ಗುರುವಾರ , ಏಪ್ರಿಲ್ 15, 2021
28 °C

ಮಹಿಳಾ ದಿನಾಚರಣೆ: ಗೋಷ್ಠಿ, ಸಂವಾದ, ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಮಹಿಳೆಯರಿಗೂ ಸ್ವಾಭಿಮಾನ ಮತ್ತುಸ್ವಾತಂತ್ರ್ಯದ ಬದುಕು ಕುರಿತ ಧ್ಯೇಯವಾಕ್ಯದೊಂದಿಗೆ ವಿಚಾರಗೋಷ್ಠಿ, ಸಂವಾದ, ಜಾಥಾ ಕಾರ್ಯಕ್ರಮಗಳು ನಡೆದವು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಒಂದು ದಿನದ ಕಾನೂನು ನೆರವು ಶಿಬಿರ ನಡೆಯಿತು.ಎಸ್.ಬಿ.ಸಮುದಾಯ ಭವನದಲ್ಲಿ ನಡೆದ ಶಿಬಿರವನ್ನು ಉದ್ಘಾಟಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಆರ್.ಶಾರದಾ ಅವರು, ಸಮಾನತೆ ಮತ್ತು ಸಬಲೀಕರಣ ದತ್ತ ಹೆಜ್ಜೆ ಇರಿಸಿರುವ ಮಹಿಳೆಯರು ಕಾನೂನು ಅರಿವು ಬೆಳೆಸಿಕೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿದರು.ನಗರ ಪ್ರದೇಶದಲ್ಲೇ  ಜಾಗೃತ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತವೆ. ಹೀಗಿರುವಾಗ ಗ್ರಾಮೀಣ ಮಹಿಳೆಯರ ಪಾಡೇನು ಎಂದು ಪ್ರಶ್ನಿಸಿದ ಅವರು, ಇಂಥ ಬೆಳವಣಿಗೆಗಳಿಗೆ ಮಹಿಳೆಯರು ಕನಿಷ್ಠ ಕಾನೂನು ಅರಿವು ಬೆಳೆಸಿಕೊಳ್ಳದಿರುವುದು ಕಾರಣವಾಗಿದೆ ಎಂದರು.ಆರ್‌ಟಿಒ ಶೋಭಾ ಅವರು, ಮಹಿಳೆಯರಿಗೆ ಸಮಾಜದಲ್ಲಿ ಪೂಜ್ಯ ಭಾವನೆ ಇದ್ದರೂ ಅವರ ಭಾವನೆಗಳಿಗೆ ಮಾತ್ರ ಸ್ಪಂದನೆ ದೊರೆತಿಲ್ಲ.  ಕಾನೂನು ಇದ್ದರೂ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಗಾರ್ಮೆಂಟ್ಸ್, ಕೃಷಿ ಕೂಲಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಿಮಲಾ, ನ್ಯಾಯವಾದಿ ಸುಮಿತ್ರಾ, ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಹಾಜರಿದ್ದರು. ಗೌರಮ್ಮ ಮತ್ತು ತಂಡ ಮಹಿಳಾ ಜಾಗೃತಿ ಗೀತೆಯನ್ನು ಪ್ರಸ್ತುತಪಡಿಸಿತು.‘ಮನೆಯಿಂದಲೇ ಹೋರಾಟ’

ಮಹಿಳೆಯರ ಸ್ವಾತಂತ್ರ್ಯದ ಹೋರಾಟ ಮನೆಯಿಂದಲೇ ಆರಂಭವಾಗಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಅಭಿಪ್ರಾಯಪಟ್ಟರು.

ಮಾನಸಿಕ ಮತ್ತು ಶಾರೀರಿಕ ದೌರ್ಜನ್ಯಗಳು ನಡೆಯುತ್ತಿವೆ. ಅಪರಿಚಿತ ಮಹಿಳೆಯರ ಶವಗಳೇ ಹೆಚ್ಚಾಗಿ ಕಂಡುಬರುತ್ತವೆ ಎಂಬುದನ್ನು ಗಮನಿಸಿದಾಗ ದೌರ್ಜನ್ಯ ಪ್ರಮಾಣವನ್ನು ಅರಿಯಬಹುದಾಗಿದೆ ಎಂದು  ಹೇಳಿದರು.ಸ್ಪಂದನಾ ಮಹಿಳಾ ಸಂಘಟನೆಯು ಗಾಂಧಿಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು,  ಮಹಿಳೆಯರಿಗೆ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳಿವೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಾಮಾಜಿಕವಾಗಿ ಪ್ರಗತಿ ಹೊಂದಿದ್ದರೂ ಪರಿಸ್ಥಿತಿ ಇನ್ನೂ ಬದಲಾಗಬೇಕಿದೆ ಎಂದು ಹೇಳಿದರು. ಮುಖ್ಯ ಭಾಷಣ ಮಾಡಿದ ಉಪನ್ಯಾಸಕಿ ಸುಜಾತಾ ಅಕ್ಕಿ ಅವರು, ಮಹಿಳೆಯರು ತಮ್ಮ ಹಕ್ಕುಗಳ ಬಗೆಗೆ ಜಾಗೃತರಾಗಬೇಕು. ಅಲ್ಲದೆ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಹಕ್ಕುಗಳನ್ನು ನೀಡುವಲ್ಲಿ ಮನೋ ಭಾವನೆಯೂ ಬದಲಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.ಪ್ರಾಸ್ತಾವಿಕ ಭಾಷಣ ಮಾಡಿದ ಸಂಘಟನೆಯ ಸುನಂದಾ ಜಯರಾಂ ಅವರು, ಮಹಿಳೆಯರ ಸ್ಥಿತಿಗತಿ ಬದಲಾಗಲು ತಮ್ಮ ಹಕ್ಕುಗಳಿಗಾಗಿ ಅವರು ಸಂಘಟಿತರಾಗುವುದೇ ಉತ್ತಮ ಮಾರ್ಗ ಎಂದು ಹೇಳಿದರು. ಸಂಘಟನೆಯ ನಿರ್ಮಲಾ ಚಿಕ್ಕೇಗೌಡ, ಪ್ರೇಮಾ, ಉಪನ್ಯಾಸಕಿ ಶ್ರೀಲತಾ ಮತ್ತು ಇತರ ಪದಾಧಿಕಾರಿಗಳು ಇದ್ದರು. ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯವಾಕ್ಯ ಕುರಿತು ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.

‘ಮಹಿಳೆಯರೇ ಹಕ್ಕು ಚಲಾಯಿಸಲಿ’

ಇನ್ನೊಂದೆಡೆ ಎಂ.ಒ.ಬಿ ಗ್ರಾಮೀಣ ಆರೋಗ್ಯ ಕೇಂದ್ರ ಮತ್ತು ಕ್ಯಾಥೊಲಿಕ್ ಹೆಲ್ತ್ ಅಸೋಸಿಯೇಷನ್ ಜಂಟಿಯಾಗಿ  ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ತಮ್ಮ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಮಹಿಳೆಯರು ಜಾಥಾ ನಡೆಸಿದರು.ಬಳಿಕ ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರು,   ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಮಹಿಳಾ ಸದಸ್ಯರು ತಮ್ಮ ಅಧಿಕಾರದ ಹಕ್ಕನ್ನು ಕುಟುಂಬದ ಪುರುಷರಿಗೆ ಬಿಟ್ಟುಕೊಡಬಾರದು ಎಂದರು.ಬಹುತೇಕ ಸಂದರ್ಭಗಳಲ್ಲಿ ಮಹಿಳಾ ಸದಸ್ಯರ ಹಕ್ಕುಗಳನ್ನು ಅವರ ಪತಿ, ಅಥವಾ ಕುಟುಂಬದ ಇತರ ಬಂಧುಗಳು ನೆರವೇರಿಸುತ್ತಾರೆ. ಇದು, ಅಧಿಕಾರ ದುರುಪಯೋಗಕ್ಕೂ ನಾಂದಿಯಾಗುವ ಸಾಧ್ಯತೆಯಿದೆ ಎಂದರು. ಸಮಾರಂಭದಲ್ಲಿ ಮಿಮ್ಸ್ ನಿರ್ದೇಶಕಿ ಡಾ. ಪುಷ್ಪಾ ಸರ್ಕಾರ್, ನಗರಸಭೆ ಅಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಆತ್ಮಾನಂದ, ಸಿಸ್ಟರ್ ಲೀಲಾ, ಸಿಸ್ಟರ್ ಟ್‌ರೀಸಾ, ಫಾದರ ಜೋಸೆಫ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.