ಗುರುವಾರ , ಜೂನ್ 24, 2021
28 °C

ಮಹಿಳಾ ಕೌದಿ ಉದ್ಯಮ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ: ಅನಾದಿ ಕಾಲದಿಂದಲೂ ಇಲ್ಲಿನ ಮಹಿಳೆಯರು ಕೌದಿ ಹೊಲಿಯುವ ಕೆಲಸವನ್ನು ತಮ್ಮ ಬದುಕಿನ ಮೂಲ ಉದ್ಯೋಗವನ್ನಾಗಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಕೌದಿ ಹೊಲಿಯಲೂ ರಾಟಿಗಳು ಬಂದ ಕಾರಣವಾಗಿ ಇವರ ಬದುಕಿಗೆ ಆಸರೆಯಾಗಿದ್ದ ಕೌದಿ ಕೆಲಸ ನಿಲ್ಲುತ್ತಿದ್ದು ಹೆಂಗಳೆಯರು ತಾಕ್ರಾಂತರಾಗಿರುವುದು ವಿಷಾದದ  ಸಂಗತಿಯಾಗಿದೆ.ಬೆಳಗಿನ ಹೊತ್ತಿನಲ್ಲಿ ಅಥವಾ ಸಾಯಂಕಾಲದ ಸಮಯದಲ್ಲಿ ಇಲ್ಲಿನ ಗಾಂಧಿ ಸರ್ಕಲ್ ಇಲ್ಲವೆ ಇಳಕಲ್ ರಸ್ತೆಯ ಕಡೆಗೆ ಹೋದರೆ ರಸ್ತೆಯ ಅಕ್ಕಪಕ್ಕದಲ್ಲಿ ಗುಂಪು ಗುಂಪಾಗಿ ಕೌದಿ ಹೊಲೆಯುತ್ತಾ ಕುಳಿತಿರುವ ಹೆಂಗಳೆಯರು ಕಾಣುತ್ತಾರೆ.ಒಂದು ಕಾಲದಲ್ಲಿ ಕಂಬಳಿಗೆ ಶೆಡ್ಡುಹೊಡೆದು ನಿಂತಿದ್ದ ಈ ಹರಕು ಅರಿವೆಯ ಕೌದಿ ಬೇಸಿಗೆಯಲ್ಲಿ ತಂಪು ನೀಡುವ ಹಾಗೂ ಚಳಿಗಾಲದಲ್ಲಿ ಬಿಸಿ ಅನುಭವ ನೀಡುವ ಕಾರಣವಾಗಿಯೇ ಈಗಲೂ ಬಡವರ ಪಾಲಿನ ರತ್ನಗಂಬಳಿಯಾಗಿ ಉಳಿದಿವೆ.ಇಲ್ಲಿನ ಸುಮಾರು 2ನೂರಕ್ಕೂ ಹೆಚ್ಚು ಕುಟುಂಬಗಳು ಕೌದಿ ಹೊಲೆಯುವ ಕಾಯಕವನ್ನು ಕರಗತ ಮಾಡಿಕೊಂಡಿದ್ದಾರೆ. ಪುರುಷರು ಇತರೆ ಕೆಲಸಕ್ಕೆಂದು ಬೇರೆಡೆ ಹೋದರೆ ಓಣಿಯ ಮಹಿಳೆಯರೆಲ್ಲ ಸೇರಿ ಕಟ್ಟೆಪುರಾಣ ಕೊಚ್ಚುತ್ತಾ ಕೌದಿ ಹೊಲೆಯುವ ಕೆಲಸಕ್ಕೆ ಮುಂದಾಗುತ್ತಾರೆ.ಹಳೆಯ, ಹರಿದು ತುಂಡಾಗಿರುವ, ಮಕ್ಕಳು ಬಳಸಿ ಬೀಸಾಕಿದ ಬಟ್ಟೆ, ತಾತನ ಧೋತಿ, ಅಜ್ಜಿಯ ಹಳೆ ಸೀರೆಗಳೇ ಇವರ ಕೌದಿಗೆ ಬೇಕಾಗುವ ಮೂಲ ಕಚ್ಚಾ ವಸ್ತುಗಳು. ಈ ಕಚ್ಚಾವಸ್ತುಗಳನ್ನು ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಅಲೆದಾಡಿ ಸಂಗ್ರಹಿಸಿಕೊಳ್ಳುತ್ತಾರೆ.ಕೌದಿ ಬೇಡಿಕೆ ನೀಡುವ ಹಳ್ಳಿಗರಿಂದ ಅವರ ಅಳತೆಗೆ ತಕ್ಕಂತೆ ಹಳೆ ಬಟ್ಟೆಗಳನ್ನು ಪಡೆದುಕೊಳ್ಳುತ್ತಾರೆ. ಆ ಎಲ್ಲ ಬಟ್ಟೆಗಳಲ್ಲಿನ ಗುಣಮಟ್ಟದ ಭಾಗವನ್ನು ಮಾತ್ರ ಅಳತೆಗೆ ತಕ್ಕಂತೆ ಕತ್ತರಿಸಿ ಒಂದರ ಮೇಲೊಂದರಂತೆ ಹೊದಿಸಿ ಹೊಲೆಯುತ್ತಾ ಹೋದಂತೆ ಬಣ್ಣ ಬಣ್ಣದ ಚಿತ್ತಾರದ ಕೌದಿ ಕಣ್ಣಿಗೆ ಫಳ ಫಳ ಹೊಳೆಯುತ್ತದೆ.

 

ಹೀಗೆ ಹಳೆಯ ಚಿಂದಿ ಬಟ್ಟೆಗಳನ್ನು ಜೋಡಿಸಿ ಹೊಲಿದು ಸಿದ್ಧಪಡಿಸಿದ ಕೌದಿಗಳಿಗೆ ಮೊಳಕ್ಕೆ 40ರೂಪಾಯಿಯಂತೆ ಮಜೂರಿ ಪಡೆಯುತ್ತಾರೆ.  ಒಂದು ಕೌದಿ ತಯಾರಾಗಬೇಕಾದರ 2ದಿವಸ ಬೇಕಾಕೈತ್ರಿ, ಹತ್ತಾರು ವರ್ಷಗಳಿಂದ ಕೌದಿ ಹೊಲಿದು ಕಣ್ನು ಮಂಜಾಗ್ಯಾವ್ರಿ, ನಡು ಬಾಗೈತ್ರಿ, ಕೈ ನಡುಗುತಾವ್ರಿ ಆದ್ರ ಉದ್ಯೋಗ ಬಿಡಂತಿಲ್ಲ, ಯಾಕಂದ್ರ ಇದರ ಹಿಂದ ನಾಲ್ಕು ಹೊಟ್ಟಿ ತುಂಬಬೇಕ ನೋಡ್ರಿ ಎಂದು ಹುಲಿಗೆಮ್ಮ ದೈನಾಸದಿಂದ ಹೇಳುತ್ತಾರೆ.

ಬೇಸಿಗೆ ಕಾಲ ಕೌದಿ ಹೊಲಿಯೋಕೆ ಚಂದ ಚಳಿಗಾಲ ಕೌದಿ ಹೊದಿಯೋಕೆ ಅಂದ ಎಂದು ಹೇಳುವ ರಾಮವ್ವ ಕೊಪ್ಪಳ ಹಾಗೂ ಹುಲಿಗೆಮ್ಮ ಅವರ ಕೈಗಳಿಗೆ ಸಾವಿರಾರು ಕೌದಿಗಳನ್ನು ಹೊಲಿದ ಅನುಭವವಿದೆ. ಒಮ್ಮೆ ಮಡಿಕಿ ಬಿಚ್ಚಿ ಹೊಸ ಮನ್ಯಾಗ ಕೌದಿ ಹಾಸಿದರೆ ಚಿತ್ತಾರದ ಈ ಕೌದಿಗಳ ಆ ಆಕರ್ಷಣೆಯೇ ಬೇರೆ, ಬೀಗರು ಬಿಜ್ಜರು ಬಂದಾಗ ಕಂಬಳಿಗೆ ಬದಲು ಕೌದಿ ಹಾಸುವ ಪದ್ಧತಿಯೇ ಇತ್ತು ಎಂದು ರೇಣುಕವ್ವ ಹೇಳುತ್ತಾರೆ.

ಇವರು ಹೊಲಿಯುವ ಒಂದು ಕೌದಿಗಳು ಸುಮಾರು ನಾಲ್ಕಾರು ವರ್ಷಗಳವರೆಗೆ ಬಾಳಿಕೆ ಬರುತ್ತದೆ.

 

ಆದರೆ ಇತ್ತೀಚೆಗೆ ನಗರಗಳಲ್ಲಿ ಕೌದಿ ಹೊಲಿಯುವ ರಾಟಿಗಳು ಬಂದಿದ್ದರಿಂದಾಗಿ ನಗರವಾಸಿಗಳು ಹಳ್ಳಿಗಳಿಗೆ ಬಂದು ಕಡಿಮೆ ಕೂಲಿಯಲ್ಲಿ ಕಂಬಳಿ ಹೊಲೆದು ಕೊಡುತ್ತಿದ್ದಾರೆ.ಆದರೆ ರಾಟಿಯಿಂದ ಬಿದ್ದಿರುವ ಹೊಲಗೆಗೆ ಹೋಲಿಸಿದರೆ ಕೈಯಿಂದ ಹಾಕಿದ ಹೊಲಿಗೆಗಳು ಕೌದಿಗೆ ಬಾಳಿಕೆ ನೀಡುತ್ತವೆ.ರಾಟಿ ಬಂದ ನಂತರ ನಮ್ಮ ದುಡಿಮೆಗೆ ಪೆಟ್ಟು ಬಿದ್ದೈತ್ರಿ, ಸರ್ಕಾರ ನಮಗೂ ಅಂತಹ ರಾಟಿಗಳ ನೆರವು ನೀಡಿದರೆ ನಾವು ಬದಕೋಕೆ ಅನುಕೂಲ ಮಾಡಿದಂಗಾಕೈತೆ ಎಂದು ರಾಮವ್ವ ನೊಂದು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.