ಮಹಿಳಾ ಸುರಕ್ಷತೆ: ಕೇಂದ್ರ, ರಾಜ್ಯಗಳಿಗೆ ನೋಟಿಸ್

7
ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು

ಮಹಿಳಾ ಸುರಕ್ಷತೆ: ಕೇಂದ್ರ, ರಾಜ್ಯಗಳಿಗೆ ನೋಟಿಸ್

Published:
Updated:
ಮಹಿಳಾ ಸುರಕ್ಷತೆ: ಕೇಂದ್ರ, ರಾಜ್ಯಗಳಿಗೆ ನೋಟಿಸ್

ನವದೆಹಲಿ (ಪಿಟಿಐ): ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸುವ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳಿಗೆ ಬುಧವಾರ ನೋಟಿಸ್ ಜಾರಿ ಮಾಡಿದೆ.ಜೊತೆಗೆ, ಅತ್ಯಾಚಾರ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವ ಸಂಬಂಧ ತ್ವರಿತ ವಿಚಾರಣೆ ನ್ಯಾಯಲಯಗಳನ್ನು ಸ್ಥಾಪಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲೂ ಅದು ಸಮ್ಮತಿಸಿದೆ.ದೆಹಲಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಳಿಕ, ವಕೀಲರಾದ ಮುಕುಲ್ ಕುಮಾರ್ ಅವರು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಮತ್ತು ರಂಜನ್ ಗೊಗೊಯ್ ಅವರನ್ನೊಳಗೊಂಡ ನ್ಯಾಯಪೀಠ, ಮಹಿಳೆಯರಿಗೆ ಭದ್ರತೆ ಒದಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ  ಸೂಚಿಸಿತು.ಅತ್ಯಾಚಾರ, ಲೈಂಗಿಕ ಕಿರುಕುಳ, ಹಲ್ಲೆ ಸೇರಿದಂತೆ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸಲು ಮತ್ತು ಮಹಿಳೆಯರ ವಿರುದ್ಧದ  ತಾರತಮ್ಯಗಳ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ರೂಪಿಸಿರುವ ನಿಯಮಗಳನ್ನು ಜಾರಿಗೊಳಿಸಲು ಪ್ರತಿ ಪಟ್ಟಣದಲ್ಲೂ ಮಹಿಳಾ ಪೊಲೀಸ್ ಠಾಣೆ ಸ್ಥಾಪಿಸಬೇಕು ಎಂದು ಕುಮಾರ್ ಅರ್ಜಿಯಲ್ಲಿ ಕೋರಿದ್ದರು.ವಿಚಾರಣೆಗೆ ಸಮ್ಮತಿ: ಈ ಮಧ್ಯೆ, ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಪಿಐಎಲ್ ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಲು ಮುಖ್ಯ  ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ನ್ಯಾಯಪೀಠ ನಿರ್ಧರಿಸಿದೆ.  ನಿವೃತ್ತ ಐಎಎಸ್ ಅಧಿಕಾರಿ ಪ್ರಮೀಳಾ ಶಂಕರ್ ಅವರು ಈ ಅರ್ಜಿ ಸಲ್ಲಿಸಿದ್ದಾರೆ.ತ್ವರಿತ ನ್ಯಾಯಾಲಯಗಳ ಸ್ಥಾಪನೆ ಜೊತೆಗೆ ಮಹಿಳೆಯರ ಸುರಕ್ಷತೆ ಖಾತ್ರಿ ಪಡಿಸುವ ಕುರಿತಾಗಿಯೂ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಪ್ರಮೀಳಾ ಶಂಕರ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವ ಸಂಸತ್ ಸದಸ್ಯರು ಹಾಗೂ ಶಾಸಕರನ್ನು ಅಮಾನತುಗೊಳಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.ಈ ದೇಶದಲ್ಲಿ ಪ್ರತಿ 40 ನಿಮಿಷಕ್ಕೊಮ್ಮೆ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದೆ.

ಆದರೆ ಅವುಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿಲ್ಲ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದೂ ಅರ್ಜಿದಾರರು ಮನವಿ ಮಾಡಿದ್ದಾರೆ. ಮಹಿಳೆಯರ ಹಾಗೂ ಮಕ್ಕಳ ವಿರುದ್ಧ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳನ್ನು ಮಹಿಳಾ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಬೇಕು, ಮಹಿಳಾ ನ್ಯಾಯಾಧೀಶರಿಂದ ವಿಚಾರಣೆ ನಡೆಸಬೇಕು ಎಂದು ಅರ್ಜಿಯಲ್ಲಿ  ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry