ಸೋಮವಾರ, ಮೇ 16, 2022
30 °C

ಮಹಿಳೆಯರಿಂದ ಇಂದು ವಿಮಾನ ಹಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೂರನೇ ವರ್ಷದ ಮಹಿಳಾ ದಿನಾಚರಣೆ ಹಾಗೂ ಭಾರತೀಯ ನಾಗರಿಕ ವಿಮಾನಯಾನದ ಶತಮಾನೋತ್ಸವದ ಅಂಗವಾಗಿ ಮಂಗಳವಾರ ಏರ್ ಇಂಡಿಯಾ, ಮಹಿಳಾ ಸಿಬ್ಬಂದಿಯನ್ನೇ ಒಳಗೊಂಡಿರುವ ವಿಮಾನಗಳ ಹಾರಾಟ ನಡೆಸಲಿದೆ.ಬೆಂಗಳೂರಿನಿಂದ ದೆಹಲಿಗೆ ಹೊರಡಲಿರುವ ಏರ್ ಇಂಡಿಯಾ 804 ಹಾಗೂ ಏರ್‌ಬಸ್ ಎ 319 ವಿಮಾನಗಳಲ್ಲಿ ಪೈಲಟ್ ಸೇರಿದಂತೆ ಬೆಂಗಳೂರು ಮೂಲದ ಆರು ಮಂದಿ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇದೇ ಸಿಬ್ಬಂದಿ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹೊರಡಲಿರುವ ಏರ್ ಇಂಡಿಯಾ 506 ವಿಮಾನದ ‘ಚುಕ್ಕಾಣಿ’ ಹಿಡಿಯಲಿದ್ದಾರೆ.ಮುಖ್ಯ ಪೈಲಟ್ ಸ್ಥಾನದಲ್ಲಿ ಕ್ಯಾಪ್ಟನ್ ವಿ.ರೂಪಾ , ಸಹ ಪೈಲಟ್ ಸ್ಥಾನದಲ್ಲಿ ಕ್ಯಾ. ನಿರಂಜನಾ ಅಶೋಕ್ ಹಾಗೂ ಕ್ಯಾಬಿನ್ ಸಿಬ್ಬಂದಿಯಾಗಿ ಮೋಹಿತಾ ಪೊನ್ನಪ್ಪ, ಸ್ನೇಹಾ ಅಣ್ಣಾಗಿರಿ, ಶ್ರುತಿ ಚೌದರಿ ಹಾಗೂ ರಿತುಪರ್ಣಾ ದಾಸ್‌ಗುಪ್ತಾ ಕರ್ತವ್ಯ ನಿರ್ವಹಿಸಲಿದ್ದಾರೆ. ಇವರೆಲ್ಲರೂ ಬೆಂಗಳೂರು ಮೂಲದವರು ಎನ್ನುವುದು ವಿಶೇಷ.ವಿಶ್ವದಲ್ಲಿಯೇ ಮೊದಲ ಬಾರಿಗೆ 1985ರಲ್ಲಿ ಅಂದಿನ ಕಲ್ಕತ್ತಾದಿಂದ ಸಿಲ್ಚಾರ್‌ವರೆಗೆ ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ವಿಮಾನ ಹಾರಾಟ ನಡೆಸುವ ಮೂಲಕ ಭಾರತೀಯ ನಾಗರಿಕ ವಿಮಾನಯಾನ ಇತಿಹಾಸ ಬರೆದಿತ್ತು. ಅಲ್ಲಿಂದ ಪ್ರತಿವರ್ಷ ಮಹಿಳಾ ದಿನಾಚರಣೆಯಂದು ಸ್ತ್ರೀಯರ ಗೌರವಾರ್ಥ ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ವಿಮಾನ ಹಾರಾಟ ನಡೆಸಲಾಗುತ್ತಿದೆ ಎಂದು ಸಂಸ್ಥೆ ಪ್ರಕಟಿಸಿದೆ.ಇದೇ ದಿನ ದೆಹಲಿಯಿಂದ ಟೊರೆಂಟೊಗೆ ಹನ್ನೊಂದು ಮಂದಿ ಮಹಿಳಾ ಸಿಬ್ಬಂದಿಯನ್ನು ಹೊತ್ತ ಅತಿ ಉದ್ದದ ವಿಮಾನ ಹಾರಲಿದೆ. ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಕಾರ್ಯದರ್ಶಿ ನಸೀಂ ಜೈದಿ ಮಂಗಳವಾರ ನವದೆಹಲಿಯಿಂದ ಟೊರೆಂಟೊಗೆ ತೆರಳಲಿರುವ ಏರ್ ಇಂಡಿಯಾ 187 ವಿಮಾನಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಇದೇ ಮೊದಲ ಬಾರಿಗೆ ಭಾರಿ ಸಂಖ್ಯೆಯ ಮಹಿಳಾ ಸಿಬ್ಬಂದಿಯನ್ನು ಹೊತ್ತು ಹಾರಲಿರುವ ವಿಮಾನ ಇದಾಗಿದೆ. ಕಳೆದ ವರ್ಷ ಮುಂಬೈನಿಂದ ನ್ಯೂಯಾರ್ಕ್‌ಗೆ ಮೊದಲಬಾರಿಗೆ ಈ ಬೃಹತ್ ವಿಮಾನವನ್ನು ಮಹಿಳಾ ಸಿಬ್ಬಂದಿ ಹಾರಿಸುವ ಮೂಲಕ ಇತಿಹಾಸ ಬರೆದಿದ್ದರು.ರಶ್ಮಿ ಮಿರಾಂಡಾ ಮುಖ್ಯ ಪೈಲಟ್ ಆಗಿದ್ದರೆ, ಸುನಿತಾ ನರೋಲಾ ಈ ಸ್ಮರಣಾತ್ಮಕ ಸಂಚಾರದ ಪ್ರಥಮ ಅಧಿಕಾರಿಯಾಗಿದ್ದಾರೆ. ಹರ್ಪೀತ್ ಸಿಂಗ್, ರಶ್ಮಿ ವರ್ಮಾ ಸುರಕ್ಷತೆ ಹಾಗೂ ಸಂಚಾರದ ಜವಾಬ್ದಾರಿ ಹೊತ್ತಿದ್ದಾರೆ.ಅಲ್ಲದೇ ಪಟ್ನಾ, ರಾಯ್ಪುರ, ನಾಗ್ಪುರ, ಲಖನೌ, ಮುಂಬೈ ಚೆನ್ನೈ, ಕೋಳಿಕೋಡ್‌ಗಳಿಂದ ಕೂಡ ಮಹಿಳಾ ಸಿಬ್ಬಂದಿ ವಿಮಾನ ಹಾರಾಟದ ನೇತೃತ್ವ ವಹಿಸಲಿದ್ದಾರೆ. ಏರ್ ಇಂಡಿಯಾ ವಿಶ್ವದಲ್ಲೇ ಅತ್ಯಧಿಕವಾದ 157 ಪೈಲಟ್‌ಗಳನ್ನು ಹಾಗೂ 5300 ಮಹಿಳಾ ಉದ್ಯೋಗಿಗಳನ್ನು ಒಳಗೊಂಡ ಕೀರ್ತಿಗೆ ಪಾತ್ರವಾಗಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.