ಮಂಗಳವಾರ, ಏಪ್ರಿಲ್ 13, 2021
23 °C

ಮಹಿಳಾ ದಿನಾಚರಣೆ: ಮೀಸಲಾತಿ ಸದ್ಬಳಕೆ ಮಹಿಳೆಯರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಜ್ಯ ಸರ್ಕಾರ ಕಲ್ಪಿಸಿರುವ ಶೇ.50 ಮೀಸಲಾತಿ ಸೌಲಭ್ಯವನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಸಲಹೆ ನೀಡಿದರು.

ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ್ರಾಮೀಣ ಕೂಟ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಜಾಪ್ರಭುತ್ವದಲ್ಲಿ ಜಾರಿಯಲ್ಲಿರುವ ಮೀಸಲಾತಿ ಸೌಲಭ್ಯವನ್ನು ಪೂರ್ಣ ಪ್ರಮಾಣದಲ್ಲಿ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಮೀಸಲಾತಿ ಸೌಲಭ್ಯ ದಕ್ಕಿದ್ದರೂ ಶೋಷಣೆ ನಿಂತಿಲ್ಲ ಎಂದು ವಿಷಾದಿಸಿದರು.ಪುರುಷ ಪಾರಮ್ಯವೇ ಸಮಾಜದಲ್ಲಿ ಹೆಚ್ಚು ಪ್ರಬಲವಾಗಿರುವುದರಿಂದ ಮಹಿಳಾ ಮೀಸಲಾತಿ ಸೌಲಭ್ಯ ವಿಸ್ತಾರಗೊಳ್ಳುತ್ತಿಲ್ಲ. ಮಹಿಳೆಯರಿಗೆ ಶಿಕ್ಷಣ, ಸುರಕ್ಷತೆ ಅಗತ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದರು.ಶೋಷಣೆಗೊಳಗಾದಾಗ ಮಹಿಳೆಯರು ಅದನ್ನು ಎದುರಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಹೆಚ್ಚು ಕಾಳಜಿ ವಹಿಸಿ ಜೀವನದಲ್ಲಿ ಯಶಸ್ಸು ಗಳಿಸಬೇಕು. ಎಲ್ಲ ಕ್ಷೇತ್ರಗಳಲ್ಲೂ ಪ್ರತಿಭೆ ಮತ್ತು ಪರಿಶ್ರಮವುಳ್ಳ ಮಹಿಳೆಯರಿಗೆ ಅವಕಾಶಗಳ ಬಾಗಿಲು ತೆರೆದಿರುತ್ತದೆ. ಅಗತ್ಯವಿರುವುದು ಪ್ರಯತ್ನವಷ್ಟೆ ಎಂದು ಸಲಹೆ ನೀಡಿದರು.ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಬಿ.ಎನ್.ಲಾವಣ್ಯಲತಾ ಮಾತನಾಡಿ, ಮಹಿಳೆಯರಿಗೆ ಮಹಿಳೆಯರೇ ಶತ್ರುವಾಗಿದ್ದಾರೆ. ವರದಕ್ಷಿಣೆ ಕಿರುಕುಳದ ಬಹುತೇಕ ಪ್ರಕರಣಗಳಲ್ಲಿ ಅತ್ತೆಯೇ ಸೊಸೆಯನ್ನು ಹಿಂಸಿಸುವ ನಿದರ್ಶನಗಳು ಹೆಚ್ಚಿವೆ. ಹೀಗಾಗಿಯೇ ಕಡಿಮೆ ವಯಸ್ಸಿನ ಸೊಸೆಯಂದಿರು ಆತ್ಮಹತ್ಯೆಗೆ ಯತ್ನಿಸುತ್ತಾರೆ. ಇಂಥ ಸಂದರ್ಭಗಳಲ್ಲಿ ಪುರುಷರನ್ನು ದೂರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.‘ಕೌಟುಂಬಿಕ ಸಂದರ್ಭಗಳಲ್ಲಿ ಹಿರಿಯ ಮಹಿಳೆಯರು ಕಿರಿಯ ಮಹಿಳೆಯರನ್ನು ಗೌರವದಿಂದ, ಪ್ರೀತಿಯಿಂದ ಕಾಣುವ ಔದಾರ್ಯ ರೂಢಿಸಿಕೊಳ್ಳಬೇಕು. ಮಗಳನ್ನು ವಾತ್ಸಲ್ಯದಿಂದ ಕಾಣುವಂತೆ ಸೊಸೆಯನ್ನು ಕೂಡ ಕಾಣಬೇಕು. ಮಹಿಳೆಯರ ನಡುವೆ ಉತ್ತಮ ಬಾಂಧವ್ಯವಿದ್ದರೆ ಕುಟುಂಬ ಉನ್ನತಿಯಡೆಗೆ ಸಾಗಲು ಸುಲಭವಾಗುತ್ತದೆ ಎಂದರು.ಪುರುಷ-ಮಹಿಳಾ ಸಮಾನತೆಯನ್ನು ಎಲ್ಲ ಹಂತದಲ್ಲೂ ಸ್ಥಾಪಿಸುವ ವಿಶೇಷ ಪ್ರಯತ್ನ ಮಹಿಳಾ ಸಂಘಟನೆಗಳ ವತಿಯಿಂದ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಕೂಟದ ಅಧ್ಯಕ್ಷ ಬಸವರಾಜ, ಉಪಾಧ್ಯಕ್ಷ ಶರತ್‌ಕುಮಾರ ಶೆಟ್ಟಿ, ರೊಟೇರಿಯನ್ ವಿ.ಪಿ.ಸೋಮಶೇಖರ್ ವೇದಿಕೆಯಲ್ಲಿದ್ದರು. ವಿವಿಧ ಕ್ಷೇತ್ರದ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.