ಮಂಗಳವಾರ, ಮೇ 18, 2021
30 °C

ಮಹಿಳೆಯರಲ್ಲಿ ಕಾನೂನು ಪ್ರಜ್ಞೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪ್ರತಿಯೊಬ್ಬರ ಬಳಿ ದಿವ್ಯ ಚೇತನ ಅಡಗಿದೆ. ಅದನ್ನು ಜಾಗೃತಗೊಳಿಸಿಕೊಂಡಾಗ ಮಾತ್ರ ಉದ್ಧಾರ ಸಾಧ್ಯ ಎಂದು ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠದ ನ್ಯಾಯಾಧೀಶ ಎಚ್. ಬಿಳ್ಳಪ್ಪ ಅಭಿಪ್ರಾಯಪಟ್ಟರು.ನಗರದ ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಯ ಮಹಿಳೆಯರ ಸ್ಥಿತಿಗತಿ ಕುರಿತ ಸಾಕ್ಷ್ಯ ಚಿತ್ರ ಬಿಡುಗಡೆ ಹಾಗೂ ಗುಂಪು ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣದ ಕೊರತೆ, ಸರಿಯಾದ ಜ್ಞಾನ ಇಲ್ಲದಿರುವುದು, ಅಂದಃಶ್ರದ್ಧೆಯಿಂದಾಗಿ ಮಹಿಳೆಯರು ಬದುಕಿನ ಎಲ್ಲ ಅವಕಾಶಗಳಿಂದ ವಂಚಿತರಾಗಿದ್ದಾರೆ. ದೃಷ್ಟಿ ಇಲ್ಲದವರು ಕುರುಡರಾಗಿದ್ದಾರೆ ನಿಜ. ಆದರೆ ದೃಷ್ಟಿ ಇದ್ದವರೂ ಕುರುಡರಂತೆ ವರ್ತಿಸುತ್ತಿರುವುದರಿಂದ ಸಮಾಜದಲ್ಲಿ ಈ ತರತಮ ನೀತಿ ಇನ್ನೂ ಜೀವಂತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಮನುಷ್ಯರೆಲ್ಲರೂ ಒಂದೇ. ಎಲ್ಲರಿಗೆ ನೆಲ, ಜಲ, ಗಾಳಿ ಸರಿಸಮಾನವಾಗಿ ದೊರೆಯಬೇಕು ಎಂಬುದು ಸಂವಿಧಾನದ ಆಶಯ. ಆದರೆ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಕಾನೂನಿನ ವಿವೇಚನೆ ಇಲ್ಲದೆ ಬದುಕುತ್ತಿರುವುದರಿಂದ ಮಹಿಳೆಯರಿಗೆ ಇಂದಿಗೂ ಸ್ವಾತಂತ್ರ್ಯ, ಸಮಾನತೆ ಎಂಬುದು ಗಗನ ಕುಸುಮವಾಗಿದೆ ಎಂದು ಅಭಿಪ್ರಾಯಪಟ್ಟರು.ಅಸಾಯಕರಿಗೆ ಸಹಾಯಸ್ತ ಚಾಚುವುದೇ ನಿಜವಾದ ಧರ್ಮ ಎಂದು ಸಂವಿಧಾನ ಹೇಳುತ್ತದೆ. ಅದ್ಭುತವಾದ ಸಂವಿಧಾನದ ಶಕ್ತಿಯನ್ನು ಕೈಯಲ್ಲಿ ಹಿಡಿದು ಅದರ ಸದುಪಯೋಗ ಪಡೆದುಕೊಳ್ಳದಿರುವುದರಿಂದ ಮಹಿಳೆಯರ ಸ್ಥಿತಿ ಅಯೋಮಯವಾಗಿ ಪರಿಣಮಿಸಿದೆ. ಇದಕ್ಕೆ ಕಾನೂನು ಅರಿವು ಮುಖ್ಯ ಎಂದು ವಿವರಿಸಿದರು.ಗುಲ್ಬರ್ಗ ಪ್ರಾದೇಶಿಕ ಆಯುಕ್ತೆ ರತ್ನಪ್ರಭಾ ಮಾತನಾಡಿ, ಸ್ವಾವಲಂಬನೆಯೇ ಮಹಿಳೆಗೆ ಶಕ್ತಿಯನ್ನು ತಂದುಕೊಡುತ್ತದೆ. ಆದರೆ ಅದೆ ವೇಳೆಗೆ ಕಾನೂನು ತಿಳಿವಳಿಕೆ ಕೂಡ ಅಗತ್ಯ ಎಂದು ಪ್ರತಿಪಾದಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾರುತಿರಾವ ಡಿ. ಮಾಲೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಉಪೇಂದ್ರಚಾರ್ ಸ್ವಾಗತಿಸಿದರು. ಆನಂದ ಚಿಂಚೂರ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕರಾದ ಅಪರ್ಣಾ ಜಿ. ಮಾಲೆ, ಅಂಬಿಕಾ ಶೆಟಕಾರ ವೇದಿಕೆಯಲ್ಲಿದ್ದರು.ನಂತರ ಡಾ. ಛಾಯಾ ದೇಗಾಂವಕರ್, ಡಾ. ಉಷಾ ಶರ್ಮಾ ಪಾಟೀಲ, ಕೆ. ನೀಲಾ, ರತ್ನಾ ಕಲಂದಾನಿ, ಅನುರಾಧಾ ದೇಸಾಯಿ, ಡಾ. ಕೆ.ಎಸ್. ಮಾಲಿಪಾಟೀಲ,  ಡಾ. ನುಸರತ್ ಫಾತಿಮಾ, ಡಾ. ರೇಣುಕಾ ಬಗಾಲೆ, ಡಾ. ಸಬೀಷ್ ಸುಲ್ತಾನ, ಎಸ್.ಬಿ. ಅವದಾನಿ, ಬಿ.ಕೆ. ವಿಜಯಾ, ಉಷಾ ಲಾಹೋಟಿ ಮತ್ತಿತರರು ಮಹಿಳೆಯರ ಸ್ಥಿತಿ ಗತಿ ಕುರಿತು ಗುಂಪು ಚರ್ಚೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.