ಮಹಿಳಾ ಚಿತ್ರೋತ್ಸವಕ್ಕೆ ‘ಎದೆಗಾರಿಕೆ’

7

ಮಹಿಳಾ ಚಿತ್ರೋತ್ಸವಕ್ಕೆ ‘ಎದೆಗಾರಿಕೆ’

Published:
Updated:
ಮಹಿಳಾ ಚಿತ್ರೋತ್ಸವಕ್ಕೆ ‘ಎದೆಗಾರಿಕೆ’

ಸುಮನಾ ಕಿತ್ತೂರು ನಿರ್ದೇಶನದ ‘ಎದೆಗಾರಿಕೆ’ ಸಿನಿಮಾ ಮುಂಬೈಯಲ್ಲಿ ನಡೆಯುವ ಮಹಿಳೆಯರ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ (MWIFF-- – Mumbai Women’s International Film Festival) ಆಯ್ಕೆಯಾಗಿದೆ.ಕನ್ನಡದ ಚಿತ್ರಗಳಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳ ವೇದಿಕೆಯ ಗೌರವ ಹೊಸತೇನೂ ಅಲ್ಲ. ಆದರೆ, ಮಹಿಳಾ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಚಿತ್ರ ಎನ್ನುವುದು ‘ಎದೆಗಾರಿಕೆ’ಯ ವಿಶೇಷ. ಮತ್ತೊಂದು ವಿಶೇಷವೂ ಇದೆ. ‘ಎಂಡಬ್ಲ್ಯುಐಎಫ್‌ಎಫ್‌–2013’ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಚಿತ್ರ ‘ಎದೆಗಾರಿಕೆ’ ಎನ್ನುವ ಅಗ್ಗಳಿಕೆಯದು.ಮಹಿಳಾ ಚಿತ್ರೋತ್ಸವ ಅಕ್ಟೋಬರ್‌ 8ರಿಂದ 14ರವರೆಗೆ ನಡೆಯಲಿದೆ. ಈ ಉತ್ಸವದಲ್ಲಿ ‘ಫೀಚರ್‌ ಫಿಲ್ಮ್ಸ್‌’, ‘ಹರ್‌ ಫಿಲ್ಮ್ಸ್‌’ ಎನ್ನುವ ಎರಡು ವಿಭಾಗಗಳಲ್ಲಿ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಇವುಗಳ ಜೊತೆಗೆ ಹೆಣ್ಣುಮಕ್ಕಳೇ ರೂಪಿಸಿದ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ.ಸುಮನಾ ಅವರ ಚಿತ್ರ ಆಯ್ಕೆಯಾಗಿರುವುದು “ಫೀಚರ್‌ ಫಿಲ್ಮ್‌’ ವಿಭಾಗದಲ್ಲಿ. ಕೇವಲ ಐದು ಚಿತ್ರಗಳು ಇರುವುದು ಈ ಗುಂಪಿನಲ್ಲಿನ ಸಿನಿಮಾಗಳ ಗುಣಮಟ್ಟವನ್ನು ಸೂಚಿಸುವಂತಿದೆ. ಕನ್ನಡದ ಜೊತೆಗೆ ಅಮೆರಿಕ, ಸ್ಪೇನ್‌, ಫ್ರಾನ್ಸ್‌ ಮತ್ತು ಲೆಬನಾನ್‌ ದೇಶಗಳ ತಲಾ ಒಂದು ಚಿತ್ರಗಳು ‘ಫೀಚರ್‌ ಫಿಲ್ಮ್‌’ ವಿಭಾಗದಲ್ಲಿವೆ. ಸುಮಾರು ಒಂದು ತಾಸಿನ ಆಸುಪಾಸಿನಲ್ಲಿರುವ ಚಿತ್ರಗಳು ‘ಹರ್‌ ಫಿಲ್ಮ್ಸ್‌’ ವಿಭಾಗದಲ್ಲಿದ್ದು, ಈ ವಿಭಾಗದಲ್ಲಿ ಸುಮಾರು ಇಪ್ಪತ್ತನಾಲ್ಕು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಏಳು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ 70ಕ್ಕೂ ಹೆಚ್ಚು ದೇಶಗಳ, ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳನ್ನು ಸಹೃದಯರು ವೀಕ್ಷಿಸಲು ಅವಕಾಶವಿದೆ.ಮಹಿಳಾ ಚಿತ್ರೋತ್ಸವ ಸಿನಿಮಾಗಳ ಪ್ರದರ್ಶನಕ್ಕಷ್ಟೇ ಸೀಮಿತವಾಗಿಲ್ಲ. ಇಲ್ಲಿ ಮಹಿಳೆಯರ ಸಿನಿಮಾಗಳು ಸೇರಿದಂತೆ ಒಟ್ಟಾರೆ ‘ವಿಶ್ವ ಸಿನಿಮಾ’ ಕುರಿತು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ನಡೆಯಲಿವೆ. ಹಾಗಾಗಿ ಸಿನಿಮಾಸಕ್ತರ ಪಾಲಿಗಿದು ಕಲಿಕೆಯ ಮತ್ತು ಮಾಹಿತಿ ವಿನಿಮಯದ ವೇದಿಕೆಯೂ ಹೌದು.ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿರುವ ಸುಮಾ ಅವರ ಮನಸ್ಸಿನಲ್ಲಿ ಸದ್ಯಕ್ಕೆ ಇರುವುದು, ವಿಶ್ವದ ವಿವಿಧ ಭಾಗಗಳಲ್ಲಿ ಮಹಿಳಾ ಚಿತ್ರಕರ್ಮಿಗಳನ್ನು ಭೇಟಿಯಾಗುವ ಕುತೂಹಲ. ‘ಈವರೆಗೆ ನನ್ನ ಕಷ್ಟಸುಖಗಳ ಬಗ್ಗೆಯಷ್ಟೇ ಯೋಚಿಸುತ್ತಿದ್ದೆ. ಬೇರೆ ಬೇರೆ ದೇಶಗಳಲ್ಲಿ, ವಿವಿಧ ಭಾಷೆಗಳಲ್ಲಿ ಸಿನಿಮಾ ರೂಪಿಸುತ್ತಿರುವ ಹೆಣ್ಣುಮಕ್ಕಳ ಕಷ್ಟಗಳು, ಅವರ ತವಕತಲ್ಲಣಗಳು ಯಾವ ಬಗೆಯವು ಎನ್ನುವುದನ್ನು ತಿಳಿಯಲು ಕಾತರಿಸುತ್ತಿರುವೆ’ ಎನ್ನುವ ಸುಮನಾ ಅವರ ಮಾತಿನಲ್ಲಿ ಸಿನಿಮಾ ಪ್ರಕ್ರಿಯೆಯ ಹಿಂದಿನ ತಲ್ಲಣಗಳ ಧ್ವನಿಯಿದೆ.ಅಂದಹಾಗೆ, ಪ್ರಸ್ತುತ ಹೊಸ ಚಿತ್ರಕ್ಕೆಂದು ಸುಮನಾ ಚಿತ್ರಕಥೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ಎದೆಗಾರಿಕೆ’ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟರೂ ನಿರ್ದೇಶಕಿಯನ್ನು ಹುಡುಕಿಕೊಂಡ ಅವಕಾಶಗಳು ಕಡಿಮೆಯೇ. ಎಡತಾಕಿದ ಕೆಲವು ನಿರ್ಮಾಪಕರು ಕೂಡ ಕೈಯಲ್ಲಿ ಬೇರೆ ಭಾಷೆಗಳ ಸಿನಿಮಾಗಳ ಸೀಡಿ ಹಿಡಿದುಕೊಂಡೇ ಬಂದಿದ್ದರು. ‘ರೀಮೇಕ್‌ ಒಲ್ಲೆ’ ಎನ್ನುವ ಜಾಯಮಾನದ ಈ ನಿರ್ದೇಶಕಿ, ‘ಮತ್ತೊಂದು ಸಿನಿಮಾ ಮಾಡಲಿಕ್ಕೆ ಸಾಧ್ಯವಾಗದೆ ಹೋದರೂ ಚಿಂತೆಯಿಲ್ಲ. ಸ್ವಂತಿಕೆ ಬಿಟ್ಟುಕೊಡಲಾರೆ’ ಎನ್ನುವ ನಿಲುವಿನವರು. ಹಾಗಾಗಿ, ಚಿತ್ರಕಥೆ ಬರೆಯುವುದರ ಹೊರತಾಗಿ ಉಳಿದಂತೆ ಸುಮನಾ ಬಳಿ ಹೆಚ್ಚು ಕನಸುಗಳಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry