಸಂಪರ್ಕ ವಿಸ್ತರಣೆ, ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರಿದ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವ ಭರವಸೆಯನ್ನೂ ನೀಡಿದೆ.

ಪ್ರತಿಕ್ರಿಯಿಸಿ (+)