ಗುರುವಾರ , ಫೆಬ್ರವರಿ 25, 2021
29 °C
ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ಸಬಿಹಾ ಭೂಮಿಗೌಡ ಅಭಿಮತ

ಮಹಿಳಾ ಆತ್ಮಕಥೆ ಕುಟುಂಬ ಕೇಂದ್ರಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ಆತ್ಮಕಥೆ ಕುಟುಂಬ ಕೇಂದ್ರಿತ

ಬೆಂಗಳೂರು: ‘ಪುರುಷರ ಆತ್ಮಕಥೆಗಳು ಸ್ವ–ಕೇಂದ್ರಿತ ಆಗಿದ್ದರೆ ಮಹಿಳಾ ಆತ್ಮಕಥೆಗಳು ಕುಟುಂಬ ಕೇಂದ್ರಿತ. ಅನುಭವ ಕಥನ ಮಹಿಳೆಯರ ವಿಶೇಷ ಗುಣ. ಅದು ಅವರ ವಿಶೇಷ ಶಕ್ತಿಯೂ ಹೌದು’ ಎಂದು ವಿಜಯಪುರದ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ಸಬಿಹಾ ಭೂಮಿಗೌಡ ವಿಶ್ಲೇಷಿಸಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ‘ಸ್ತ್ರೀವಾದಿ ತಾತ್ವಿಕತೆಯ ವಿಭಿನ್ನ ನೆಲೆಗಳು’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.‘ಅನುಭವ ಕಥನ ಶಕ್ತಿಶಾಲಿ ಮಾಧ್ಯಮ. ಭಾಷಣ ಅಥವಾ ಲೇಖನ ಒಂದು ಸಣ್ಣ ಗುಂಪನ್ನು ತಲುಪುತ್ತದೆ. ಆದರೆ, ಅನುಭವ ಕಥನ ನೇರವಾಗಿ ಓದುಗರನ್ನು ಮುಟ್ಟುತ್ತದೆ’ ಎಂದರು.‘ಮಹಿಳೆಯರನ್ನು ಒಂದು ಗುಂಪು ಆಗಲು ಸಮಾಜ ಯಾವತ್ತೂ ಬಿಟ್ಟಿಲ್ಲ. ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಅವರನ್ನು ಒಡೆಯುತ್ತಾ ಬಂದಿದ್ದೇವೆ. ನಾವು ಅಕ್ಕಪಕ್ಕ ಇದ್ದರೂ ನಮ್ಮ ಒಳಗೆ ಎಲ್ಲೆಗಳನ್ನು ಹಾಕಿಕೊಂಡಿದ್ದೇವೆ. ಆ ಎಲ್ಲೆಗಳನ್ನು ಮೀರುವ ಆಸೆ ನಮಗೆ ಇದೆ. ನಮ್ಮ ಆಸುಪಾಸಿನಲ್ಲಿರುವ ನಿಯಂತ್ರಿಸುವ ಶಕ್ತಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‘ನಾವು ಒಂದು ಹೆಜ್ಜೆ ಇಡಲು ಮುಂದಾದಾಗ ಎರಡು ಹೆಜ್ಜೆಗಳಷ್ಟು ಹಿಂದಕ್ಕೆ ಎಳೆಯಲಾಗುತ್ತಿದೆ. ಸ್ತ್ರೀವಾದದ ಕುರಿತ ಯಾವುದೇ ಪ್ರಮುಖ ಆಲೋಚನೆ ಗಳನ್ನು ಮಾಡುವಾಗಲೂ ಒಗ್ಗೂಡುವುದು ಹೇಗೆ ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ. ನಾವು ದೃಢವಾದ ಹೆಜ್ಜೆ ಇಟ್ಟು ಮುನ್ನಡೆಯಬೇಕಿದೆ’ ಎಂದರು.‘ಸ್ತ್ರೀವಾದಿ ತಾತ್ವಿಕತೆ ನಗರ ಕೇಂದ್ರಿತ, ಕೆಲವರ ಅನುಭವ ಕೇಂದ್ರಿತ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಮಾತನ್ನು ನಾವು ಒಪ್ಪುವುದಿಲ್ಲ. ಜತೆಗೆ ನಾವು ಬದಲಾಗಬೇಕಿದೆ ಎಂಬುದೂ ಗೊತ್ತಿದೆ. ತಳಸ್ತರದ ಧ್ವನಿಗಳನ್ನೂ ನಾವು ಆಲಿಸಬೇಕು. ಈ ದಿಸೆಯಲ್ಲಿ ಈ ವಿಚಾರ ಸಂಕಿರಣ ಉತ್ತಮ ಹೆಜ್ಜೆ’ ಎಂದು ಅವರು ಬಣ್ಣಿಸಿದರು.‘ಮಹಿಳಾ ನ್ಯಾಯಾಲಯದ ಸ್ಥಾಪನೆ ಉತ್ತಮ ನಡೆ. ಅದರಿಂದ ಉಂಟಾದ ಪರಿಣಾಮ ಅಪಾರ. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರು ನ್ಯಾಯಾಲಯದಲ್ಲಿ ಅಪರಿಚಿತ ವ್ಯಕ್ತಿಗಳ ಮುಂದೆ ಅವರ ನೋವನ್ನು ಹೇಳುತ್ತಾ ಮನಸ್ಸು ಹಗುರ ಮಾಡಿಕೊಂಡರು. ಜತೆಗೆ ಇನ್ನಷ್ಟು ಗಟ್ಟಿಯಾದರು’ ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ಮಹಿಳೆಯರು ವ್ಯವಸ್ಥೆ, ರಾಜಕೀಯ ದಬ್ಬಾಳಿಕೆಗೆ ಒಳಗಾಗುತ್ತಿದ್ದೇವೆ’ ಎಂದು  ಬೇಸರ ವ್ಯಕ್ತಪಡಿಸಿದರು. ‘ಅಕಾಡೆಮಿ ಯುವ ಬರಹಗಾರರಿಗೆ ವೇದಿಕೆ ಒದಗಿಸಲಿದೆ’ ಎಂದು ಭರವಸೆ ನೀಡಿದರು.ವಿಜಯನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಬಿ.ಯು. ಸುಮಾ ಮಾತನಾಡಿ, ‘ಐಟಿ, ಬಿಟಿ ಕಂಪೆನಿಗಳಲ್ಲಿ ಉತ್ತಮ ವೇತನ ಪಡೆಯುತ್ತಿರುವ ಮಹಿಳೆಯರೂ ಮನೆಗಳಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ’ ಎಂದರು. ‘ಪ್ರಜಾವಾಣಿ’ಯ ಸಹ ಸಂಪಾದಕಿ ಸಿ.ಜಿ.ಮಂಜುಳಾ, ಅಕಾಡೆಮಿ ರಿಜಿಸ್ಟ್ರಾರ್‌ ಸಿ.ಎಚ್‌. ಭಾಗ್ಯ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.