ಬುಧವಾರ, ಜೂನ್ 16, 2021
23 °C

ಮಹಿಳೆಯರಿಗೆ ಆದರ್ಶ ಶರಣಮ್ಮ

ಪ್ರಜಾವಾಣಿ ವಾರ್ತೆ/ –ಶ್ರೀನಿವಾಸ ಎಂ.ಜೆ Updated:

ಅಕ್ಷರ ಗಾತ್ರ : | |

ಗಂಗಾವತಿ: ವೃದ್ಧಾಪ್ಯದಲ್ಲಿ ತಂದೆ–ತಾಯಿಯರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ. ಆದರೆ ಇಲ್ಲೊಬ್ಬ ಮಹಾತಾಯಿಗೆ 65ರ ಆಸುಪಾಸು. ಈ ಇಳಿ ವಯಸ್ಸಿನಲ್ಲಿಯೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಜೀವನ ನಿರ್ವಹಣೆಗೆ ಆಯ್ದುಕೊಂಡ ವೃತ್ತಿ ರೊಟ್ಟಿ ತಟ್ಟುವಿಕೆ.ನಿತ್ಯ 60–70 ರೊಟ್ಟಿ ತಟ್ಟಿ, ಆ ರೊಟ್ಟಿ ಮಾರಾಟದಿಂದ ಬರುವ ₨180–200 ಹಣದಿಂದಲೇ ಸಂಸಾರ ಎಂಬ ನೌಕೆ ನಡೆಸುತ್ತಿದ್ದಾರೆ. ಜೊತೆಗೆ 35ರ ಪ್ರಾಯದ ತನ್ನ ಒಬ್ಬ ಬುದ್ಧಿಮಾಂದ್ಯ ಪುತ್ರನನ್ನು ಸಲಹುತ್ತಿದ್ದಾರೆ.ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ನೀರಾವರಿ ಇಲಾಖೆಯ ಸಿಬ್ಬಂದಿ ವಸತಿಗೃಹದ ಕಾಲೊನಿಯ ಅಂಚೆ ಇಲಾಖೆ ಸಮೀಪ ಇರುವ ಪುಟ್ಟದೊಂದು ಕೋಣೆಯಂತ ಮನೆಯಲ್ಲಿ ವಾಸಿಸುವ ಶರಣಮ್ಮ ನವರ ಜೀವನ ಗಾಥೆ ಇದು.

ರೊಟ್ಟಿ ಮಾರಾಟ ಮಾಡಿ ಜೀವನ ನಡೆಸುತ್ತಿರುವುದರಿಂದ ಸ್ಥಳೀಯರಿಗೆ ರೊಟ್ಟಿ ಶರಣಮ್ಮ ಎಂತಲೆ ಪರಿಚಿತರು.ಒಕ್ಕಲುತನ ಮಾಡುತ್ತಿದ್ದ ಪತಿ ಯಂಕಪ್ಪ 20 ವರ್ಷದ ಹಿಂದೆಯೆ ತೀರಿ ಹೋದರು. ಬಳಿಕ ಸಂಸಾರದ ನೊಗ ಹೊತ್ತ ಶರಣಮ್ಮ ಕೂಲಿ–ನಾಲಿ ಮಾಡಿ ಮೂವರು ಹೆಣ್ಣು ಮಕ್ಕಳ ಮದುವೆ ಮಾಡಿದ್ದಾರೆ.ಇಬ್ಬರು ಗಂಡು ಮಕ್ಕಳ ಪೈಕಿ ಒಬ್ಬ ಅನ್ನವರಸಿ ಬೇರೆಡೆ ಹೋದ ಬಳಿಕ ಇದ್ದೊಬ್ಬ ಬುದ್ಧಿಮಾಂದ್ಯ ಮಗನ ಜವಾಬ್ದಾರಿ ಹೊತ್ತುಕೊಂಡ ಶರಣಮ್ಮ, ಖಾನಾವಳಿ, ಹೋಟೆಲ್‌, ನೌಕರಸ್ಥರಿಗೆ ರೊಟ್ಟಿ ಮಾಡಿಕೊಟ್ಟು ಯಾರ ಹಂಗಿಲ್ಲದೇ ಜೀವನ ನಡೆಸುತ್ತಿದ್ದಾರೆ.ನೆಮ್ಮದಿಯ ಸೂರಿಲ್ಲ: ಇಳಿ ವಯಸ್ಸಿನ ಶರಣಮ್ಮ, ಮೊದಲೆಲ್ಲಾ ಹೊಲಕ್ಕೆ ತೆರಳಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ವಯಸ್ಸಾದಂತೆಲ್ಲಾ ಕೂಲಿ ಮಾಡಲು ಕಷ್ಟವಾದಾಗ ರೊಟ್ಟಿ ಕಾಯಕ ಆಯ್ದು ಕೊಂಡರು. ಪಡಿತರ ಚೀಟಿ ಸೇರಿದಂತೆ ಸರ್ಕಾರದ ಯಾವೊಂದು ಸೌಲಭ್ಯ ಶರಣಮ್ಮರಿಗೆ ಸಿಕ್ಕಿಲ್ಲ.ಆದರೆ ಇರಲು ಒಂದು ಸ್ವಂತದ ಮನೆಯಿಲ್ಲ. ನೌಕರ ಹನುಮಂತರಾವ್‌ ಎಂಬುವವರು ತಮಗೆ ನೀರಾವರಿ ಇಲಾಖೆ ನೀಡಿದ್ದ ವಸತಿ ಗೃಹದ ಒಂದು ಕೋಣೆಯನ್ನು ತಾಯಿ–ಮಗನಿಗೆ ವಾಸಿಸಲು ಬಿಟ್ಟು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.’ಶರಣಮ್ಮರ ಜೀವನ ಹತ್ತಿರದಿಂದ ಕಂಡು ಈಗಾಗಲೆ ವೀರಮಹೇಶ್ವರ ಬ್ಯಾಂಕಿನಿಂದ ಮೂರು ಬಾರಿ ತಲಾ ₨5 ಸಾವಿರದಂತೆ ಸಾಲ ಕೊಡಿಸಿದ್ದೆ. ಒಂದು ಪೈಸೆ ಬಾಕಿ ಇಲ್ಲದಂತೆ ಹಣ ಪಾವತಿಸಿ ಪ್ರಾಮಾಣಿಕತೆ ತೋರಿದ್ದಾರೆ’ ಎಂದು ಜೆಡಿಎಸ್‌ನ ಮಹಿಳಾ ನಾಯಕಿ ಶೈಲಜಾ ಹಿರೇಮಠ ಪ್ರಶಂಸಿಸಿದರು.ಸಮಾಜದ ಮೇಲಸ್ತರದಲ್ಲಿ ವಿಲಾಸಿ ಜೀವನ ನಡೆಸುವವರನ್ನು ಮಹಿಳಾ ದಿನಾಚರಣೆಯಲ್ಲಿ ಸನ್ಮಾನಿಸುವ ಸಂಘಟನೆಗಳು, ಇಳಿ ವಯಸ್ಸಿನಲ್ಲಿಯೂ ಛಲದಿಂದ ಆದರ್ಶ ಜೀವನ ನಡೆಸುವ ಶರಣಮ್ಮರಂತವರನ್ನು ಗುರುತಿಸಿದರೆ ಸಮಾಜದ ಇತರ ಮಹಿಳೆಯರಿಗೆ ಮಾದರಿಯಾದೀತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.