ಮಹಿಳೆಯರಿಗೆ ಅವಕಾಶ:ಸಿಎಂ

7

ಮಹಿಳೆಯರಿಗೆ ಅವಕಾಶ:ಸಿಎಂ

Published:
Updated:
ಮಹಿಳೆಯರಿಗೆ ಅವಕಾಶ:ಸಿಎಂ

ಗಂಗಾವತಿ: ನಾಯಕತ್ವ ವಹಿಸಿಕೊಳ್ಳಲು ಮಹಿಳೆಯರು ಮುಂದೆ ಬಂದರೆ ಮುಂದಿನ ದಿನಗಳಲ್ಲಿ ಪುರುಷರೊಂದಿಗೆ ಸರಿಸಮಾನವಾದ ಅವಕಾಶಗಳನ್ನು ಮಹಿಳೆಯರಿಗೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರವಸೆ ನೀಡಿದರು.ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ವೀರಸೋಮಶೇಶ್ವರ ಶಿವಾಚಾರ್ಯ ನೇತೃತ್ವದಲ್ಲಿ ನಗರದಲ್ಲಿ ನಡೆಯುತ್ತಿರುವ ಧರ್ಮೋತ್ತೇಜಕ ದಸರಾ ಧರ್ಮ ಸಮ್ಮೇಳನ ಸಮಾರಂಭದಲ್ಲಿ ಪಾಲ್ಗೊಂಡು ಗುರುವಾರ ಮಾತನಾಡಿದರು.ಈ ಹಿಂದೆ ನಾನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವನಿದ್ದಾಗ ಶೇ, 33ರಷ್ಟಿದ್ದ ಮಹಿಳಾ ಮೀಸಲಾತಿಯನ್ನು ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಶೇ, 50ಕ್ಕೆ ಏರಿಸಿ ನಿರ್ಧಾರ ಕೈಗೊಳ್ಳಲಾಗಿತ್ತು. ಬಳಿಕದ ದಿನಗಳಲ್ಲಿ ರಾಜ್ಯ ಸರ್ಕಾರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಶೇ, 50ರಷ್ಟು ಮೀಸಲಾತಿ ತಂದಿದೆ. ಮೀಸಲಾತಿ ಸೌಲಭ್ಯವಿಲ್ಲದೆಯೂ ಸಾಮಾನ್ಯ ಕ್ಷೇತ್ರದಿಂದ ಸ್ಪಧಿಸಿ ಮಹಿಳೆ ತನ್ನ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕಿದೆ ಎಂದರು.ಹಿಂದುಳಿದ ಕೊಪ್ಪಳ ಸೇರಿದಂತೆ ಒಟ್ಟು ಏಳು ವೈದ್ಯಕೀಯ ಕಾಲೇಜುಗಳಿಗೆ ಗುಲ್ಬರ್ಗದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ದೊರೆತಿದೆ. ಅತಿ ತ್ವರಿತವಾಗಿ ಕೊಪ್ಪಳದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು.ಕಳೆದ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸಿಂಗಾಟಾಲೂರು ಏತ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ ಚಾಲನೆ ನೀಡಿದೆ. ಹಾಗೆಯೆ ಕೃಷ್ಣ ಬಿ ಸ್ಕೀಂ ಸೇರಿದಂತೆ ಕೊಪ್ಪಳ ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಶೀಘ್ರ ನೀರಾವರಿ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.ಬಡವ-ಬಲ್ಲಿದ, ಪುರುಷ-ಮಹಿಳೆ ಮೊದಲಾದ ತಾರತಮ್ಯಗಳನ್ನು ನಿವಾರಿಸುವ ವೈಜ್ಞಾನಿಕ ಹಾಗೂ ಅಷ್ಟೆ ಸ್ವಾಭಾವಿಕ ದೃಷ್ಟಿಕೋನ ವೀರಶೈವ ಧರ್ಮಕ್ಕಿದೆ. ಎಲ್ಲ ಜಾತಿ ಜನಾಂಗಗಳನ್ನು ಸೌಹಾರ್ದದ ನೆಲೆಯಲ್ಲಿ ರಂಭಾಪುರಿ ಕರೆದುಕೊಂಡು ಹೋಗುವ ಕಾರ್ಯ ಮಾಡುತ್ತಿದೆ.ಕೇವಲ ಧರ್ಮ ಮತ್ತು ಧಾರ್ಮಿಕತೆಯ ವೈಚಾರಿಕತೆಗೆ ಮಾತ್ರ ಸೀಮಿತವಾಗಿದ್ದ ರಂಭಾಪುರಿ ಪೀಠವನ್ನು 1925ರಲ್ಲಿ ಅಂದಿನ ಜಗದ್ಗುರುಗಳು ಧಾರ್ಮಿಕ ಆಚರಣೆಯ ಜೊತೆಗೆ ಸಾಮಾಜಿಕ ಸೇವೆಯ ಆಯಾಮ ದೊರಕಿಸಿಕೊಟ್ಟರು ಎಂದು ಶೆಟ್ಟರ್ ನೆನಪಿಸಿಕೊಂಡರು.ವೇದಿಕೆಯಲ್ಲಿ ಸಚಿವರಾದ ಸಿ.ಟಿ. ರವಿ, ವಿ. ಸೋಮಣ್ಣ, ಸಂಸದ ಎಸ್. ಶಿವರಾಮಗೌಡ, ಶಾಸಕರಾದ ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಕರಡಿ ಸಂಗಣ್ಣ, ಮಾಜಿ ಸಚಿವೆ ಲೀಲಾದೇವಿ, ಮಾಜಿ ಸಂಸದೆ ತೇಜಸ್ವಿನಿ, ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ, ಲಲಿತಾರಾಣಿ, ತುಳಸಿ  ಮದ್ದಿನೇನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry