ಮಹಿಳಾ ಹಾಕಿ: ಕರ್ನಾಟಕ ನಿರ್ಗಮನ ಫೈನಲ್‌ಗೆ ಮುಂಬೈ, ಹರಿಯಾಣ

7

ಮಹಿಳಾ ಹಾಕಿ: ಕರ್ನಾಟಕ ನಿರ್ಗಮನ ಫೈನಲ್‌ಗೆ ಮುಂಬೈ, ಹರಿಯಾಣ

Published:
Updated:
ಮಹಿಳಾ ಹಾಕಿ: ಕರ್ನಾಟಕ ನಿರ್ಗಮನ ಫೈನಲ್‌ಗೆ ಮುಂಬೈ, ಹರಿಯಾಣ

ಬೆಂಗಳೂರು: ಆತಿಥೇಯ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಮಹಿಳಾ ಹಾಕಿ ಸಂಸ್ಥೆ ಆಶ್ರಯದ 56ನೇ ಐಎಚ್‌ಎಫ್ ರಾಷ್ಟ್ರೀಯ ಸೀನಿಯರ್ ಮಹಿಳಾ ಹಾಕಿ ಚಾಂಪಿಯನ್‌ಷಿಪ್ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿ ಚಾಂಪಿಯನ್‌ಷಿಪ್‌ನಿಂದ ನಿರ್ಗಮಿಸಿದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ  ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಪ್ರಬಲ ಮುಂಬೈ ತಂಡದವರು ಕರ್ನಾಟಕ ತಂಡವನ್ನು 3-1 ಗೋಲುಗಳಿಂದ ಸೋಲಿಸಿದರು.

ಉತ್ತಮ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮುಂಬೈ ತಂಡದವರು ಪಂದ್ಯದ ಉತ್ತರಾರ್ಧದಲ್ಲಿ ಮೇಲುಗೈ ಸಾಧಿಸಿದರು. ವಿರಾಮದ ವೇಳೆಗೆ 2-0 ಗೋಲಿನಿಂದ ಮುಂದಿದ್ದ ವಿಜಯಿ ತಂಡದ ರಂಜಿತಾ ಸನಾಸಮ್ (17ನೇ ನಿಮಿಷ), ರೀನಾ ಎಕ್ಕಾ (33ನೇ ನಿಮಿಷ), ಸರಿತಾ ಹನುಮಾನ್ (50ನೇ ನಿಮಿಷ) ಹಾಗೂ ಎದುರಾಳಿ ತಂಡದ ಮುನಿರತ್ನಮ್ಮ (56ನೇ  ನಿಮಿಷ) ಗೋಲು ತಂದಿತ್ತರು.

ಅನುಭವಿ ಮುಂಬೈ ತಂಡಕ್ಕೆ ಮೊದಲ ಗೋಲು ‘ಪೆನಾಲ್ಟಿ’ ಮೂಲಕ ಬಂತು. 17ನೇ ನಿಮಿಷದಲ್ಲಿ ನಿಶಿ ಚೌದರಿ ಅವರು ಹೊಡೆದ ಚೆಂಡನ್ನು ಕರ್ನಾಟಕದ ರಕ್ಷಣಾ ಆಟಗಾರ್ತಿಯೊಬ್ಬರು ಕಾಲಲ್ಲಿ ತಡೆದಿದ್ದರಿಂದ ಅಂಪೈರ್ ಪೆನಾಲ್ಟಿ ನೀಡಿದರು. ಪೆನಾಲ್ಟಿ ಅವಕಾಶವನ್ನು ಯಶಪಡಿಸಿಕೊಂಡ ರಂಜಿತಾ ತಮ್ಮ ತಂಡದ ಗೋಲಿನ ಖಾತೆ ತೆರೆದರು.

ಕರ್ನಾಟಕದ ನಾಲ್ವರು ಪ್ರಮುಖ ಆಟಗಾರ್ತಿಯರಾದ ರಂಜಿತಾ (ಗೋಲಿ), ಮಿಡ್‌ಫೀಲ್ಡರ್ ರಕ್ಷಿತಾ, ಮುನ್ಪಡೆಯಲ್ಲಿದ್ದ ಕುಲಸಂಬಿ, ಸಯಿರಾ ಬಾನು ಅವರಿಂದ ಉತ್ತಮ ಪ್ರದರ್ಶನ ಕಂಡುಬರಲಿಲ್ಲ. ಈ ನಾಲ್ವರು ಆಟಗಾರ್ತಿಯರು ಹಾಕಿ ಇಂಡಿಯ ದೆಹಲಿಯಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರಕ್ಕೆ ಗೈರು ಹಾಜರಾಗಿ ವಿವಾದಕ್ಕೆ ಒಳಗಾಗಿದ್ದಾರೆ.

ಇದೇ ಚಾಂಪಿಯನ್‌ಷಿಪ್‌ನ ಇನ್ನೊಂದು ಸೆಮಿಫೈನಲ್‌ನಲ್ಲಿ ಹರಿಯಾಣ ತಂಡದವರು 7-1 ಗೋಲುಗಳಿಂದ ಭೋಪಾಲ್ ತಂಡವನ್ನು ಮಣಿಸಿದರು.

ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ಭಾರತಿ (2), ರಮ್‌ನೀಕ್ (2), ಜತೀಂದರ್, ನವನೀತ್ (2), ಹಾಗೂ ಎದುರಾಳಿ ತಂಡದ ಬಲ್ವೀದರ್ ಮೆಹ್ರಾ ಚೆಂಡನ್ನು ಗುರಿಮುಟ್ಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry