ಮಹಿಳಾ ಆಯೋಗದ ಕದ ತಟ್ಟಿದ ಅಧ್ಯಕ್ಷೆ

ಶುಕ್ರವಾರ, ಮೇ 24, 2019
28 °C

ಮಹಿಳಾ ಆಯೋಗದ ಕದ ತಟ್ಟಿದ ಅಧ್ಯಕ್ಷೆ

Published:
Updated:

ತುಮಕೂರು: ನಗರಸಭೆ ಅಧ್ಯಕ್ಷೆ ಯಶೋಧಾ ಗಂಗಪ್ಪ ಹಾಗೂ ಇಬ್ಬರು ಮಹಿಳಾ ಸದಸ್ಯೆಯರು ನಗರಸಭಾ ಸದಸ್ಯರೊಬ್ಬರ ವಿರುದ್ಧ `ಅಸಭ್ಯ ನಡವಳಿಕೆ, ಅವಾಚ್ಯ ಶಬ್ದ ಬಳಕೆ, ಕಿರುಕುಳ, ವಕ್ರವಾಗಿ ನೋಡುತ್ತಾರೆ~ ಎಂದು ದೂರಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿರುವ ಕುತೂಹಲಕಾರಿ ಘಟನೆ ನಡೆದಿದೆ.ನಗರಸಭೆ ಅಧ್ಯಕ್ಷೆಯೊಬ್ಬರು ಸದಸ್ಯರೊಬ್ಬರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದು ನಗರಸಭೆ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ. ಸದಸ್ಯರಾದ ಸುಜಾತಾ, ವಿಜಯಾ ಅವರೂ ಯಶೋಧಾ ಜತೆಯಲ್ಲಿ ದೂರು ಸಲ್ಲಿಸಿದ್ದಾರೆ.ಸದಸ್ಯ ಕೆ.ಪಿ.ಮಹೇಶ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸುವ ಮುನ್ನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್, ನಗರ ಘಟಕದ ಅಧ್ಯಕ್ಷ ರುದ್ರೇಶ್ ಅವರನ್ನು ಭೇಟಿಯಾಗಿರುವ ಯಶೋಧಾ ಗಂಗಪ್ಪ ತಮಗೆ ಆಗುತ್ತಿರುವ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಈ ಇಬ್ಬರು ನಾಯಕರಿಗೂ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ. ನಗರಸಭೆಯಲ್ಲಿ ಬಿಜೆಪಿ ಆಡಳಿತವಿದ್ದು, ಯಶೋಧಾ ಗಂಗಪ್ಪ, ಸುಜಾತಾ, ವಿಜಯಾ ಹಾಗೂ ಕೆ.ಪಿ. ಮಹೇಶ್ ಬಿಜೆಪಿ ಸದಸ್ಯರೇ ಆಗಿದ್ದಾರೆ.ಮಹಿಳಾ ಆಯೋಗ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ಸಲ್ಲಿಸುವಂತೆ ಶಿವಪ್ರಸಾದ್ ಸಲಹೆ ನೀಡಿದರು ಎನ್ನಲಾಗಿದೆ. ತಮ್ಮದೇ ಪಕ್ಷ ಅಧಿಕಾರದಲ್ಲಿದ್ದು ಪಕ್ಷದ ಸದಸ್ಯರ ವಿರುದ್ಧ ಮಹಿಳಾ ಸದಸ್ಯೆಯರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸುವಂತೆ ಸೂಚಿಸಿರುವುದು ಕೂಡ ಕುತೂಹಕ್ಕೆ ಕಾರಣವಾಗಿದೆ.ಸೋಮವಾರ ಸಂಜೆ ಕೊರಿಯರ್ ಮೂಲಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದ್ದು, ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಯಶೋಧಾ ಗಂಗಪ್ಪ ದೂರು ನೀಡಿದ್ದಾರೆ.ಹೇಳಿದ್ದು ಇಷ್ಟು: ದೂರಿನ ಕುರಿತು ಯಶೋಧಾ ಗಂಗಪ್ಪ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ ಅವರು ಹೇಳಿದಿಷ್ಟು. `ಮಹೇಶ್ ಮೊದಲಿನಿಂದಲೂ ನನ್ನೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಸಭೆಗಳಲ್ಲೂ ಏಕ ವಚನ ಬಳಸುತ್ತಾರೆ. ನಮ್ಮದೇ ಪಕ್ಷದ ಸದಸ್ಯರೆಂದು ಸುಮ್ಮನಿದ್ದೆ. ಆದರೆ ಈಗ ಇತರ ಮಹಿಳಾ ಸದಸ್ಯರ ಜತೆಗೂ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಬೇಕಾಯಿತು~ ಎಂದರು.ಈ ಹಿಂದೆ ಪಕ್ಷದ ಅಧ್ಯಕ್ಷ ಶಿವಪ್ರಸಾದ್ ಅವರಿಗೆ ಸುಜಾತ ದೂರು ನೀಡಿದ್ದರು. ಪಕ್ಷದ ಮುಖಂಡರು ಕರೆಸಿ ಬುದ್ಧಿವಾದ ಹೇಳಿದ್ದರೂ ನಡವಳಿಕೆ ಬದಲಾಗಲಿಲ್ಲ. `ನಮ್ಮನ್ನು ವಕ್ರ ದೃಷ್ಟಿಯಲ್ಲಿ ನೋಡುವುದು. ನೇರವಾಗಿ ಮಾತನಾಡದಿದ್ದರೂ ಯಾರನ್ನೋ ಬೈಯುವಂತೆ ನನ್ನನ್ನು ಬೈಯ್ಯುವುದನ್ನು ಮಾಡುತ್ತಿದ್ದರು. ಇದನ್ನೆಲ್ಲ  ಮಹಿಳಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ~ ಎಂದು ಹೇಳಿದರು. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ವಾರ್ಡ್ 25ರ ಸದಸ್ಯೆ ವಿಜಯಾ ರುದ್ರೇಶ್ ಪತಿ ಹಾಗೂ ಕೆ.ಪಿ.ಮಹೇಶ್ ನಡುವೆ ನಗರಸಭೆ ಕಚೇರಿಯಲ್ಲೇ ವಾಗ್ವಾದ ನಡೆದಿತ್ತು. ವಾಗ್ವಾದ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಪೊಲೀಸರಿಗೆ ಸೋಮವಾರ ದೂರು ಸಲ್ಲಿಸಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry