ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾವಾದ ಪಠ್ಯಕ್ರಮ ಸೇರಬೇಕು

ವಾರದ ಸಂದರ್ಶನ: ಡಾ. ಪ್ರೀತಿ ಶುಭಚಂದ್ರ ನಿರ್ದೇಶಕಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ
Last Updated 28 ಮೇ 2016, 11:54 IST
ಅಕ್ಷರ ಗಾತ್ರ

ಮೈಸೂರು ವಿಶ್ವವಿದ್ಯಾಲಯವು ಈಗ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಅಂತೆಯೇ, ಮೈಸೂರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿ ನೆಲೆಯನ್ನು ಕಲ್ಪಿಸಿಕೊಟ್ಟ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಬರುವ ಡಿಸೆಂಬರ್‌ 8ಕ್ಕೆ 50 ವರ್ಷ ತುಂಬುತ್ತಿದೆ. 1966ರಲ್ಲಿ ಸ್ಥಾಪನೆಗೊಂಡು ಈವರೆಗೆ ಬೋಧನೆ, ಸಂಶೋಧನೆ, ಸಂಪಾದನೆ, ಅನುವಾದ ಸೇರಿದಂತೆ ಬಹುವಿಷಯಗಳಲ್ಲಿ ಶೈಕ್ಷಣಿಕ ಕಾರ್ಯವನ್ನು ಮಾಡಿರುವ ಸಂಸ್ಥೆಗೆ ಪ್ರಥಮ ಬಾರಿಗೆ ಮಹಿಳೆಯೊಬ್ಬರು ನಾಯಕತ್ವ ವಹಿಸಿಕೊಂಡಿದ್ದಾರೆ.

ಡಾ. ಪ್ರೀತಿ ಶುಭಚಂದ್ರ ಅವರು ನಿರ್ದೇಶಕಿಯಾಗಿ ನೇಮಕಗೊಂಡಿದ್ದಾರೆ. ಎರಡು ವರ್ಷಗಳ ಅವಧಿಯ ನಾಯಕತ್ವದಲ್ಲಿ ಅವರು ಏನೆಲ್ಲ ಸಾಧನೆಯ ಕನಸು ಕಂಡಿದ್ದಾರೆ, ಮಹಿಳೆಯೊಬ್ಬರು ನಾಯಕತ್ವ ವಹಿಸಿಕೊಂಡರೆ ಒದಗುವ ಸವಾಲುಗಳನ್ನು ಹೇಗೆ ಎದುರಿಸಲಿದ್ದಾರೆ, ಸಂಸ್ಥೆಯನ್ನು ಗಟ್ಟಿನೆಲೆಯಲ್ಲಿ ಮುಂದುವರಿಸಿಕೊಂಡು ಹೋಗುವಲ್ಲಿ ಅವರ ಚಿಂತನೆಗಳೇನು ಎಂಬುದನ್ನು ಅವರು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡಿದ್ದಾರೆ:

* ಮೈಸೂರು ವಿಶ್ವವಿದ್ಯಾಲಯ ಆರಂಭವಾಗಿ ಒಂದು ಶತಮಾನವಾಯಿತು. ಕನ್ನಡ ವಿಭಾಗ ಅಥವಾ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಲು ಮಹಿಳೆಯೊಬ್ಬರಿಗೆ ಇಷ್ಟು ವರ್ಷಗಳೇ ಬೇಕಾಯಿತಲ್ಲ. ಕಾರಣಗಳೇನಿರಬಹುದು?
ವೈಯಕ್ತಿಕವಾಗಿ ಅಲ್ಲದೆ ಹೋದರೂ, ಒಟ್ಟು ಮಹಿಳಾ ಸಮುದಾಯದ ಸಾಮಾಜಿಕ ಅವಕಾಶಗಳು, ಆಯ್ಕೆ ನಿರ್ಧಾರ ಪ್ರಕ್ರಿಯೆ, ಸಹಭಾಗಿತ್ವ, ಪ್ರಧಾನ ವಾಹಿನಿಗೆ ಮಹಿಳೆಯರ ಸೇರ್ಪಡೆ– ಇವುಗಳಿಗೆ ಸಂಬಂಧಿಸಿದ ಹಾಗೆ ನಾನು ನಿರ್ದೇಶಕಿಯಾಗಿರುವುದು ಒಂದು ಚಾರಿತ್ರಿಕ ಘಟನೆ. ಮಹಿಳೆಯೊಬ್ಬರು ನಿರ್ದೇಶಕರಾಗಲು ಸಂಸ್ಥೆಯು 50 ವರ್ಷ ಕಾಯಬೇಕಾಯಿತು. ಆಡಳಿತಾತ್ಮಕ, ಶೈಕ್ಷಣಿಕ ಕಾರ್ಯಗಳಲ್ಲಿ ನೇರವಾಗಿ ಮಹಿಳೆಯರು ಪಾಲ್ಗೊಂಡಿದ್ದು ಈವರೆಗೆ ಕಡಿಮೆ. ಈ ಹಿಂದೆ ಹಸ್ತಪ್ರತಿ ವಿಭಾಗದಲ್ಲಿ ವೈ.ಸಿ.ಭಾನುಮತಿ ಅವರಿದ್ದರು.

ಟಿ.ಎನ್‌.ನಾಗರತ್ನ, ಇಂದೂಬಾಯಿ ಅವರಂತಹ ಸಂಶೋಧಕಿಯರಿದ್ದರು. ಅಧ್ಯಾಪಕ ವೃಂದದಲ್ಲಿ ಡಿ.ವಿಜಯಾ (ವಿಜಯಾ ದಬ್ಬೆ), ಕಮಲಾದೇವಿ (ಮಲಯಾಳಂ ಅಧ್ಯಾಪಕಿ) ಅವರಿದ್ದರು. ಅನಿವಾರ್ಯ ಕಾರಣಗಳಿಂದ ಅವರು ಸ್ವಯಂನಿವೃತ್ತಿ ತೆಗೆದುಕೊಂಡರು. ವಿಜಯಾ ಅವರು ಇದ್ದಿದ್ದರೆ ಬಹುಶಃ  ನನಗಿಂತಲೂ ಮೊದಲೇ ನಿರ್ದೇಶಕಿ ಆಗಿರುತ್ತಿದ್ದರು. ನನಗಿಂತಲೂ ಹಿರಿಯರು ಇಲ್ಲಿ ಇರದಿದ್ದ ಕಾರಣ ನನಗೆ ನಿರ್ದೇಶಕಿ ಸ್ಥಾನ ಸಿಕ್ಕಿತಷ್ಟೆ. ಇದೊಂದು ರೀತಿ ಯೋಗಾಯೋಗ.

* ನೀವೊಬ್ಬ ಚಿಂತಕಿ. ಪುರುಷ ಪ್ರಾಧಾನ್ಯದ ನಡುವೆ ಈಗ ನಿರ್ದೇಶಕಿಯಾಗಿರುವ ನಿಮಗೆ ಸವಾಲುಗಳೇನು?
ಒಟ್ಟು ಸಮಾಜದಲ್ಲಿ ಪರಸ್ಪರರ ಹಕ್ಕುಗಳು, ಮಾನವ ಹಕ್ಕುಗಳು ಹಾಗೂ ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ಅರಿವು ಹೆಚ್ಚಾಗಿದೆ. ಮಹಿಳೆಯರ ಬದುಕಿನಲ್ಲಿ  ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಈ ಹಿಂದೆ ಇಲ್ಲದ ಶೈಕ್ಷಣಿಕ, ಸಾಮಾಜಿಕ ಅವಕಾಶಗಳು ಅವರಿಗೆ ದಕ್ಕುತ್ತಾ ಬಂದಿವೆ. ತನ್ನ ಸಮಸ್ಯೆಗಳನ್ನು ಗುರುತಿಸುವ ಸಾಮರ್ಥ್ಯ ಮಹಿಳೆಗೆ ಈಗ ಬಂದಿದೆ. ಹಿಂದಿನ ತಲೆಮಾರುಗಳ ಮಹಿಳೆಯರು ಸಮಸ್ಯೆಯನ್ನು ಸಮಸ್ಯೆಯಾಗಿ ನೋಡದೆ ಅದನ್ನು ಮಹಿಳೆಯ ಆದರ್ಶದ ಸ್ಥಿತಿ ಎಂದು ಹೆಮ್ಮೆ ಪಡುತ್ತಿದ್ದರು. ಈಗ ಜಾಗೃತಿ ಉಂಟಾಗಿರುವುದೇ ಮುಖ್ಯವಾದುದು. ಮಹಿಳೆಯು ಪುರುಷ ಕಟ್ಟುಪಾಡಿನ ಒಳಗೇ ಇದ್ದಾಗ ಅವಳನ್ನು ಸಮಾಜ ಸ್ವೀಕರಿಸುತ್ತದೆ. ಆದರೆ, ಉಲ್ಲಂಘನೆಯಾದಾಗ ಸ್ವೀಕರಿಸುವುದಿಲ್ಲ. ಬಹಿಷ್ಕಾರ, ಶಿಕ್ಷೆ, ಪರೀಕ್ಷೆಯಂತಹವುಗಳ ಸರಣಿ ಆರಂಭವಾಗಿಬಿಡುತ್ತದೆ.

ಆದರೆ, ಆಧುನಿಕ ಸಂದರ್ಭದಲ್ಲಿ ತಾನು ಎದುರಿಸುವ ಸಮಸ್ಯೆಗಳನ್ನು ಸಮಸ್ಯೆಗಳಾಗಿ ಗುರುತಿಸುವಂತಹ ಜಾಗೃತಿಯನ್ನು ಈಗ ಮಹಿಳೆ ಹೊಂದಿದ್ದಾಳೆ. ಆದರೆ, ಈ ಜಾಗೃತಿಯ ಮಟ್ಟ ಇನ್ನೂ ಸಾಲದು. ಪುರುಷ ಸಮುದಾಯವು ಮಹಿಳೆಯರಲ್ಲಿ ಬಂದಿರುವ ಎಚ್ಚರವನ್ನು, ಬದಲಾವಣೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾ ಇಲ್ಲ. ಏಕೆಂದರೆ, ಪುರುಷರೂ ಈ ರೀತಿಯ ಸಮಸ್ಯೆಯಲ್ಲೇ ಇದ್ದಾರೆ. ಅಸಮಾನತೆ ಎನ್ನುವುದು ಪುರುಷರ ವ್ಯಕ್ತಿತ್ವವನ್ನೂ ಹಾಳುಮಾಡುತ್ತದೆ.

‘ಗಂಡು ಅಹಂಕಾರ’ ಎನ್ನುವುದು ಪುರುಷನನ್ನು ಪೂರ್ಣವಾಗಿ ಅರಳಲು ಬಿಡುತ್ತಿಲ್ಲ. ಅವರನ್ನೇ ಅದು ಶೋಷಣೆ ಮಾಡುತ್ತಿದೆ. ಅವರನ್ನು ಕ್ರೂರಿಗಳನ್ನಾಗಿ, ಅತ್ಯಾಚಾರಿಗಳನ್ನಾಗಿ ಮಾಡುತ್ತಿದೆ. ಮಹಿಳೆಯರು ತಮ್ಮನ್ನು ಕಾಡುವ ಕೀಳರಿಮೆಯಿಂದ ಆಚೆ ಬಂದಿದ್ದಾರೆ. ಆದರೆ, ಪುರುಷರು ಇದರಿಂದ ಬಿಡಿಸಿಕೊಳ್ಳುವುದು ಕಷ್ಟವಾಗಿದೆ. ಸೌಲಭ್ಯ ಸಂಪನ್ನ ಸ್ಥಿತಿಯಲ್ಲಿರುವ ಪುರುಷರು ಮುಕ್ತ ಮನಸ್ಸನ್ನು ಹೊಂದುವುದು ತುಂಬಾ ಕಷ್ಟ. ಇದೇ ಮಹಿಳಾ ಆಂದೋಲನಕ್ಕಿರುವ ದೊಡ್ಡ ಸವಾಲು. ಇದು ಕೇವಲ ಮಹಿಳೆಯರಲ್ಲ, ಪುರುಷರ ಪ್ರಯತ್ನವೂ ಆಗಬೇಕಿದೆ. ಪುರುಷರ ಜಾಗೃತಿಯೂ ದೊಡ್ಡ ಸವಾಲೇ. ಇದು ಸ್ಪರ್ಧೆ– ಪ್ರತಿಸ್ಪರ್ಧೆಯ ರೀತಿ ಆಗಬಾರದು.

ನಾನು ಪುರುಷರನ್ನೆಲ್ಲಾ ಹಿಂದಿಕ್ಕಿ ನಿರ್ದೇಶಕಿಯಾಗಿದ್ದೇನೆ ಎಂದು ಹೇಳಿಕೊಳ್ಳುವುದು ನನ್ನ ವ್ಯಕ್ತಿತ್ವ ನಾಶದ ಸೂಚಕ. ಸಂಸ್ಥೆಯ ಒಳಗೂ ಈ ರೀತಿಯ ಸವಾಲುಗಳು ಇರುತ್ತವೆ. ಅನೇಕ ಸಂದರ್ಭಗಳಲ್ಲಿ ಮಹಿಳೆಯರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹಳಗನ್ನಡದಲ್ಲಿ ಹೇಳುವಂತೆ ‘ಕೆಳಗಿವಿಗೆ ಹೇಳುವಂತೆ’ ಎಂಬಂತೆ ಮಾಡುತ್ತಾರೆ. ಲಕ್ಷ್ಯ ಕೊಡದೆ ಇರುವುದು, ನಿರ್ಲಕ್ಷ್ಯ ಮಾಡುವುದು ಇದ್ದೇ ಇರುತ್ತದೆ. ಮುಕ್ತವಾಗಿ ಸ್ವೀಕರಿಸದೇ ಇರುವುದು ಸೂಕ್ಷ್ಮಾತಿ ಸೂಕ್ಷ್ಮವಾಗಿ ನಡೆಯುತ್ತಾ ಇರುತ್ತದೆ. ಮಹಿಳೆಗೆ ತನ್ನನ್ನು ತಾನು ಪ್ರತಿನಿಧಿಸಿಕೊಳ್ಳುವಲ್ಲಿ ಬಹುದೊಡ್ಡ ಪ್ರತಿಬಂಧಗಳಿವೆ.

ಅಭಿವ್ಯಕ್ತಿ, ಮಾತು, ಕೃತಿಗಳು ಗೌಣ ಎಂದು ತಿರಸ್ಕೃತಗೊಳ್ಳುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಬೇಜಾರಾಗುವುದು ನಿಜ. ಆದರೆ ಅದನ್ನು ದಾಟಿ, ಏಕೆ ಹೀಗಾಗುತ್ತದೆ ಎಂಬ ವಿಮರ್ಶೆಯನ್ನು ಮಾಡಿಕೊಳ್ಳುವುದು ಅಗತ್ಯ. ಸ್ತ್ರೀವಾದಿಯಾಗಲು ಪುಸ್ತಕ ಓದಬೇಕಿಲ್ಲ. ಸಮಾಜದ ಜತೆಗೆ ಬೆರೆತರೆ ಸಾಕು. ಅನ್ಯಾಯದ ಗ್ರಹಿಕೆ, ಅದಕ್ಕೆ ಕಾರಣಗಳ ಶೋಧ ಇರಬೇಕಷ್ಟೆ. ಆಗ ಸನ್ನಿವೇಶದ ಮೇಲೆ ನಿಯಂತ್ರಣ ಬರುತ್ತದೆ. ಮಾನಸಿಕ ಸಮತೋಲನ ಕಳೆದುಕೊಳ್ಳಬಾರದು. ನೋವಿನಲ್ಲೇ ಮುಳುಗಿಹೋಗುವುದು ಮೂರ್ಖತನ, ನಮಗೆ ನಾವು ಮಾಡಿಕೊಳ್ಳುವ ಅನ್ಯಾಯವಷ್ಟೆ.

* ನಿರ್ದೇಶಕಿಯಾಗಿ ನಿಮ್ಮ ಮುಂದೆ ಇರುವ ಕನಸುಗಳೇನು?
ಕಸ ಗುಡಿಸುವ ತಳಮಟ್ಟದವರಿಂದ ಹಿಡಿದು ಮೇಲ್ಮಟ್ಟದವರ ವರೆಗೆ ಎಲ್ಲರೂ ಸಂತೋಷದಿಂದ ಇರಬೇಕು ಎನ್ನುವುದು ನನ್ನ ಅಪೇಕ್ಷೆ. ನನ್ನ ಅವಧಿಯಲ್ಲಿ ಸಂತೋಷದಿಂದ ಕೆಲಸಗಳು ನಡೆಯಬೇಕು. ಅರಿಸ್ಟಾಟಲ್‌ ಹೇಳುವಂತೆ, ‘ಮನುಷ್ಯ ಸಂತೋಷದಿಂದ ಇರುವ ಏಕೈಕ ಕಾರಣಕ್ಕೆ ಹುಟ್ಟಿದ್ದಾನೆ’ ಎಂಬ ಮಾತು ತುಂಬಾ ಮುಖ್ಯ. ನಾವು ಮೊದಲು ಮನುಷ್ಯರು, ಆಮೇಲೆ ಹುದ್ದೆ ಇತ್ಯಾದಿ. ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಗೌರವ ಮುಖ್ಯ. ಇದೊಂದು ದೊಡ್ಡ ಕುಟುಂಬ. ಇಲ್ಲಿನ ಸದಸ್ಯರು ಅವರವರ ಪಾಲಿನ ಕೆಲಸವನ್ನು ನಿಷ್ಠೆಯಿಂದ, ಸಮರ್ಥವಾಗಿ ಮಾಡಿಕೊಂಡು ಹೋಗುತ್ತಾರೆ. ಒಂದು ದೊಡ್ಡ ಯಂತ್ರದಲ್ಲಿ ಸಣ್ಣ ಸ್ಕ್ರೂ ಉದುರಿಹೋದರೆ ಇಡೀ ಯಂತ್ರವೇ ನಿಂತು ಹೋಗುತ್ತದೆ. ಅರೆಕೊರೆಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡು ಸಂತೋಷವನ್ನು ಅನುಭವಿಸಬೇಕು.

ಇಲ್ಲಿ 150 ಸಂಶೋಧನಾ ವಿದ್ಯಾರ್ಥಿಗಳಿದ್ದಾರೆ, ನಾಲ್ಕು ಎಂ.ಎ. ಕೋರ್ಸ್‌ಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚು. ಸಿಬ್ಬಂದಿಯಾದ ನಮ್ಮ ನಡುವೆ ಹೊಂದಾಣಿಕೆ ಚೆನ್ನಾಗಿಲ್ಲದೇ ಇದ್ದಲ್ಲಿ, ಪರಿಣಾಮವನ್ನು ವಿದ್ಯಾರ್ಥಿಗಳು ಎದುರಿಸಬೇಕಾಗುತ್ತದೆ. ಅಲ್ಲದೆ, ನಮ್ಮನ್ನು ವಿದ್ಯಾರ್ಥಿಗಳು ಅನುಕರಿಸುವ ಅಪಾಯವೂ ಇರುತ್ತದೆ. ನಮ್ಮ ಗೌರವವನ್ನು ನಾವು ಉಳಿಸಿಕೊಳ್ಳಬೇಕು; ಮಾದರಿಯಾಗಬೇಕು.
ಅಧ್ಯಯನ ಸಂಸ್ಥೆಯ ಯೋಜನೆಗಳು ಒಬ್ಬಿಬ್ಬರಿಂದ ನಡೆಯುವಂಥವಲ್ಲ. ಶ್ರೇಷ್ಠರು ದುಡಿದಿದ್ದಾರೆ. ತಲೆಮಾರುಗಳೇ ಈ ಯೋಜನೆಗಳಿಗಾಗಿ ಶ್ರಮಿಸಿವೆ. ದೀರ್ಘವಾದ ಪರಂಪರೆ ಇದೆ. ಇದಕ್ಕೆ ಭಂಗ ತರದೆ ಕೆಲಸ ಮುಂದುವರಿಸಿಕೊಂಡು ಹೋಗಬೇಕು. ಈಗ ಕೂಡ ಹಿಂದಿನಂತಹ ಉತ್ಸಾಹ, ಶ್ರದ್ಧೆಯಿಂದ ಕೆಲಸಗಳು ನಡೆಯುತ್ತಿವೆ. ಅನೇಕ ಹಂತದಲ್ಲಿ ವಿವಿಧ ಯೋಜನೆಗಳಿವೆ. ಕಾಲ ಕಾಲಕ್ಕೆ ಪೂರ್ಣಗೊಳ್ಳುತ್ತವೆ. ಅನೇಕ ಅರೆಕೊರೆಗಳು ಇವೆ.

* ಸಂಸ್ಥೆಯಲ್ಲಿ ಈಗ ಶಾಸ್ತ್ರ ವಿಷಯಗಳ ಹಾಗೂ ಹಳಗನ್ನಡ ಬೋಧನೆಯ ಬಗ್ಗೆ ಪರಿಣತರಿಲ್ಲ ಎಂಬ ಮಾತಿದೆ. ಈ ಬಗ್ಗೆ ನೀವೇನು ಹೇಳುವಿರಿ?
ಈ ರೀತಿಯ ಆರೋಪಗಳೆಲ್ಲ ನಿರಾಧಾರವಾದವು. ಎಲ್‌.ಬಸವರಾಜು, ಟಿ.ವಿ.ವೆಂಕಟಾಚಲ ಶಾಸ್ತ್ರಿ, ತಾರಾನಾಥ್‌ ಅವರಂಥ ಶ್ರೇಷ್ಠರು ಇಲ್ಲಿದ್ದರು. ಅವರೆಲ್ಲಾ ಈಗ ನಿವೃತ್ತರು. ಈಗಿನ ಹೊಸ ಪೀಳಿಗೆಯ ಅಧ್ಯಾಪಕರೂ ಸೂಕ್ತವಾಗಿಯೇ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಅಲ್ಲದೆ ಈಗ ‘ಸಮೂಹ ಮಾಧ್ಯಮ’ ಎಂಬ ಹೊಸ ವಿಷಯ ಪೂರ್ಣಪ್ರಮಾಣದಲ್ಲಿ ಸೇರ್ಪಡೆಗೊಂಡಿದೆ. ಹಳಗನ್ನಡದಿಂದ ಆಧುನಿಕ ಕನ್ನಡದವರೆಗೂ ತಜ್ಞರ ತಂಡ ನಮ್ಮಲ್ಲಿದೆ. ಹಿಂದಿನ ಪಂಡಿತರೆಲ್ಲ ಒಂದೇ ದಿನಕ್ಕೆ ಪಂಡಿತರಾದರೇ? ಹಾಗೆಯೇ, ಈಗಿನ ಅಧ್ಯಾಪಕರಿಗೆ ದೀರ್ಘಾವಧಿಯ ಸೇವಾವಧಿ ಇದೆ. ನಿತ್ಯ ಕಲಿಯುತ್ತಾ ಹೋಗುತ್ತಾರೆ. ಯಾರನ್ನೂ ಯಾರಿಗೂ ಹೋಲಿಸಲೇಬಾರದು. ಅಲ್ಲದೆ, ಈಗಿನ ಅಧ್ಯಾಪಕರು ಹಳಗನ್ನಡಕ್ಕೇ ಸೀಮಿತರಾಗಿಲ್ಲ. ಅನೇಕ ಹೊಸ ಶಾಸ್ತ್ರಗಳಲ್ಲೂ ಪರಿಣತಿ ಪಡೆಯುತ್ತಿದ್ದಾರೆ.

* ಸಾಹಿತ್ಯ ಇಂದು ಹಲವು ಶಿಸ್ತುಗಳ ಅಧ್ಯಯನಗಳನ್ನು ಒಳಗೊಂಡು ಶ್ರೀಮಂತವಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾಗುವಂಥ ಪಠ್ಯಕ್ರಮ ರೂಪಿಸಲು ಸಾಧ್ಯವೇ?
ನಮ್ಮ ಪಠ್ಯಕ್ರಮದಲ್ಲಿ ಏನಾದರೂ ಬದಲಾವಣೆಗಳನ್ನು ರೂಪಿಸಬೇಕಾದರೆ, ಹೊಸತನ್ನು ಪರಿಚಯಿಸಬೇಕಾದರೆ, ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನಮ್ಮ ಕೈಯಲ್ಲಿ ಇಲ್ಲದಿದ್ದಾಗ ಸಾಧಿಸುವುದು ಕಷ್ಟವಾಗಿಬಿಡುತ್ತದೆ. ಬೇರೆ ಬೇರೆ ಆಡಳಿತಾತ್ಮಕ ತೊಡಕುಗಳು ಎದುರಾಗುತ್ತವೆ. ಈಗ ನಾನು ಅಧಿಕಾರಕ್ಕೆ ಬಂದಿರುವ ಕಾರಣ, ಈ ಬದಲಾವಣೆಗಳನ್ನು ತರಲು ಸುಲಭವಾಗುತ್ತದೆ. ಈ ಹಿಂದೆ ಮಹಿಳಾ ವಿಮರ್ಶೆಯನ್ನು ಪಠ್ಯಕ್ರಮಕ್ಕೆ ಸೇರಿಸಲು ನಾನು ಮೂರು ವರ್ಷ ತಿಣುಕಾಡಿದೆ. ಆದರೆ, ಅನೇಕ ಆಡಳಿತಾತ್ಮಕ ಕಾರಣಗಳಿಂದ ಆಗ ಸಾಧ್ಯವಾಗಲಿಲ್ಲ. ಈಗ ಅವಕಾಶ ಸಿಕ್ಕಿದೆ. ಮಹಿಳಾವಾದ ಪಠ್ಯಕ್ರಮಕ್ಕೆ ಸೇರಬೇಕು. ಹಳೆಯ ಪಠ್ಯಕ್ರಮ ಇಟ್ಟುಕೊಂಡು ನಾವು ಮುಂದುವರಿಯಬಾರದು.

ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಕಾರ್ಯದ ಆಸಕ್ತಿ ಈಗ ಹೆಚ್ಚೇ ಇದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೃತಿಗಳ ಪ್ರಕಟಣೆ ಆಗುತ್ತಿದೆ. ಕೃತಿಗಳು ಸತ್ವ ಹೊಂದಿವೆಯೋ ಇಲ್ಲವೋ ಬೇರೆಯ ವಿಚಾರ. ಸತ್ವವನ್ನು ಕಾಲ ನಿರ್ಧರಿಸುತ್ತದೆ. ಆದರೆ, ಕೃತಿಗಳ ಪ್ರಕಟಣೆ ದೊಡ್ಡ ಸಂಖ್ಯೆಯಲ್ಲಿ ಆಗಬೇಕು. ಆಗ ಒಳ್ಳೆಯವೂ ಬರುತ್ತವೆ. ಈ ರೀತಿ ಶೈಕ್ಷಣಿಕವಾಗಿ ಪೂರಕವಾಗುವ ಅಂಶಗಳನ್ನು ಒಳಗೊಳ್ಳುವಂಥ ಪಠ್ಯಕ್ರಮವೂ ನಮ್ಮಲ್ಲಿದೆ. ಜತೆಗೆ, ಪಠ್ಯಕ್ರಮದಲ್ಲಿ ಆಧುನಿಕ ಅಂಶಗಳನ್ನು ಅಳವಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದೇವೆ. ಅನೇಕರು ಐಎಎಸ್, ಕೆಎಎಸ್‌ ಮಾದರಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.

* ನಮ್ಮ ಸಮಾಜದ ಎರಡು ಮುಖ್ಯ ಶೋಷಿತ ಧ್ವನಿಗಳಾದ ಸ್ತ್ರೀ ಮತ್ತು ದಲಿತ ಸಂವೇದನೆಗಳನ್ನು ವಿದ್ಯಾರ್ಥಿಗಳು ಅರಿಯಲು ಜರೂರಾಗಿ ಮಾಡಬೇಕಾದ ಕ್ರಿಯೆಗಳೇನು?
ಆಸಕ್ತಿಯ ಸಂಗತಿಯೆಂದರೆ, ಸಂಸ್ಥೆಯಲ್ಲಿ ಈವರೆಗೂ ಮಹಿಳಾ ದಿನಾಚರಣೆಯೇ ನಡೆದಿರಲಿಲ್ಲ. ಅದನ್ನು ನಾವೀಗ ಆರಂಭಿಸಿದ್ದೇವೆ. ವಿಜಯಾ ದಬ್ಬೆ ಅವರು ಇಲ್ಲಿದ್ದಾಗ, ಸಮತಾ ವೇದಿಕೆಯ ಸಹಯೋಗದಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅವರ ನಂತರ ನಡೆದಿರಲಿಲ್ಲ. ಈಗ ಅದಕ್ಕೊಂದು ಚಾಲನೆ ಸಿಕ್ಕಿದೆ. ನಮ್ಮ ವಿಭಾಗದ ವತಿಯಿಂದ ಈಗ ಮಹಿಳಾ ಸಾಹಿತ್ಯ ಸಮ್ಮೇಳನವನ್ನೂ ಮಾಡಿದ್ದೇವೆ. ಅಂತೆಯೇ, ಅಂಬೇಡ್ಕರ್ ಜಯಂತಿಯಂತಹ ಕಾರ್ಯಕ್ರಮಗಳನ್ನು ರಚನಾತ್ಮಕವಾಗಿ, ಸಾಹಿತ್ಯದ ಒರೆಹಚ್ಚಿ ನಡೆಸುತ್ತಿದ್ದೇವೆ. ಇಂತಹ ಅನೇಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಹೆಚ್ಚಿದರೆ ಅಷ್ಟೇ ಸಾಕು.

* ಸಂಸ್ಥೆ ಸುವರ್ಣ ಮಹೋತ್ಸವದತ್ತ ಕಾಲಿಡುತ್ತಿದೆ. ಯೋಜನೆಗಳೇನಾದರೂ ಇವೆಯೇ?
ಸುವರ್ಣ ಮಹೋತ್ಸವದ ಯೋಜನೆಗಳು ಬಹಳಷ್ಟಿವೆ. ರಾಜ್ಯ ಸರ್ಕಾರವೇ ಈ ಕಾರ್ಯಕ್ರಮವನ್ನು ಆಚರಿಸಬೇಕು. ನಮ್ಮ ಸಂಸ್ಥೆ ಇನ್ನೂ ವಿಸ್ತರಣೆ ಆಗಬೇಕು. ನಮ್ಮಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ಹಾಗಾಗಿ, ಮತ್ತಷ್ಟು ಕೊಠಡಿಗಳನ್ನು ನೀಡುವಂತೆ ಪ್ರಸ್ತಾವ ಸಲ್ಲಿಸಲಿದ್ದೇವೆ. ಅಂತೆಯೇ, ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆ ಅಂಗವಾಗಿ, ನೊಬೆಲ್‌ ಪ್ರಶಸ್ತಿ ಪುರಸ್ಕೃತರಿಂದ ಏರ್ಪಡಿಸಿದ್ದ ಉಪನ್ಯಾಸ ಮಾಲೆ ಮಾದರಿಯಲ್ಲಿ ಅಕಾಡೆಮಿ, ಜ್ಞಾನಪೀಠ, ಪಂಪ, ನೃಪತುಂಗ ಪ್ರಶಸ್ತಿ ಪಡೆದ ಸಾಹಿತಿಗಳ ಉಪನ್ಯಾಸ ಮಾಲೆಯನ್ನೂ ನಡೆಸುವ ಉದ್ದೇಶವಿದೆ.

ಅಲ್ಲದೆ, ಹಿರಿಯ ವಿದ್ಯಾರ್ಥಿಗಳ ಸಂಘವೇ ನಮ್ಮಲ್ಲಿಲ್ಲ. ಅದನ್ನು ಸ್ಥಾಪಿಸುವ ಉದ್ದೇಶವಿದೆ. ಅಧ್ಯಯನ ಸಂಸ್ಥೆಯ 50 ವರ್ಷಗಳ ಇತಿಹಾಸ ಕುರಿತ ಒಂದು ದೊಡ್ಡ ಗ್ರಂಥವನ್ನು ಸಿದ್ಧಪಡಿಸಿ ಪ್ರಕಟಿಸುವ ಯೋಜನೆ ಇದೆ. ಸಂಸ್ಥೆಯ ಇತಿಹಾಸವನ್ನು ದಾಖಲಿಸುವ ಸಾಕ್ಷ್ಯಚಿತ್ರ ನಿರ್ಮಿಸಲಿದ್ದೇವೆ. ಅಲ್ಲದೆ ಯುಜಿಸಿ ಯಿಂದ ಹೆಚ್ಚಿನ ಅನುದಾನವೂ ಬೇಕು. ಅದಕ್ಕೆ ಬೇಕಾದ ಯೋಜನೆಗಳನ್ನೂ ರೂಪಿಸುತ್ತಿದ್ದೇವೆ. ನಮ್ಮಲ್ಲಿರುವ ‘ಸಮೂಹ ಮಾಧ್ಯಮ’ ವಿಷಯಕ್ಕೆ ಪೂರಕವಾಗಿ ಸ್ಟುಡಿಯೊ ನಿರ್ಮಾಣವೂ ಚಿಂತನೆಯಲ್ಲಿದೆ.

* ಸಾಹಿತ್ಯ ಚರಿತ್ರೆ, ವಿಶ್ವಕೋಶ, ಎಪಿಗ್ರಾಫಿಯ ಕರ್ನಾಟಿಕದಂತಹ ಯೋಜನೆಗಳು ಕುಂಠಿತವಾಗಿವೆ. ಅವನ್ನು ಚುರುಕುಗೊಳಿಸಲು ನಿಮ್ಮ ಆಲೋಚನೆಗಳೇನು?
ಕೆಲಸಗಳು ನಡೆಯುತ್ತಿವೆ. ರೈಸ್‌ ಅವರು ‘ಎಪಿಗ್ರಾಫಿಯ ಕರ್ನಾಟಿಕ’ದ ನೇತೃತ್ವ ವಹಿಸಿಕೊಂಡಿದ್ದಾಗ ಪೂರ್ಣಪ್ರಮಾಣದಲ್ಲಿ ಕೆಲಸಗಳು ನಡೆಯುತ್ತಿದ್ದವು. ಆ ರೀತಿ ಈಗ ನಡೆಯುವುದು ಕಷ್ಟ. ಅವರೊಬ್ಬ ಅಧಿಕಾರಿಯಾಗಿದ್ದುಕೊಂಡು, ಅನೇಕ ಸಹಾಯಕರ ನೆರವಿನಿಂದ ಉತ್ತಮ ಕೆಲಸ ಮಾಡಿದರು. ಈಗ ನಾವು ಬಹುವಿಷಯಗಳನ್ನು ನಿಭಾಯಿಸುವ ಸವಾಲಿನ ನಡುವೆ, ‘ಎಪಿಗ್ರಾಫಿಯ ಕರ್ನಾಟಿಕ’ದ ಕೆಲಸವನ್ನು ಚೆನ್ನಾಗೇ ಮಾಡುತ್ತಿದ್ದೇವೆ. ಕಾಲಕಾಲಕ್ಕೆ ಸಂಪುಟಗಳು ಹೊರಬರುತ್ತಿವೆ. ಸಂಪುಟವೊಂದು ಹೊರಬರುವುದಕ್ಕೆ ಮುನ್ನ ಸಿದ್ಧತಾ ಕಾರ್ಯಗಳೂ ನಡೆಯುತ್ತಿರುತ್ತವೆ ಎನ್ನುವುದನ್ನು ಮರೆಯಬಾರದು ಅಲ್ಲವೇ.

ಕುವೆಂಪು ಅವರು ‘ರಾಮಾಯಣದರ್ಶನಂ’ ಕೃತಿಯನ್ನು ಒಂದೇ ವರ್ಷದಲ್ಲಿ ಬರೆದು ಮುಗಿಸಿಬಿಟ್ಟರೇ? ಹಾಗೆಂದು, ಅವರು ಏನೂ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗುತ್ತದೆಯೇ? ನಾವೂ ಸಂಶೋಧನೆ, ಅಧ್ಯಯನ ಮುಂತಾದ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದೇವೆ. ಕೃತಿಗಳು ಆಗಾಗ ಪ್ರಕಟಗೊಳ್ಳುತ್ತಿವೆ. ಈಚೆಗಷ್ಟೇ ಡಾ. ಅರವಿಂದ ಮಾಲಗತ್ತಿ ಅವರ ಸಂಪಾದಕತ್ವದ ‘ಸೀಮಾತೀತ ಸಾಹಿತ್ಯ ವಿಮರ್ಶೆ’ ಸಂಪುಟಗಳು ಬಿಡುಗಡೆಗೊಂಡವು. ಅಂತೆಯೇ ಇನ್ನೂ ಅನೇಕ ಕೃತಿಗಳು ಹೊರಬರುತ್ತಿವೆ. ಯಾವ ಕಾರ್ಯವೂ ನಿಷ್ಕ್ರಿಯವಾಗಿಲ್ಲ; ಎಲ್ಲವೂ ನಡೆಯುತ್ತಿವೆ. ತಾಂತ್ರಿಕ, ಆಡಳಿತಾತ್ಮಕ ಕಾರಣಗಳಿಂದ ಈ ಕೃತಿಗಳು ಹೊರಬರುವುದರಲ್ಲಿ ಹಿಂದು ಮುಂದು ಆಗಿರಬಹುದು. ಕೆಲಸವೇ ಆಗುತ್ತಿಲ್ಲ ಎಂಬ ಮಾತುಗಳನ್ನು ಕೇಳಿದಾಗ ಬೇಸರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT