ಶುಕ್ರವಾರ, ಜೂನ್ 18, 2021
28 °C
ಪೀಠೋಪಕರಣಕ್ಕೆ ಬೆಂಕಿ; ಕಲ್ಲು ತೂರಾಟ: 64 ಮಂದಿ ಬಂಧನ

ಮಹಿಕೊ ಕಂಪೆನಿ ಮೇಲೆ ರೈತರ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಕಳಪೆ ಬಿ.ಟಿ ಹತ್ತಿ ಬೀಜ ಬಿತ್ತಿ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡು­ವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ರೈತರು, ಮಹಿಕೊ ಕಂಪೆನಿಯ ಬೀಜೋತ್ಪಾದನಾ ಕೇಂದ್ರದ ಮೇಲೆ ದಾಳಿ ನಡೆಸಿ, ಕಚೇರಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಘಟನೆ ರಾಣೆಬೆನ್ನೂರ ತಾಲ್ಲೂಕಿನ ಕಮದೋಡ ಗ್ರಾಮದ ಬಳಿ ಗುರುವಾರ ನಡೆದಿದೆ.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆ­ಯಲ್ಲಿ ಪಾಲ್ಗೊಂಡಿದ್ದ 64 ಮಂದಿಯನ್ನು ಬಂಧಿಸಿದ ಪೊಲೀಸರು ಸಂಜೆ ಬಿಡುಗಡೆ ಮಾಡಿದರು.ಘಟನೆಯಲ್ಲಿ ಕಂಪೆನಿ ಕಟ್ಟಡದ ಕಿಟಕಿ ಗಾಜುಗಳು ಪುಡಿಪುಡಿ­ಯಾಗಿದ್ದು, ಕಚೇರಿಯಲ್ಲಿದ್ದ ಟೇಬಲ್‌, ಕುರ್ಚಿ, ಕಂಪ್ಯೂಟರ್‌ಗಳಿಗೆ ಹಾನಿಯಾಗಿದೆ. ಕಚೇರಿ ಎದುರು ನಿಲ್ಲಿಸಿದ್ದ ವಾಹನಗಳ ಗಾಜುಗಳನ್ನು ಸಹ ಪುಡಿ ಮಾಡಲಾಗಿದೆ. ಹತ್ತಿ ಬೀಜದ ಪ್ಯಾಕೆಟ್‌ಗಳಿಗೆ  ಹಾಗೂ ಪಿಠೋಪಕರಣಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ.ಬೆಳೆ ಹಾನಿಗೆ ಹೆಕ್ಟೇರ್‌ಗೆ ರೂ. 6,000 ದಂತೆ ಸರ್ಕಾರ ಪರಿಹಾರ ನೀಡಿದೆ. ಹೆಚ್ಚಿನ ಪರಿಹಾರವನ್ನು ಕಂಪೆನಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಇಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕಂಪೆನಿ ಉನ್ನತಾಧಿಕಾರಿಗಳು ಸ್ಥಳಕ್ಕೆ ಬಂದಾಗ, ಸೂಕ್ತ ಪರಿಹಾರ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದಾಗ, ಉನ್ನತಾಧಿ­ಕಾ­ರಿಗಳನ್ನು ಕರೆಸಲು ಸಾಧ್ಯವಿಲ್ಲ ಎಂದು ಅಲ್ಲಿದ್ದ ಕಂಪೆನಿಯ ಅಧಿಕಾರಿಗಳು ಹೇಳಿದರು. ಆಗ ಅಧಿಕಾರಿಗಳ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.ಈ ಸಂದರ್ಭದಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಕೇಂದ್ರದೊಳಗೆ ನುಗ್ಗಿ ಕಲ್ಲು ತೂರಿ, ಧ್ವಂಸ ಮಾಡಿದರು. ಕಾಗದಪತ್ರಗಳಿಗೆ ಮತ್ತು ಕುರ್ಚಿ– ಟೇಬಲ್‌ಗಳಿಗೆ, ಬೀಜದ ಪ್ಯಾಕೆಟ್‌ಗಳಿಗೆ ಬೆಂಕಿ ಹಚ್ಚಿದರು. ಕೇಂದ್ರದ ನಾಮಫಲಕ ಕಿತ್ತು ಹಾಕಿ, ಭದ್ರತಾ ಸಿಬ್ಬಂದಿ ಇರುವ ಸ್ಥಳ, ಲೆಕ್ಕಪತ್ರ ವಿಭಾಗ ಮತ್ತು ಗುಣಮಟ್ಟ ನಿಯಂತ್ರಣ ಕೊಠಡಿಗಳಿಗೆ ನುಗ್ಗಿ ಹಾನಿ ಮಾಡಿ, ಕಾಂಪೌಂಡ್ ಒಡೆದುಹಾಕಿದರು.ರೈತರ ಆರೋಪ: ‘ಐದಾರು ತಿಂಗಳಿಂದ ಪರಿಹಾರಕ್ಕಾಗಿ ಹೋರಾಟ ಮಾಡುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ, ಕೃಷಿ ಇಲಾಖೆ ಅಧಿಕಾರಿಗಳು ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ, ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ಜೊತೆಗೆ ಚರ್ಚೆಯಾಗಿದೆ, ಆದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ’ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಆರೋಪಿಸಿದರು.‘ಸರ್ಕಾರ ಕೂಡಲೇ ಕಂಪೆನಿಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ಕೊಡಿಸಬೇಕು ಮತ್ತು ಕುಲಾಂತರಿ ತಳಿ ಬೀಜಗಳನ್ನು ಉತ್ಪಾದನೆ ಮಾಡುವ ಮಾನ್ಸಾಂಟೊ ಕಂಪೆನಿಯ ಪರವಾನಗಿ ರದ್ದುಪಡಿಸ­ಬೇಕು ಎಂದು ಅವರು ಒತ್ತಾಯಿಸಿದರು.

ಬೆಳಗಾವಿ, ಯರಗಟ್ಟಿ, ಜಮಖಂಡಿ, ಹಾವೇರಿ, ಹಾನಗಲ್‌, ಶಿಕಾರಿಪುರ, ಶಿರಾಳಕೊಪ್ಪ, ಹೊನ್ನಾಳಿ, ಚಿತ್ರದುರ್ಗ, ಶಿವಮೊಗ್ಗ, ಕೋಲಾರ, ಹರಿಹರ, ದಾವಣಗೆರೆ, ಬಳ್ಳಾರಿ, ಹೊಸಪೇಟೆ, ಹರಪನಹಳ್ಳಿ, ಹಿರೇಕೆರೂರು, ಕೊಟ್ಟೂರು ಮುಂತಾದ ಕಡೆಗಳಿಂದ ಬಂದಿದ್ದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.