ಮಹಿಳೆಯರಲ್ಲಿ ಹೃದಯಾಘಾತ

7

ಮಹಿಳೆಯರಲ್ಲಿ ಹೃದಯಾಘಾತ

Published:
Updated:

ಕೆಲವು ವರ್ಷಗಳವರೆಗೂ ಹೃದಯ ಸಂಬಂಧಿ ಸಮಸ್ಯೆಗಳು ಕೇವಲ ಪುರುಷರಿಗೆ ಮಾತ್ರ ಸಂಬಂಧಿಸಿದ್ದು ಎಂದು ಭಾವಿಸಲಾಗಿತ್ತು. ಮಹಿಳೆಯರಿಗೆ ಬರಬಹುದಾದ ಅತಿದೊಡ್ಡ ಅನಾರೋಗ್ಯ ಸಮಸ್ಯೆ ಎಂದರೆ ಸ್ತನ ಕ್ಯಾನ್ಸರ್ ಎಂಬ ನಂಬಿಕೆಯೂ ಇತ್ತು. ಆದರೆ, ಅಂಕಿ ಅಂಶಗಳ ಪ್ರಕಾರ ಇದು ತಪ್ಪು ಎಂಬುದು ದೃಢಪಟ್ಟಿದೆ. ಮಹಿಳೆಯರಿಗೆ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ.ಅಮೆರಿಕದಲ್ಲಿ ನಡೆದ ಅಧ್ಯಯನದ ಅನುಸಾರ ಹೃದಯಾಘಾತವು ಯುವ ಮಹಿಳೆಯರಲ್ಲಿ ವಯಸ್ಕ ಪುರುಷರಿಗಿಂತಲೂ ಹೆಚ್ಚು ಕಾಣಿಸಿಕೊಂಡಿದೆ. ಆತಂಕ ಮೂಡಿಸುವ ಅಂಶವೆಂದರೆ ಹೃದಯದ ಪರಿಶೀಲನೆ ಡಯಾಗ್ನೋಸಿಸ್ ಪ್ರಕ್ರಿಯೆಯು ಮಹಿಳೆಯರಲ್ಲಿ ವಿಳಂಬವಾಗಿ ನಡೆಯಲಿದ್ದು, ಚಿಕಿತ್ಸೆಯನ್ನು ಸಕಾಲಕ್ಕೆ ತೆಗೆದುಕೊಳ್ಳುವುದಿಲ್ಲ.ನಮ್ಮ ಸಮಾಜದಲ್ಲಿ ಮಹಿಳೆಯರು ಸಾಂಪ್ರದಾಯಿಕವಾಗಿ ಮನೆಯ ಬೆನ್ನೆಲುಬಾಗಿದ್ದು, ಸಂಸಾರದ ಆರೋಗ್ಯವನ್ನು ನಿಭಾಯಿಸಿದರೆ, ಪುರುಷರು ಹೊರಗಡೆ ದುಡಿಯುತ್ತಾರೆ. ಆದರೆ, ವೈದ್ಯಕೀಯ ತಪಾಸಣೆ ಅವರಿಗೆ ಸಮರ್ಪಕವಾಗಿ ಸಿಗುವುದಿಲ್ಲ. ಸಮಸ್ಯೆ ಗಂಭೀರವಾಗಿರುವ ಹಂತ ತಲುಪಿದಾಗಷ್ಟೇ ತಪಾಸಣೆಗೆ ಬರುವುದು ಮಾಮೂಲು.ಹೃದ್ರೋಗವನ್ನು ಪರಿಗಣಿಸಿದರೆ ಸಮಸ್ಯೆಯನ್ನು ಬೇಗನೇ ಗುರುತಿಸುವುದು ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಅಂತರರಾಷ್ಟ್ರೀಯ ಮಟ್ಟದ ಅಧ್ಯಯನದ ಅನುಸಾರ ಸ್ತನ ಕ್ಯಾನ್ಸರ್‌ಗಿಂತಲೂ ಹೃದಯಾಘಾತ ಮಹಿಳೆಯರನ್ನು ಆರು ಪಟ್ಟು ಹೆಚ್ಚು ಬಲಿ ಪಡೆಯಲಿದೆ.ಭಾರತದಲ್ಲಿ ಮಹಿಳೆಯರಲ್ಲಿ ಹೃದಯಾಘಾತ ಪ್ರಕರಣಗಳ ಬಗೆಗೆ ನಿರ್ದಿಷ್ಟ ಅಂಕಿಅಂಶಗಳು ಲಭ್ಯವಿಲ್ಲ. ಹೃದಯಾಘಾತ ಪೀಡಿತ ಮಹಿಳೆಯರ ಸಂಖ್ಯೆ ಪುರುಷರಿಗೆ ಹೋಲಿಸಿದರೆ ಕಡಿಮೆ. ಆದರೆ, ಇದರ ಪ್ರಮಾಣ ಮಾತ್ರ ಏರಿಕೆಯಾಗುತ್ತಿದೆ.ಪುರುಷರಿಗೆ ಇರುವಂತೆ ಮಹಿಳೆಯರಲ್ಲಿಯೂ ಸಿಎಡಿ (ಕರೊನರಿ ಅರ್ಟರಿ ಡಿಸೀಸ್) ಪ್ರಮಾಣ ಹೆಚ್ಚು. ಮಧುಮೇಹ ಪೀಡಿತ ಮಹಿಳೆಯರಂತೂ ಯುವ ವಯಸ್ಸಿನಲ್ಲೇ ಈ ಸಮಸ್ಯೆಗೆ ತುತ್ತಾಗಬಹುದು.ಹೃದಯ ಮತ್ತು ಇತರ ಭಾಗಗಳಿಗೆ ರಕ್ತ ಪೂರೈಸುವ ನಾಳದಲ್ಲಿ ಪ್ಲೇಕ್ ಸಂಗ್ರಹವಾಗುವುದು ಸಿಎಡಿ ಸ್ವರೂಪ. ಪ್ಲೇಕ್ ಸಂಗ್ರಹಕ್ಕೆ ಸಾಮಾನ್ಯವಾಗಿ ಬೊಜ್ಜು ಕಾರಣವಾಗಿದ್ದು, ಕಾಲಾನಂತರದಲ್ಲಿ ಇದು ರಕ್ತದ ಚಲನೆಯನ್ನು ಸ್ಥಗಿತಗೊಳಿಸಲಿದೆ.ಪೂರ್ಣವಾಗಿ ರಕ್ತನಾಳ ಬ್ಲಾಕ್ ಆದ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಲಿದೆ. ಹೃದಯದ ವಾಲ್ವ್‌ನಲ್ಲಿ ಸೋರಿಕೆ ಇನ್ನೊಂದು ಸಮಸ್ಯೆ. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಇದು ಹೃದಯ ವೈಫಲ್ಯಕ್ಕೂ ಕಾರಣವಾಗಲಿದೆ.ಮಹಿಳೆ ಮತ್ತು ಪುರುಷರಲ್ಲಿ ಹೃದ್ರೋಗ ಡಯಾಗ್ನೋಸ್ ಮಾಡುವ ಕ್ರಮದಲ್ಲಿ ವ್ಯತ್ಯಾಸಗಳಿವೆ. ಹೃದ್ರೋಗದ ಸೂಚನೆಗಳು ಮಹಿಳೆಯರಲ್ಲಿ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಇಲ್ಲಿಯವರೆಗೂ ತಪಾಸಣೆಯ ಮಾಹಿತಿ ಅನುಸಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹೃದ್ರೋಗ ಸಮಸ್ಯೆ ಡಯಾಗ್ನೋಸ್ ಮಾಡಲು ಪ್ರತ್ಯೇಕ ಮಾನದಂಡಗಳು ಬರಲು ಇನ್ನಷ್ಟು ವರ್ಷಗಳು ಬೇಕಾಗಬಹುದು. ಹೆಚ್ಚಾಗಿ, ಮಹಿಳೆಯರಲ್ಲಿ ಅಪಾಯದ ಕೆಲ ಅಂಶಗಳು ಪುರುಷರಿಗಿಂತಲೂ ಭಿನ್ನವಾಗಿರುತ್ತವೆ.

 

ಇದರ ಪರಿಣಾಮ, ಮಹಿಳೆಯರಿಗೆ ಹೃದಯದ ಪರಿಸ್ಥಿತಿಅರ್ಥಮಾಡಿಕೊಳ್ಳುವುದು ತಪ್ಪಲಿದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಹೃದಯಾಘಾತ ಯಾವುದೇ ಸೂಚನೆ ಇಲ್ಲದೇ ದಾಳಿ ಮಾಡಲಿದೆ. ಸಾವಿನ ಪ್ರಮಾಣ ಪುರುಷರಿಗಿಂತಲೂ ಹೆಚ್ಚು ಎಂಬುದು ಗಮನಾರ್ಹ.ಹೆಚ್ಚು ಅಪಾಯದ ವಲಯವ ತಲುಪುವ ಮಹಿಳೆಯರನ್ನು ಪೂರ್ಣ ತಪಾಸಣೆಗೆ ಒಳಪಡಿಸಿ, ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೆಚ್ಚಿನ ಅಪಾಯದ ಅಂಶಗಳು ಜೀವನಶೈಲಿಗೆ ಸಂಬಂಧಿಸಿದ್ದಾಗಿವೆ. ವಯಸ್ಕ ಮಹಿಳೆಯರು ಮತ್ತು ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಇರುವ ಮಹಿಳೆಯರು ಸಹಜವಾಗಿಯೇ ಅಪಾಯದ ವಲಯದಲ್ಲಿ ಇರುತ್ತಾರೆ.ಜೀವನಶೈಲಿಯಲ್ಲಿ ಧೂಮಪಾನ, ಅನಾರೋಗ್ಯಕರವಾದ ಪಥ್ಯ, ದೈಹಿಕ ವ್ಯಾಯಾಮದ ಕೊರತೆ, ಬೊಜ್ಜು, ಮಾನಸಿಕ ಸ್ಥಿತಿ, ಅಧಿಕ ರಕ್ತದೊತ್ತಡ, ಮಧುಮೇಹ, ಅವಧಿಗೂ ಮುನ್ನ ಋತುಸ್ರಾವ, ಜನನ ನಿಯಂತ್ರಣ ಮಾತ್ರೆಗಳ ಸೇವನೆ, ಧೂಮಪಾನ ಕೂಡಾ ಕಾರಣವಾಗಬಹುದು.ಹೃದಯ ಪರಿಸ್ಥಿತಿಯನ್ನು ನಿಭಾಯಿಸಲು ಅದರ ನಿಯಂತ್ರಣ ಕ್ರಮಗಳು ಉತ್ತಮ ಮಾರ್ಗ. ಪೌಷ್ಟಿಕ ಅಹಾರ, ಹಣ್ಣುಗಳು, ತರಕಾರಿ ಮತ್ತು ಮೀನು ಸೇವನೆ ಉತ್ತಮ. ಧೂಮಪಾನದಿಂದ ದೂರ ಇರುವುದು ಸೂಕ್ತ. ದೈನಿಕ ವ್ಯಾಯಾಯ ಸಹಕಾರಿ. ವೇಗದ ನಡಿಕೆ, ಏರೋಬಿಕ್ಸ್, ಕಾರ್ಡಿಯೋ ವ್ಯಾಯಾಮವನ್ನು ಪರಿಗಣಿಸ ಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮನೆ, ಕೆಲಸದ ಸ್ಥಳ ಎರಡೂ ಕಡೆಯಿಂದ ಒತ್ತಡದಿಂದ ದೂರ ಇರುವುದು ಅಗತ್ಯ.

(ಲೇಖಕರು ಇಂಟರ್‌ವೆನ್ಷನಲ್ ಕಾರ್ಡಿಯೋಲಜಿಸ್ಟ್)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry