ಬುಧವಾರ, ಮೇ 12, 2021
24 °C

`ಮಹಿಳೆಯರನ್ನು ಗೌರವದಿಂದ ಕಾಣಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಅವರ ಸಾಧನೆಯಿಂದಾಗಿ ಇತರರಿಗೆ ಸಾಧನೆ ಮಾಡಬೇಕೆಂಬ ಸ್ಫೂರ್ತಿ ಹೆಚ್ಚಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ತಂದೆ ತಾಯಂದಿರು ಪ್ರಮುಖ ಪಾತ್ರ ವಹಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯಾರು ಹೇಳಿದರು.ತಾಲ್ಲೂಕಿನ ಮುತ್ತಗಿ ಗ್ರಾಮದ ಸಿದ್ಧರಾಮೇಶ್ವರ ದೇವಸ್ಥಾನದ ಆವರಣದಲ್ಲಿ 1008 ಸುಮಂಗಲಿಯರ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಸಾನಿಧ್ಯ ವಹಿಸಿದ್ದ ಅವರು ಆಶೀರ್ವಚನ ನೀಡಿದರು.

ವೀರಶೈವ ಧರ್ಮ ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರವು ಸಹ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಧರ್ಮ ಸಂಸ್ಕಾರ ನೀಡಬೇಕು. ನಮ್ಮ ಆಚಾರ ವಿಚಾರ ಪರಂಪರೆಗಳನ್ನು ತಿಳಿಸಿಕೊಡಬೇಕು. ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.ಸಮಾಜದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಬೇಕು. ಪ್ರಾಚೀನ ಕಾಲದಿಂದಲು ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಿರುವುದನ್ನು ನಾವು ತಿಳಿದಿರಬೇಕು. ಮಹಿಳೆ ಸಂಸ್ಕಾರಗಳನ್ನು ಅರಿತಾಗ ಕುಟುಂಬದಲ್ಲಿ ಸಂತೋಷ ಹೆಚ್ಚಳವಾಗಿ ಆ ಕುಟುಂಬ ಮಾದರಿ ಕುಟುಂಬವಾಗಿರುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಹಿಳೆಯನ್ನು ಗೌರವಿಸುವಂತಾಗಬೇಕು ಎಂದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ಸೋಲು ಗೆಲವು ಇದ್ದೇ ಇರುತ್ತದೆ. ಅಧಿಕಾರ ಕ್ಷಣಿಕವಾದುದು. ಸಮಾಜ ಅಪೇಕ್ಷ ಪಡುವ ರೀತಿಯಲ್ಲಿ ಸೇವೆಯಲ್ಲಿ ಮುಂದಾದಾಗ ಜನಮಾನಸದಲ್ಲಿ ಉಳಿಯುತ್ತೇವೆ. ಅಂತಹ ಕಾರ್ಯ ಮಾಡಲು ನಾನು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.ಬದುಕಿನಲ್ಲಿ ಯಾವುದು ಶಾಸ್ವತವಲ್ಲ ಎಂಬ ಸಂದೇಶ ನಮ್ಮ ಋಷಿಮುನಿಗಳಿಂದ ನಾವು ತಿಳಿದಿದ್ದೇವೆ. ಅವರ ತಪ್ಪಸ್ಸಿನ ಫಲದಿಂದ ನಮಗೆ ಉನ್ನತ ಸಂಸ್ಕೃತಿ ದೊರೆತಿದೆ. ಅದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಬಾಗಲಕೋಟೆ ಬಿಡಿಎ ಮಾಜಿ ಅಧ್ಯಕ್ಷ ಜಿ.ಎಸ್.ಪಾಟೀಲ, ಬೆಂಗಳೂರಿನ ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯರು, ಮುತ್ತಗಿಯ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿದರು. ಬಬಲೇಶ್ವರದ ಡಾ.ಮಹಾ ದೇವ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ನೀಲಕಂಠ ಶಿವಾಚಾರ್ಯರು, ರುದ್ರಮುನಿ ಶಿವಾಚಾರ್ಯರು, ಭೃಂಗೀಶ್ವರ ಶಿವಾಚಾರ್ಯರು, ಪ್ರಭುಕುಮಾರ ಶಿವಾ ಚಾರ್ಯರು, ವೀರಗಂಗಾಧರ ಶಿವಾಚಾರ್ಯರು, ಶಿವಕುಮಾರ ಸ್ವಾಮೀಜಿ, ಸಂಗನಬಸವ ದೇವರು, ನಾನಾಗೌಡ ಬಿರಾದಾರ, ಶಿವನಗೌಡ ರಾಯಗೊಂಡ, ಆರ್.ಎಸ್.ಪಾಟೀಲ, ಚಂದನಗೌಡ ಪಾಟೀಲ ಮುಂತಾ ದವರು ಉಪಸ್ಥಿತರಿದ್ದರು.

ಪ್ರೇಮಕುಮಾರ ಮ್ಯೋಗೇರಿ ಸ್ವಾಗತಿಸಿದರು. ಗಿರೀಶ ಬಿರಾದಾರ ನಿರೂಪಿಸಿದರು. ಸಂಗನಗೌಡ ರಾಯಗೊಂಡ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.