ಮಹಿಳಾ ಪೊಲೀಸ್ ಸಂಖ್ಯೆ ಹೆಚ್ಚಲಿ

7

ಮಹಿಳಾ ಪೊಲೀಸ್ ಸಂಖ್ಯೆ ಹೆಚ್ಚಲಿ

Published:
Updated:

ಅತ್ಯಾಚಾರ ಪ್ರಕರಣಗಳ ತನಿಖೆಗೆ, ಸಾಧ್ಯವಾದಷ್ಟು ಮಹಿಳಾ ತನಿಖಾಧಿಕಾರಿಗಳನ್ನೇ ನಿಯೋಜಿಸಬೇಕೆಂದು ರಾಜ್ಯ ಹೈಕೋರ್ಟ್ ಸಲಹೆ ನೀಡಿದೆ. ಮಹಿಳೆಯರು ತನಿಖಾಧಿಕಾರಿಗಳಾಗಿದ್ದಲ್ಲಿ, ಅತ್ಯಾಚಾರಕ್ಕೀಡಾಗಿ ನೊಂದ ಮಹಿಳೆಯರಿಗೆ ಹೆಚ್ಚು ಸಹಾಯವಾಗುತ್ತದೆ ಎಂಬುದು ಸರಿಯಾದುದೇ. ಆದರೆ ಗಮನಿಸಬೇಕಾದ ವಿಚಾರ ಎಂದರೆ, ಮಹಿಳಾ ಪೊಲೀಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಿಲ್ಲ. ಮಹಿಳಾ ಪೊಲೀಸ್ ಠಾಣೆಗಳ ಪ್ರಮಾಣವೂ ಕಡಿಮೆ ಇದೆ. ಈ ಠಾಣೆಗಳು ವರದಕ್ಷಿಣೆ ಪ್ರಕರಣಗಳನ್ನೇ ಹೆಚ್ಚಾಗಿ ನಿರ್ವಹಿಸುತ್ತಿವೆ.

ಈ ಠಾಣೆಗಳೇ ಅತ್ಯಾಚಾರ ಪ್ರಕರಣಗಳನ್ನೂ ನಿರ್ವಹಿಸಬಹುದೆಂಬ ಸಲಹೆಯನ್ನೂ ಈಗ ಕೋರ್ಟ್ ನೀಡಿರುವುದೇನೊ ಸೂಕ್ತವಾಗಿದೆ. ಆದರೆ, ಇದಕ್ಕಾಗಿ ಪೊಲೀಸ್ ಪಡೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಬೇಕಿರುವುದು ಮುಖ್ಯ. ಲೈಂಗಿಕ ಹಿಂಸಾಚಾರಕ್ಕೆ ಗುರಿಯಾದ ಮಹಿಳೆಗೆ, ಅವನ್ನು ಪುರುಷರ ಮುಂದೆ ಹೇಳಿಕೊಳ್ಳುವುದು ಮತ್ತೊಂದು ದೊಡ್ಡ ಅಗ್ನಿಪರೀಕ್ಷೆಯಾಗಿರುತ್ತದೆ ಎಂಬುದಂತೂ ನಿಜ. ದೂರು ನೀಡುವ ಮಹಿಳೆಯನ್ನೇ ದೂಷಿಸುವುದು, ದೂರನ್ನು ಕ್ಷುಲ್ಲಕೀಕರಣಗೊಳಿಸುವುದು ಅಥವಾ ಆಕ್ರಮಣಕಾರಿ ಧಾಟಿಯ ಪ್ರಶ್ನೆಗಳನ್ನು ಕೇಳುವಂತಹದ್ದು ಸದ್ಯದ ಪೊಲೀಸ್ ವ್ಯವಸ್ಥೆಯಲ್ಲಿ ಅಂತರ್ಗತವಾಗಿದೆ.

ಆದರೆ ಸಾಮಾಜಿಕ, ಸಾಂಸ್ಕೃತಿಕ ಕಾರಣಗಳಿಂದಾಗಿ ಪೊಲೀಸರ ಬಳಿ ಹೋಗುವ ನೊಂದ ಮಹಿಳೆಯರ ಸ್ಥಿತಿಯನ್ನು ಭಿನ್ನವಾಗಿಯೇ ಗ್ರಹಿಸಬೇಕಾದುದು ಅವಶ್ಯ. ಇದಕ್ಕಾಗಿ ಯಾವುದೇ ರೀತಿಯ ಹಿಂಸೆಗೆ ಒಳಗಾದ ಮಹಿಳೆಯ ಜೊತೆಗಿನ ನಿರ್ವಹಣೆ ಸಂವೇದನಾಶೀಲವಾಗಿರಬೇಕಾಗುತ್ತದೆ. ಅತ್ಯಾಚಾರ ಹಾಗೂ ಮಹಿಳೆ ವಿರುದ್ಧದ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಪೊಲೀಸರಿಂದ ತಕ್ಷಣದ ಹಾಗೂ ಸೂಕ್ತ ಸ್ಪಂದನಗಳು, ಈ ಪ್ರಕರಣಗಳ ನಿರ್ವಹಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.

ಅಪರಾಧ ನ್ಯಾಯ ವ್ಯವಸ್ಥೆಯ ಕಾವಲುಗಾರರಾಗಿ, ಕಾನೂನು ಜಾರಿಯಲ್ಲಿ ಪೊಲೀಸರು ಅಪಾರ ವಿವೇಚನಾ ಅಧಿಕಾರ ಹೊಂದಿದ್ದಾರೆ.ಹಾಗೆಂದು ನಿಯಮಗಳನ್ನು ಅಥವಾ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವಂತಹ ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರುವುದು ಸಲ್ಲದು. ತೀರಾ ಇತ್ತೀಚಿನ ದಿನಗಳ್ಲ್ಲಲೇ ಈ ಬಗೆಯ ನಿಯಮಗಳ ಉಲ್ಲಂಘನೆಗಳ  ಪ್ರಕರಣಗಳನ್ನು ನಾಗರಿಕ ಸಮಾಜ ಕಂಡಿದೆ. ಮಹಿಳೆ ಬಂಧನದ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಇರಬೇಕೆಂಬ ನಿಯಮವನ್ನೇ ಮುಂಬೈನಲ್ಲಿ ಇತ್ತೀಚೆಗೆ ಮುರಿಯಲಾಗಿತ್ತು. ಬಾಳಠಾಕ್ರೆ ನಿಧನದಿಂದಾಗಿ ಮುಂಬೈನಲ್ಲಿನ ಅಘೋಷಿತ ಬಂದ್ ಕುರಿತಂತೆ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಕ್ಕಾಗಿ ಇಬ್ಬರು ಹೆಣ್ಣುಮಕ್ಕಳನ್ನು ಬಂಧಿಸಿದ ಪ್ರಕರಣದಲ್ಲಿ ರಾಜಾರೋಷವಾಗಿ ಈ ನಿಯಮದ ಉಲ್ಲಂಘನೆಯಾಗಿತ್ತು.

ಪತ್ರಕರ್ತ ನವೀನ್ ಸೂರಿಂಜೆಗೆ ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಒಯ್ದ ಪ್ರಕರಣದಲ್ಲೂ ಈ ಉಲ್ಲಂಘನೆ ಢಾಳಾಗಿತ್ತು. ಅತ್ಯಾಚಾರ  ಪ್ರಕರಣಗಳ ವಿಚಾರಣೆ ನಡೆಸುವಾಗ ಪ್ರಕರಣಕ್ಕೆ ಸಂಬಂಧಿಸದೆ ಇರುವವರನ್ನು ಹೊರಗೆ ಕಳುಹಿಸಿ ವಿಚಾರಣೆ ನಡೆಸಬೇಕು (ಇನ್ ಕ್ಯಾಮೆರಾ) ಎಂಬುದು ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳಲ್ಲಿ ಒಂದು. ಪಾಟೀ ಸವಾಲಿನ ಸಂದರ್ಭದಲ್ಲಿ  ಬಳಕೆಯಾಗುವ ಭಾಷೆ ಮುಜುಗರ ತರುವಂತಹದ್ದಾಗಿರಬಾರದು, ಆರೋಪಿ ಹಾಗೂ ನೊಂದ ಮಹಿಳೆ ಎದುರುಬದರಾಗಿ ನೇರ ನೋಡಲು ಅವಕಾಶ ಇಲ್ಲದಂತೆ ಮಧ್ಯದಲ್ಲಿ ತೆರೆ ಅಥವಾ ಬೇರೇನಾದರೂ ಏರ್ಪಾಡು ಇರಬೇಕು ಇತ್ಯಾದಿ ಅಂಶಗಳು ಮಾರ್ಗದರ್ಶಿ ಸೂತ್ರಗಳಲ್ಲಿ ಸೇರಿದ್ದು ಇವುಗಳ ಪಾಲನೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದೂ ಹೈಕೋರ್ಟ್ ಮತ್ತೆ ನೆನಪಿಸಿರುವುದು ಪ್ರಸ್ತುತವಾದದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry