ಮಹಿಳಾ ವಿವಿಗೆ ನೆರವು: ಪುರಂದೇಶ್ವರಿ

7

ಮಹಿಳಾ ವಿವಿಗೆ ನೆರವು: ಪುರಂದೇಶ್ವರಿ

Published:
Updated:

2ನೇ ಘಟಿಕೋತ್ಸವ; ಮಹಿಳೆಯರ ಅಭಿವೃದ್ಧಿಗೆ ವೇದಿಕೆಯಾಗಲಿ

ವಿಜಾಪುರ: ಗುಮ್ಮಟನಗರಿಯಲ್ಲಿ ಶುಕ್ರವಾರ ಶೈಕ್ಷಣಿಕ ರಂಗದ ಮೆರಗು. ಮಹಿಳಾ ವಿಶ್ವವಿದ್ಯಾಲಯದಲ್ಲಿ ಹಬ್ಬದ ಸಡಗರ. ಚಿನ್ನದ ಹುಡುಗಿಯರ ಕಲರವ; ಮಕ್ಕಳ ಸಾಧನೆ ಕಂಡು ಪಾಲಕರು ಹಾಗೂ ಬೋಧಕರಲ್ಲಿ ಇಮ್ಮಡಿಗೊಂಡ ಹುಮ್ಮಸ್ಸು.ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಎರಡನೆಯ ಘಟಿಕೋತ್ಸವ ನಡೆದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರ ವಿಶಿಷ್ಟ ಅಲಂಕಾರದಿಂದ ಕಂಗೊಳಿಸುತ್ತಿತ್ತು. ವಿವಿಯ ಆಡಳಿತ ಮಂಡಳಿಯವರು, ಗೌರವ ಡಾಕ್ಟರೇಟ್ ಸ್ವೀಕರಿಸುವವರು ಸಂಪ್ರದಾಯಿಕ ಮೇಲುಡುಗೆ ತೊಟ್ಟು  ವಿಶ್ವವಿದ್ಯಾಲಯದ ಲಾಂಛನ ದಂಡಧಾರಿಯೊಂದಿಗೆ ಮೆರವಣಿಗೆಯಲ್ಲಿ ಸಭಾಂಗಣ ಪ್ರವೇಶಿಸಿದಾಗ ಅಲ್ಲಿದ್ದವರಲ್ಲಿ ಪುಳಕ.ಸಂಪ್ರದಾಯದಂತೆ ನಡೆದ ಕುಲಪತಿಗಳ ‘ಪ್ರಾರ್ಥನೆ’, ಸಮಕುಲಾಧಿಪತಿಗಳ ‘ಅನುಮತಿ’ಯ ರೀತಿ, ಗೌರವ ಸೂಚನೆಯ ಬಗೆ, ಸಭೆಯಲ್ಲಿ ಪಾಲ್ಗೊಂಡಿದ್ದವರೆಲ್ಲ ಪಾಲಿಸಿದ ಶಿಸ್ತು ಕಂಡು ಹಾಗೂ ಕುಲಪತಿಗಳ ‘ತೈತ್ತಿರೀಯೋಪನಿಷತ್ ಅನುಶಾಸನ’ದ ವಾಚನ... ಇವೆಲ್ಲ ಇದೇ ಮೊದಲ ಬಾರಿಗೆ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರನ್ನು ಬೆರಗುಗೊಳಿಸಿದವು.ನೆರವಿನ ಭರವಸೆ: ಮುಖ್ಯ ಅತಿಥಿಯಾಗಿದ್ದ ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವೆ ಡಾ.ಡಿ. ಪುರಂದೇಶ್ವರಿ ತಮ್ಮ ಘಟಿಕೋತ್ಸವ ಭಾಷಣದಲ್ಲಿ ಹಾಗೂ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಈ ಮಹಿಳಾ ವಿಶ್ವವಿದ್ಯಾಲಯಕ್ಕೆ ಈಗಾಗಲೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ)ದ ಮೂಲಕ ಅನುದಾನ ನೀಡಲಾಗಿದೆ. ನಿರ್ಧಿಷ್ಟ ಹಾಗೂ ಅನುಷ್ಠಾನಯೋಗ್ಯ ಪ್ರಸ್ತಾವನೆಗಳನ್ನು ಸಲ್ಲಿಸಿದರೆ ಯುಜಿಸಿ ಮೂಲಕ ಅಗತ್ಯವಿರುವಷ್ಟು ಅನುದಾನ ನೀಡಲು ಬದ್ಧ’ ಎಂದು ಭರವಸೆ ನೀಡಿದರು.‘ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಕೇಂದ್ರ ಸರ್ಕಾರ ಹಾಗೂ ತಾನು ಸ್ಥಾಪಿಸಿದ ವಿಶ್ವವಿದ್ಯಾಲಯಗಳನ್ನು ರಾಜ್ಯ ಸರ್ಕಾರಗಳು ಅಭಿವೃದ್ಧಿ ಪಡಿಸಬೇಕು. ತಾನು ಸ್ಥಾಪಿಸಿರುವ ಈ ಮಹಿಳಾ ವಿವಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಇನ್ನಷ್ಟು ನೆರವು ನೀಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೂಚ್ಯವಾಗಿ ಹೇಳಿದರು.ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವಿಜಾಪುರ ಜಿಲ್ಲೆ ರಾಜ್ಯದಲ್ಲಿಯೇ 23ನೇ ಸ್ಥಾನದಲ್ಲಿದೆ. ಅತ್ಯಂತ ಹಿಂದುಳಿದ ಹಾಗೂ ಸಾರಿಗೆ ಸಂಪರ್ಕದ ಕೊರತೆಯನ್ನೂ ಎದುರಿಸುತ್ತಿರುವ ವಿಜಾಪುರದಲ್ಲಿ ಮಹಿಳಾ ವಿವಿ ಸ್ಥಾಪಿಸಿರುವುದು ಅಭಿನಂದನಾರ್ಹ ಎಂದರು.‘ಸಾಮಾಜಿಕ ಮತ್ತು ಕೌಟುಂಬಿಕ ದೌರ್ಜನ್ಯಗಳು  ಇನ್ನೂ ನಡೆಯುತ್ತಿರುವುದು ಲಿಂಗ ತಾರತಮ್ಯಕ್ಕೆ ಸಾಕ್ಷಿ. ಮಹಿಳೆಯನ್ನು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಿ ಉದ್ಯೋಗದಲ್ಲಿ ಅತಿ ಕೆಳಸ್ಥರದಲ್ಲಿ ಹಾಗೂ ಆರ್ಥಿಕವಾಗಿಯೂ ಹಿಂದುಳಿಯುವಂತೆ ಮಾಡಲಾಗಿದೆ. ಮಹಿಳಾ ಕೌಶಲ ಅಭಿವೃದ್ಧಿಯಾಗಬೇಕಿದೆ. ಮಹಿಳಾ ಸಬಲೀಕರಣ ಇನ್ನೂ ಪೂರ್ಣಪ್ರಮಾಣದಲ್ಲಿ ಆಗಿಲ್ಲ. ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ. ಶಿಕ್ಷಣದ ಮೂಲಕವೇ ಮಹಿಳಾ ಸಬಲೀಕರಣ ಸಾಧ್ಯ’ ಎಂದರು.‘ನಿಮ್ಮ ಜೀವನ ಬೆಳಗಿಸಿಕೊಳ್ಳುವುದರ ಜೊತೆಗೆ ನಿಮ್ಮ ಸುತ್ತಲಿನ ಮಹಿಳೆಯರ ಜೀವನವನ್ನೂ ಬೆಳೆಗಿಸಲು ನೆರವಾಗಬೇಕು’ ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.ಮಹಿಳಾ ವಿವಿಯ ಕಾರ್ಯಚಟುವಟಿಕೆ ವಿವರಿಸಿದ ಕುಲಪತಿ ಡಾ.ಗೀತಾ ಬಾಲಿ, ಸಮಗ್ರ ಅಭಿವೃದ್ಧಿಗಾಗಿ 60 ಕೋಟಿ ರೂಪಾಯಿ ತುರ್ತು ಅನುದಾನದ ಅಗತ್ಯವಿದೆ ಎಂದರು.ವಿವಿಯ ಸಮಕುಲಾಧಿಪತಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಅವರು ಡಾ.ಡಿ. ಪುರಂದೇಶ್ವರಿ, ವಿದ್ಯಾ ಮುರಕುಂಬಿ, ಮಾಲತಿ ಹೊಳ್ಳಿ, ಸಾರಾ ಅಬೂಬಕ್ಕರ್ ಅವರಿಗೆ ಗೌರವ ಡಾಕ್ಟರೇಟ್ ಹಾಗೂ 60 ಜನ ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಪ್ರದಾನ ಮಾಡಿದರು.ಕುಲಸಚಿವ ಡಾ.ಎಸ್.ಎ. ಖಾಜಿ, ಮೌಲ್ಯಮಾಪನ ಕುಲಸಚಿವ ಡಾ.ಮಹೇಶ ಚಿಂತಾಮಣಿ, ಸಿಂಡಿಕೇಟ್ ಸದಸ್ಯರಾದ ಶಾಸಕ ಅರುಣ ಶಹಾಪುರ, ರಫೀ ಭಂಡಾರಿ, ಶರಣಬಸಪ್ಪ ಅರಕೇರಿ, ಎ.ಎ. ಪಾರ್ಸಿ, ವಿದ್ಯಾ ವಿಷಯಕ ಪರಿಷತ್ ಸದಸ್ಯರು ಮತ್ತಿತರರು ವೇದಿಕೆಯಲ್ಲಿದ್ದರು. ಡಾ. ಓಂಕಾರ ಕಾಕಡೆ, ಶಾಜಿಯಾ ಸುಲ್ತಾನಾ ಮೊಹ್ಸಿನ್ ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry