ಮಹಿಳಾ ಸ್ವಾವಲಂಬನೆಗೆ ಯೋಜನೆ

7

ಮಹಿಳಾ ಸ್ವಾವಲಂಬನೆಗೆ ಯೋಜನೆ

Published:
Updated:

ಚಿಕ್ಕಮಗಳೂರು: ಮಹಿಳೆಯರ ಸಬಲೀಕರಣಕ್ಕಾಗಿ  ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವಿನೂತನ ಕಾರ್ಯಕ್ರಮಗಳ ಮೂಲಕ  ಗ್ರಾಮೀಣಾ ಮಹಿಳೆಯರ ಏಳಿಗೆ ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಯೋಜನೆ ಹಮ್ಮಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ಹೇಳಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ  ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಬಡತನ ರೇಖೆಗಿಂತ ಕೆಳಮಟ್ಟದ ವ್ಯಾಪ್ತಿಯಲ್ಲಿರುವ ಅಸಹಾಯಕ, ನಿರ್ಗತಿಕ, ನಿರುದ್ಯೋಗಿ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಉದ್ದೇಶದಿಂದ ರಾಜ್ಯವ್ಯಾಪ್ತಿ ಬಾವಿ ಮಹಿಳಾ ಉದ್ಯಮಿಗಳನ್ನು ಗುರುತಿಸಿ ಸ್ವಾವಲಂಬನೆಗಾಗಿ ನಿಗಮ ಹಮ್ಮಿಕೊಂಡಿರುವ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ  ರಾಜ್ಯದಾದ್ಯಂತ  ಫೆಬ್ರವರಿ ತಿಂಗಳಿನಿಂದ  ಗ್ರಾಮ ವಾಸ್ತವ್ಯದ ಪ್ರವಾಸವನ್ನು ಗುಲ್ಬರ್ಗ ಜಿಲ್ಲೆಯಿಂದ ಆರಂಭಿಸಲಾಗುವುದೆಂದು ಎಂದರು.ಸದ್ಯ 48 ಕೋಟಿ ರುಪಾಯಿ ನಿಧಿ ಹೊಂದಿರುವ ರಾಜ್ಯ ಮಹಿಳಾಭಿವೃದ್ಧಿ ನಿಗಮದ ವತಿಯಿಂದ ರಾಜ್ಯದಾದ್ಯಂತ ಮಹಿಳೆಯರಿಗೆ ವಿವಿಧ ತರಬೇತಿ, ಉದ್ಯೋಗ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದು, ನಿಗಮ ಗುರುತಿಸಿರುವ ಒಟ್ಟು 101 ಆದಾಯ ಉತ್ಪನ್ನ ಉದ್ಯೋಗಗಲ್ಲಿ ಯಾವುದಾದರೊಂದು ಉದ್ಯೋಗ ಕೈಗೊಳ್ಳಲು ನಿಗಮ ಬಿಪಿಎಲ್ ಪಟ್ಟಿ ವ್ಯಾಪ್ತಿಗೆ ಸೇರಿರುವ ಮಹಿಳೆಯರಿಗೆ 1ಲಕ್ಷದ ವರೆಗೆ ಸಾಲಸೌಲಭ್ಯ ನೀಡುತ್ತಿದೆ ಎಂದರು.ಉನ್ನತ ವ್ಯಾಸಂಗ ಮಾಡಿ ಆರ್ಥಿಕ ಹೊರೆಯಿಂದಾಗಿ ಸರಿಯಾದ ತರಬೇತಿ ಪಡೆಯಲಾಗದ ಬಿಪಿಎಲ್ ಪಟ್ಟಿಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಪರೀಕ್ಷೆಗಳ ಪೂರ್ವ ಸಿದ್ದತೆಗಾಗಿ ಉಚಿತ ತರಬೇತಿ ನೀಡುವ ಯೋಜನೆಯನ್ನು ನಿಗಮ ಹಮ್ಮಿಕೊಂಡಿದ್ದು ಸರ್ಕಾರದ ಅನುಮೋದನೆ ನಂತರ ತರಬೇತಿ  ಪ್ರಾರಂಭಿಸಲಾಗುವುದು ಎಂದರು.    ದೇವದಾಸಿರ ಆರ್ಥಿಕ ಕಲ್ಯಾಣಕ್ಕಾಗಿ 10ಸಾವಿರ ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯ ಯೋಜನೆ ಹಾಗೂ ಸಮಾಜ ನಿರ್ಲಕ್ಷಿತ ಮಂಗಳಮುಖಿಯರ ಕಲ್ಯಾಣಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಪ್ರಮಾಣ ಪತ್ರಹೊಂದಿದ ಮಂಗಳಮುಖಿಯರಿಗೆ ಗುರುತುಪತ್ರ ನೀಡುವ ಹಾಗೂ ಮಾಸಾಶನ, ಸಾಲಸೌಲಭ್ಯದ ಸವಲತ್ತು ನೀಡುವ 2 ಕೋಟಿಗಳ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.ಚಿಕ್ಕಮಗಳೂರಿನಲ್ಲಿ 30 ಲಕ್ಷ ಮೊತ್ತದ ಯೋಜನೆಯಡಿಯಲ್ಲಿ 204 ಮಹಿಳೆಯರಿಗೆ ಸ್ವದ್ಯೋಗ, ತರಬೇತಿ ಹಾಗೂ ಸಾ ಸೌಲಭ್ಯ ನೀಡಲಾಗುವುದೆಂದ ಅವರು ಸದ್ಯ 110 ಮಹಿಳೆಯರು ಸದರಿ ವರ್ಷ ನಿಗಮದಿಂದಪ್ರಯೋಜನಪಡೆಯಲಿದ್ದಾರೆಂದರು. ಇದರೊಂದಿಗೆ ನಿಗಮ, ವಿದ್ಯಾವಂತ ಬಡ ಮಹಿಳೆಯರಿಗೆ ಉನ್ನತ ವ್ಯಾಸಂಗ ಮಾಡಲು ಆರ್ಥಿಕ ನೆವು ಒದಗಿಸಲು ಮಹಿಳಾ ಶಿಕ್ಷಣ ಅಭಿಯಾನ್ ಯೋಜನೆ, ಮಹಿಳೆಯರು ಸ್ವ ಉದ್ಯೋಗದ ಮೂಲಕ ತಯಾರಿಸುವ ಉತ್ಪನ್ನಗಳ ಮಾರಾಟ ಮತ್ತು ತರಬೇತಿಗಾಗಿ ರಾಜ್ಯದ 4 ಜಿಲ್ಲೆಗಳಲ್ಲಿ ಮಹಿಳಾ ಭವನ ನಿರ್ಮಾಣ ಯೋಜನೆ. ಮಹಿಳೆಗೆ ಉದ್ಯಮಕ್ಕೆ ನೆರವಾಗಲು ಮಹಿಳಾ ರೋಜ್‌ಗಾರ್ ಯೋಜನೆ, ತೀರಾ ಅಸಹಾಯಕ, ನಿರ್ಗತಿಕ ಮಹಿಳೆಯರ ಕಲ್ಯಾಣಕ್ಕಾಗಿ ಮರುಪಾವತಿ ಇಲ್ಲದ ಆರ್ಥಿಕ ಸೌಲಭ್ಯ ಕಲ್ಪಿಸಲು ಮಹಿಳಾ ಸುರಕ್ಷಾ ಯೋಜನೆ, ಕೃಷಿ, ಹೈನುಗಾರಿಕೆ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಗೋಮಾತಾ ಯೋಜನೆ, 45ವರ್ಷ ಮೇಲ್ಪಟ್ಟ ಸಣ್ಣಪುಟ್ಟ ವ್ಯಾಪಾರಿ ಮಹಿಳೆಯರಿಗೆ ಸಾಲಸೌಲಭ್ಯಕ್ಕಾಗಿ ಮಹಿಳಾ ಜೀವನ್ ಸಾಥಿಯೋಜನೆ ಹಾಗೂ ಅನಾಥ, ಭಿಕ್ಷಾಟನೆ ಮೂಲಕ ಜೀವನ ನಡೆಸುವಂತಹ ಮಹಿಳೆಯರ ಕಲ್ಯಾಣಕ್ಕಾಗಿ ‘ಅಂತ್ಯೋದಯ’ ದಂತಹ ಹತ್ತಾರು ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕಾಗಿ  ಯೋಜನೆಗಳನ್ನು ಸರ್ಕಾರದ ಮುಂದಿಟ್ಟಿದ್ದು ಪ್ರತಿ ಯೋಜನೆಗೆ 2 ಕೋಟಿಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು, ಈ ಯೋಜನೆಗಳ ಮೂಲಕ ರಾಜ್ಯದ ಅಸಹಾಯಕ ಮಹಿಳೆಯರ ಏಳಿಗೆಯ ಹಿನ್ನೆಲೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡಲಾಗುವುದು ಎಂದರು.ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗಟ್ರೂಡ್ ವೇಗಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry