ಶುಕ್ರವಾರ, ಮೇ 7, 2021
21 °C

ಮಹಿಳಾ ವಿವಿ ಜ್ಞಾನ, ತರಬೇತಿ ಕೇಂದ್ರವಾಗಲಿ: ಜಾಮದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಮಹಿಳಾ ವಿಶ್ವವಿದ್ಯಾಲಯ ಮಹಿಳೆಯರಿಗೆ ಶಿಕ್ಷಣ ನೀಡುವುದಕ್ಕಷ್ಟೇ ಸೀಮಿತಗೊಳ್ಳಬಾರದು. ಪದವಿಯ ಹೊರತಾಗಿ ಜ್ಞಾನ, ಮಾರ್ಗದರ್ಶನ ಮತ್ತು ತರಬೇತಿಯ ಕೇಂದ್ರವಾಗಿ ರೂಪಗೊಳ್ಳಬೇಕು' ಎಂದು ಮಹಿಳಾ ವಿವಿಯ ಹಿಂದಿನ ವಿಶೇಷ ಅಧಿಕಾರಿಯೂ ಆಗಿರುವ ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಎಂ. ಜಾಮದಾರ ಸಲಹೆ ನೀಡಿದರು.ಶುಕ್ರವಾರ ನಡೆದ ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ದಶಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.`ಜನಸಂಖ್ಯೆ ಹೆಚ್ಚುತ್ತಿರುವ ನಮ್ಮ ದೇಶದಲ್ಲಿ ವಿವಿಗಳಲ್ಲಿ ಪ್ರವೇಶ-ಕಾಲೇಜುಗಳ ಸಂಖ್ಯೆ ಹೆಚ್ಚುವುದು ಸಾಮಾನ್ಯ. ಮಹಿಳಾ ವಿವಿ ಹತ್ತು ವರ್ಷ ಸಾಗಿಬಂದ ಹಾದಿಯ ಬಗೆಗೆ  ಆತ್ಮಾವ ಲೋಕನ ಮಾಡಿಕೊಳ್ಳಬೇಕು. ಮಹಿಳೆಯರ ಸಮಸ್ಯೆ ಪರಿಹಾರಕ್ಕೆ ಪರಿಣಾಮಕಾರಿ ಸಲಹೆ ನೀಡುವ ತಜ್ಞ ಬೋಧಕ ವರ್ಗ ನಮ್ಮಲ್ಲಿ ಇರಬೇಕು. ಪ್ರತಿ ವಿಭಾಗದಲ್ಲಿಯೂ ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿವಿಯ ಮೂಲ ಉದ್ದೇಶ ಈಡೇರಿಸುವ ಕೆಲಸವಾಗಬೇಕು' ಎಂದು ಕಿವಿಮಾತು ಹೇಳಿದರು.`ಜಗತ್ತಿನ 250 ರಾಷ್ಟ್ರಗಳ ಪೈಕಿ ಕೇವಲ 10 ರಾಷ್ಟ್ರಗಳಲ್ಲಿ ಮಹಿಳಾ ವಿಶ್ವವಿದ್ಯಾಲಯಗಳಿವೆ. ಅಮೆರಿಕೆಯಲ್ಲಿದ್ದ 220 ಮಹಿಳಾ ವಿವಿ ಮತ್ತು ಮಹಿಳಾ ಕಾಲೇಜುಗಳು ಕಳೆದ 30 ವರ್ಷಗಳ ಅವಧಿಯಲ್ಲಿ ಮುಚ್ಚಲ್ಪಟ್ಟಿವೆ ಇಲ್ಲವೆ ಸಹ ಶಿಕ್ಷಣ ಪದ್ಧತಿ ಅಳವಡಿಸಿಕೊಂಡಿದೆ. ಅಲ್ಲಿ ಹೆಂಗಸರ ಅಭಿವೃದ್ಧಿಗೆ ಗಂಡಸರು ಕಂಟಕವಾಗುತ್ತಿದ್ದಾರೆ ಎಂಬ ಭಾವನೆ ಮತ್ತು ಹೆಣ್ಣು ಮಕ್ಕಳು ಮಹಿಳಾ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿರುವುದು ಅದಕ್ಕೆ ಕಾರಣ' ಎಂದರು.`ಜಪಾನ್‌ನಲ್ಲಿ 20 ಮಹಿಳಾ ವಿವಿಗಳಿವೆ. ಮುಂದುವರೆದ ರಾಷ್ಟ್ರವಾದರೂ ಮಹಿಳಾ ಸ್ವಾತಂತ್ರ್ಯದ ವಿಷಯದಲ್ಲಿ ಆ ದೇಶವೂ ನಮ್ಮಂತೆಯೇ ಇದೆ. ಅದಕ್ಕೆ ಅವರು ಮಹಿಳಾ ವಿವಿ ತೆರೆದಿದ್ದಾರೆ. ನಮ್ಮ ದೇಶದ ಎಂಟು ಮಹಿಳಾ ವಿವಿಗಳ ಪೈಕಿ ವಿಜಾಪುರ ಮಹಿಳಾ ವಿವಿಯೇ ಅತ್ಯಂತ ದೊಡ್ಡದು' ಎಂದರು.`ಮಹಿಳಾ ಶಿಕ್ಷಣದಲ್ಲಿ ಮುಸ್ಲಿಂ ರಾಷ್ಟ್ರಗಳಲ್ಲಿ ಹೊಸಯುಗ ಆರಂಭಗೊಂಡಿದೆ. ಸೌದಿ ಅರೆಬಿಯಾ, ಇರಾನ್, ಸುಡಾನ್, ಎಮನ್, ಜೊರ್ಡಾನ್ ರಾಷ್ಟ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ವಿವಿಗಳನ್ನು ಆರಂಭಿಸಲಾಗಿದೆ. ತಮ್ಮ ಧಾರ್ಮಿಕ ಕಟ್ಟುಪಾಡಿನ ತಳಹದಿಯಲ್ಲಿಯೇ ಅವರು ಮಹಿಳೆಯರಿಗೆ ಪ್ರತ್ಯೇಕವಾಗಿ ಉನ್ನತ ಶಿಕ್ಷಣ ನೀಡುತ್ತಿದ್ದಾರೆ. ಸೌದಿ ಅರೆಬಿಯಾದ ರಿಯಾದ್‌ನಲ್ಲಿರುವ ಮಹಿಳಾ ವಿಶ್ವವಿದ್ಯಾಲಯ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದು' ಎಂದು ವಿವರಿಸಿದರು.ಅಡ್ಡಿ: ಮಹಿಳಾ ವಿವಿಯ ಸ್ಥಾಪನೆಯ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಡಾ.ಜಾಮದಾರ, `ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಧೀನದಲ್ಲಿ ಮಹಿಳಾ ವಿವಿ ಸ್ಥಾಪನೆಯಾಗಬೇಕು ಎಂಬ ತಜ್ಞರ ವರದಿ ಇತ್ತು. ಆ ನಂತರ ರಚನೆಯಾದ ಡಾ.ಡಿ.ಎಂ. ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮಾನತೆ ನಿವಾರಣಾ ಸಮಿತಿಯೂ ಅದನ್ನು ಒತ್ತಿ ಹೇಳಿತ್ತು. ಉತ್ತರ ಕರ್ನಾಟಕದಲ್ಲಿ ಒಂದು ಮತ್ತು ಹಾಸನ ಇಲ್ಲವೆ ದಾವಣಗೆರೆಯಲ್ಲಿ ಇನ್ನೊಂದು ಮಹಿಳಾ ವಿವಿ ಸ್ಥಾಪಿಸಬೇಕು ಎಂಬ ನಂಜುಂಡಪ್ಪ ಅವರ ಉಲ್ಲೇಖವೇ ವಿಜಾಪುರ ಮಹಿಳಾ ವಿವಿಯ ವ್ಯಾಪ್ತಿ ವಿಸ್ತರಣೆಗೆ ತೊಡಕಾಯಿತು' ಎಂದರು.ವಿವಿಯ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಹಿಂದಿನ ಕುಲಪತಿ ಡಾ.ಗೀತಾ ಬಾಲಿ ಅವರು ಮಹಿಳಾ ವಿವಿಗೆ ಹೊಸ ಆಯಾಮ ನೀಡಿದರು ಎಂದು ಸ್ಮರಿಸಿದರು.  ಕುಲಪತಿ ಡಾ.ಮೀನಾ ಚಂದಾವರಕರ ಅಧ್ಯಕ್ಷತೆ ವಹಿಸಿದ್ದರು.ಕುಲಸಚಿವ ಡಾ.ಎಸ್.ಎ. ಖಾಜಿ ಸ್ವಾಗತಿಸಿ ದರು. ಡಾ.ಓಂಕಾರ ಕಾಕಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪ್ರಹ್ಲಾದ ತಡಸದ ವರದಿ ವಾಚಿಸಿದರು. ಡಾ.ವಿಷ್ಣು ಶಿಂಧೆ ಕಾರ್ಯಕ್ರಮ ನಿರೂಪಿಸಿದರು. ಡಾ.ಕುಲಕರ್ಣಿ ವಂದಿಸಿದರು.ಮೌಲ್ಯಮಾಪನ ಕುಲಸಚಿವ ಡಾ.ವಿ.ವಿ. ಮಳಗಿ, ಹಣಕಾಸು ಅಧಿಕಾರಿ ಡಾ.ಆರ್. ಸುನಂದಮ್ಮ, ವಿಜ್ಞಾನ ವಿಭಾಗದ ಡೀನ್ ಡಾ.ಶಿವಕುಮಾರ ಮಾಡಗಿ ಇತರರು ಪಾಲ್ಗೊಂಡಿದ್ದರು.ರೂ 10 ಲಕ್ಷ ನೆರವು: ಅರುಣ

ವಿಜಾಪುರ: ಮಹಿಳಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ಸದನ ನಿರ್ಮಿಸಲು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ.10 ಲಕ್ಷ ಅನುದಾನ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಪ್ರಕಟಿಸಿದರು.ಮಹಿಳಾ ವಿವಿ ದಶಮಾನೋತ್ಸವದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಹಿಳಾ ವಿವಿಯಲ್ಲಿ ಮಹಿಳಾ ಪೊಲೀಸ್ ಠಾಣೆ ಸ್ಥಾಪನೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದರು.`ಹಿಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರು ರೂ.5 ಕೋಟಿ ವಿಶೇಷ ಅನುದಾನ ನೀಡುವುದಾಗಿ ವಿಧಾನ ಪರಿಷತ್‌ನಲ್ಲಿ ಭರವಸೆ ನೀಡಿದ್ದರು. ಆದರೆ, ಆ ಅನುದಾನ ಬರಲಿಲ್ಲ. ನಾವೆಲ್ಲರೂ ಸೇರಿ ರೂ.30 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಕೋರಿಕೆ ಸಲ್ಲಿಸಿದ್ದೆವು. ಸಂಪುಟದಲ್ಲಿ ಒಪ್ಪಿಗೆ ದೊರೆತರೂ ಬಂದಿದ್ದು ಕೇವಲ ರೂ.7 ಕೋಟಿ. ಸೋನಿಯಾ ಗಾಂಧಿ ಅವರಿಂದ ಉದ್ಘಾಟನೆಯಾದ ಈ ವಿವಿಗೆ ಕಾಂಗ್ರೆಸ್ ಸರ್ಕಾರವಾದರೂ ವಿಶೇಷ ನೆರವು ನೀಡಬೇಕು' ಎಂದು ಕೋರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.